ಬೆಂಗಳೂರು ಸೇರಿದಂತೆ ಹಲವೆಡೆ ನೀರಿನ ಸಮಸ್ಯೆ

Kannada News

03-05-2017

ಬೆಂಗಳೂರು : ಈ ವರ್ಷ ಜೂನ್ ಮಧ್ಯ ಭಾಗದವರೆಗೆ ಮುಂಗಾರು ಸಿಂಚನ ಅನುಮಾನವಾಗಿದ್ದು, ಇದೀಗ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ನೀರಿನ ಸಮಸ್ಯೆ ತಲೆದೋರುವುದು ನಿಶ್ಚಿತವಾಗಿದೆ.  
 
ಈಗಿನ ಜಲಾಶಯದ ಪರಿಸ್ಥಿತಿ ನೋಡಿದರೆ ಜೂನ್ ಮಧ್ಯ ಭಾಗದ ವರೆಗೆ ನೀರು ಪೂರೈಸುವುದು ಕಷ್ಟವಾಗಲಿದೆ. ಒಂದೊಮ್ಮೆ ಮುಂಗಾರು ಆರಂಭ ವಿಳಂಬವಾದರೆ ಬೆಂಗಳೂರು ಜಲಕ್ಷಾಮ ಎದುರಿಸುವುದು ನಿಶ್ಚಿತ. ನೀರಿನ ಮಿತ ಬಳಕೆಗೆ ಈಗಲೂ ಮನಸ್ಸು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಎದುರಾಗುವ ಗಂಡಾಂತರಕ್ಕೆ ನೀವು ಸಾಕ್ಷಿಯಾಗಬೇಕಾಗುತ್ತದೆ. ನೀರಿನ ಅಭಾವ ಎಲ್ಲಡೆ ಆಗಿದ್ದು, ಅಪಾಯ ಆಗದಂತೆ ಸಾರ್ವಜನಿಕರೇ ಎಚ್ಚರ ವಹಿಸಬೇಕೆಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೊಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದೆ.
 
ಕಾವೇರಿ ಕೊಳ್ಳದಲ್ಲಿ ಈಗ ಬೀಳುತ್ತಿರುವ ಮಳೆ ನೆಲದಲ್ಲಿ ಇಂಗುತ್ತಿದೆಯೆ ಹೊರತು ಜಲಾಶಯ ತಲುಪುತ್ತಿಲ್ಲ. ಕಾವೇರಿ ಕೊಳ್ಳದಲ್ಲಿ ಏ. 20ರ ಹೊತ್ತಿಗೆ ಇದ್ದ ನೀರಿನ ಪ್ರಮಾಣ 6.92 ಟಿಎಂಸಿ. ಬೇಸಿಗೆಯಲ್ಲಿ ಆವಿಯಾಗುವ ನೀರಿನ ಪ್ರಮಾಣ ಅಧಿಕವಾಗಿದೆ. 2016ರ ಏ. 20ರಂದು 12.08 ಟಿಎಂಸಿ ನೀರಿನ ಸಂಗ್ರಹ ಇತ್ತು. ಅಂದರೆ ಮುಂಗಾರು, ಹಿಂಗಾರು ಮಳೆ ಕೊರತೆಯಿಂದ ಈ ವರ್ಷ ನೀರಿನ ಸಂಗ್ರಹ ಪ್ರಮಾಣ ಅರ್ಧಕ್ಕೆ ಇಳಿದಿದೆ.
 
ಇರುವ 6.92 ಟಿಎಂಸಿ ನೀರನ್ನು ಎರಡು ಪ್ರಮುಖ ನಗರ, 40 ಪಟ್ಟಣ, 600ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳ ಜನ ಅವಲಂಬಿಸಬೇಕಾಗಿದೆ. ಹಾರಂಗಿಯಲ್ಲಿ 1.21, ಹೇಮಾವತಿಯಲ್ಲಿ 1.63, ಕೆಆರ್‍ಎಸ್‍ನಲ್ಲಿ 3.90 ಹಾಗೂ ಕಬಿನಿಯಲ್ಲಿ 0.18 ಟಿಎಂಸಿ ನೀರು ಸದ್ಯಕ್ಕೆ ಬಳಸಲು ಲಭ್ಯವಿದೆ. ಪ್ರತಿ ತಿಂಗಳಿಗೆ ಮೆಸೂರು ಜಿಲ್ಲೆ, ಮಂಡ್ಯ, ಬೆಂಗಳೂರಿಗೆ 3 ಟಿಎಂಸಿ ಕಾವೇರಿ ನೀರು ಬೇಕು. ಇದರಲ್ಲಿ ಬೆಂಗಳೂರಿನ ಪಾಲು ಪ್ರತಿ ತಿಂಗಳು 1.5 ಟಿಎಂಸಿ ನೀರು.
 
ಬೇಸಿಗೆಯಲ್ಲಿ ಪ್ರತಿ ತಿಂಗಳು ಅಂದಾಜು 1 ಟಿಎಂಸಿ ನೀರು ಆವಿಯಾಗಿ ಹೊಗುತ್ತದೆ. ಕೊನೆಗೆ ಕಾವೇರಿಯಲ್ಲಿ ಉಳಿಯುವುದು 3ರಿಂದ 4 ಟಿಎಂಸಿ ನೀರು ಮಾತ್ರ. ಜೂನ್ ಮೊದಲ ವಾರದವರೆಗೂ ಈ ನೀರನ್ನು ಕುಡಿಯುವುದಕ್ಕಾಗಿ ನಾವು ಉಪಯೊಗಿಸಬೇಕಾಗಿದೆ. ಹೀಗಾಗಿ ಈಗಿನಿಂದಲೇ ನೀರಿನ ಬಳಕೆಯಲ್ಲಿ ಬೆಂಗಳೂರಿನ ಜನತೆ ಎಚ್ಚೆತ್ತುಕೊಳ್ಳುವುದು ಹೆಚ್ಚಿನ ಅಗತ್ಯವಾಗಿದೆ ಎಂದು ಜಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ