ಎಲೆಕ್ಟ್ರಿಕ್ ಬಸ್ ಬರ್ತಿದೆ ದಾರಿ ಬಿಡಿ…

01-03-2018
ಬೆಂಗಳೂರು: ಈಗಾಗಲೇ ವಾಯು ಮಾಲಿನ್ಯ ಹೆಚ್ಚಾಗಿರುವ ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಗೊಳ್ಳುವ ಕಾಲ ಹತ್ತಿರ ಬಂದಿದೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮದವರು ಗುತ್ತಿಗೆ ಆಧಾರದಡಿ ಬಸ್ ಪಡೆಯಲು ಆಹ್ವಾನಿಸಿದ್ದ ಜಾಗತಿಕ ಟೆಂಡರ್ ನಲ್ಲಿ ಪಾಲ್ಗೊಂಡಿದ್ದ 7 ಕಂಪನಿಗಳ ಪೈಕಿ ಅಂತಿಮವಾಗಿ ಹೈದರಾಬಾದ್ ಮೂಲದ ಗೋಲ್ಡ್ ಸ್ಟೋನ್ ಕಂಪನಿ ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಕೇಂದ್ರ ಸರ್ಕಾರದ ಫೇಮ್(ಫಾಸ್ಟರ್ ಅಡಾಪ್ಷನ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್) ಯೋಜನೆ ಅನುದಾನ ಬಳಸಿಕೊಂಡು ಗುತ್ತಿಗೆ ಆಧಾರದಡಿ 150 ಎಲೆಕ್ಟ್ರಿಕ್ ಬಸ್ ಪಡೆಯಲು ನಿರ್ಧರಿಸಿ ಬಿಎಂಟಿಸಿ ಕರೆ ನೀಡಿದ್ದ ಟೆಂಡರ್ ನಲ್ಲಿ ಟಾಟಾ, ಮಹೀಂದ್ರ, ಅಶೋಕ ಲೇಲ್ಯಾಂಡ್ ಸೇರಿದಂತೆ 7 ಕಂಪನಿಗಳು ಭಾಗವಹಿಸಿದ್ದವು. ಇವುಗಳಲ್ಲಿ, ಗೋಲ್ಡ್ ಸ್ಟೋನ್ ಕಂಪನಿ ಅತಿಕಡಿಮೆ ದರದಲ್ಲಿ 10 ವರ್ಷಗಳ ಅವಧಿಗೆ ಎಲೆಕ್ಟ್ರಿಕ್ ಬಸ್ ಗುತ್ತಿಗೆ ನೀಡಲು ಮುಂದೆ ಬಂದಿದೆ.
ಎಲ್ಲ ಪ್ರಕ್ರಿಯೆಗಳು ಸುಗಮವಾಗಿ ನಡೆದರೆ, ಮುಂದಿನ ಆರು ತಿಂಗಳಲ್ಲಿ ಎಲೆಕ್ಟ್ರಿಕ್ ಬಸ್'ಗಳು ನಗರದ ರಸ್ತೆಗಿಳಿಯಲಿವೆ. ಕೇಂದ್ರ ಸರ್ಕಾರ 150 ಎಲೆಕ್ಟ್ರಿಕ್ ಬಸ್ ಗಳಿಗೆ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ. ಆದರೆ, ಮೊದಲ ಹಂತದಲ್ಲಿ 40 ಎಲೆಕ್ಟ್ರಿಕ್ ಬಸ್ ಗಳಿಗೆ ಮಾತ್ರ ಅನುದಾನ ನೀಡುವುದಾಗಿ ಹೇಳಿದೆ. ಹೀಗಾಗಿ, ಬಿಎಂಟಿಸಿಯವರು ಮೊದಲಿಗೆ 40 ಬಸ್ ಗಳನ್ನು ಗುತ್ತಿಗೆ ಪಡೆಯಲು ನಿರ್ಧರಿಸಿದ್ದಾರೆ. ಗೋಲ್ಡ್ ಸ್ಟೋನ್ ಕಂಪನಿ 12 ಮೀಟರ್ ಉದ್ದವಿರುವ 41 ಸೀಟುಗಳ ಎಲೆಕ್ಟ್ರಿಕ್ ಬಸ್ ಗುತ್ತಿಗೆ ನೀಡಲಿದೆ. ಇದಕ್ಕೆ ಪ್ರತಿ ಕಿ.ಮೀಗೆ 37.5 ರೂಪಾಯಿ ಪಡೆಯಲಿದೆ. ಬಿಎಂಟಿಸಿ ಸಂಸ್ಥೆ ವಿದ್ಯುತ್ ಮತ್ತು ನಿರ್ವಾಹಕನ ವೆಚ್ಚ ಭರಿಸಬೇಕು. ಕಂಪನಿಗೆ ನೀಡುವ ಮೊತ್ತ ಹಾಗೂ ವಿದ್ಯುತ್ ಹಾಗೂ ನಿರ್ವಾಹಕನ ವೆಚ್ಚ ಸೇರಿ ಬಿಎಂಟಿಸಿಗೆ ಪ್ರತಿ ಕಿ.ಮೀ.ಗೆ 55ರಿಂದ 58 ರು. ವೆಚ್ಚವಾಗಲಿದೆ. ಫೇಮ್ ಯೋಜನೆಯಡಿ ಒಂದು ಬಸ್ ಗೆ ಸುಮಾರು 1 ಕೋಟಿ ರೂಪಾಯಿ ಕೇಂದ್ರ ಸರ್ಕಾರದ ಅನುದಾನ ಸಿಗುವುದರಿಂದ ಬಿಎಂಟಿಸಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ.
ಒಂದು ಕಮೆಂಟನ್ನು ಹಾಕಿ