‘ಸೀದಾ ರೂಪಾಯಿ ವಾಲಾ ಸರ್ಕಾರ’

Modi speech at farmers conference in davangere

27-02-2018

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರ “ ಸೀದಾ ರೂಪಾಯಿ ವಾಲಾ ಸರ್ಕಾರ” ವಾಗಿದ್ದು, ಇಂತಹ ಭ್ರಷ್ಟ ಸರ್ಕಾರ ಅಧಿಕಾರದಲ್ಲಿರಬೇಕೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ದಾವಣಗೆರೆಯಲ್ಲಿ ಆಯೋಜಿಸಿದ್ದ ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿರುವ ಎಲ್ಲಾ ಮಂತ್ರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಈಗಿನ ಸರ್ಕಾರದಲ್ಲಿರುವವರಿಗೆ ಬಂಡಲ್ ಬಂಡಲ್ ಹಣ ದೊರೆಯುತ್ತಿದೆ. ಈ ಹಣ ಅವರಿಗೆ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಟೆನ್ ಪರ್ಸೆಂಟ್ ಸರ್ಕಾರವಿದೆ. ಈ ಸರ್ಕಾರದಲ್ಲಿ ಹತ್ತು, ಹನ್ನೆರಡು, ಹದಿನೈದು ಪರ್ಸೆಂಟ್ ಕಮೀಷನ್ ಪಡೆಯುತ್ತಾರೆ. ಇವರಿಗೆ ಜನಪರ ಕಾಳಜಿ ಇಲ್ಲ ಎಂದರು. ರಾಜ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಸಂಪನ್ಮೂಲ ಒದಗಿಸುತ್ತಿದೆ. ಹಿಂದೆ ಯುಪಿಎ ಸರ್ಕಾರದಲ್ಲಿ 73 ಸಾವಿರ ಕೋಟಿ ರೂ. ದೊರೆಯುತ್ತಿತ್ತು. ಈಗಿನ ಸರ್ಕಾರ ಎರಡು ಲಕ್ಷ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಆದರೆ ಕೇಂದ್ರದ ನೆರವನ್ನು ರಾಜ್ಯ ಸರಿಯಾಗಿ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಸರ್ವ ಶಿಕ್ಷಣ, ನೀರಾವರಿ, ಸ್ಮಾರ್ಟ್ ಸಿಟಿ ಯೋಜನೆಗಳಿಗೆ ನೀಡಿದ ಹಣ ಹಾಗೆಯೇ ಕೊಳೆಯುತ್ತಿದೆ ಎಂದು ದೂರಿದರು.

ಇಡೀ ದೇಶದಲ್ಲೆಡೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಲು ಜನ ಕಾತುರರಾಗಿದ್ದಾರೆ. ಈ ಸರ್ಕಾರ ಜನಪರವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಪಾದಿಸಿದರು.

ರಾಜ್ಯದಲ್ಲಿ ಯಡಿಯೂರಪ್ಪ ಅವರು ಆರಂಭಿಸಿರುವ ಮುಷ್ಟಿ ಅಕ್ಕಿ ಅಭಿಯಾನಕ್ಕೆ ಯಶಸ್ಸು ಸಿಗಲಿ. ಇದರಿಂದ ನವ ಕರ್ನಾಟಕ ನಿರ್ಮಾಣ ಮಾಡಲು ಸಹಕಾರಿಯಾಗಲಿದೆ. ಈ ಅಭಿಯಾನ ಪ್ರತಿ ಹಳ್ಳಿ, ಗ್ರಾಮಗಳು, ಮನೆಗಳಿಗೆ ತೆರಳಬೇಕು. ಕೇವಲ ಬಿಜೆಪಿ ಕಾರ್ಯಕರ್ತರಷ್ಟೇ ಅಲ್ಲದೇ ರೈತರು ಕೂಡ ಈ ಅಭಿಯಾನದಲ್ಲಿ ಭಾಗಿಯಾಗಬೇಕು. 

ದೇಶದಲ್ಲಿ ಮಣ್ಣು ಪರೀಕ್ಷೆಗೆ ಆದ್ಯತೆ ನೀಡಲಾಗಿದೆ. ರೈತರ ಅಭ್ಯುದಯಕ್ಕೆ ವಿಶೇಷ ಒತ್ತು ನೀಡಿದ್ದು, ರೈತರಿಗೆ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಆದಾಯ ದ್ವಿಗುಣಗೊಳಿಸಲು ರೈತರ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಹಸಿರು ಅಭಿಯಾನ ರೂಪಿಸಲಾಗಿದೆ.

ಮುಂದಿನ ಐದು ವರ್ಷಗಳಲ್ಲಿ ದೇಶದ ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ರೈತರು ಕೃಷಿಯಲ್ಲಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಭಾರತದ ಹಣೆಬರಹ ಬದಲಾಗಬೇಕಾದರೆ ಮೊದಲು ರೈತರ ಪರಿಸ್ಥಿತಿ ಸುಧಾರಿಸಬೇಕು, ಕರ್ನಾಟಕದ ಹಣೆಬರಹ ಬದಲಿಸಲು ಗ್ರಾಮಗಳು ಹಾಗೂ ರೈತರು ಬದಲಾವಣೆಯಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದರು.


ಸಂಬಂಧಿತ ಟ್ಯಾಗ್ಗಳು

Narendra modi B. S. Yeddyurappa ಗ್ರಾಮ ಬದಲಾವಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ