‘ಹೋಬಳಿಗಳಲ್ಲಿ ಪದವಿ ಪೂರ್ವ ಕಾಲೇಜುಗಳಿಲ್ಲ’

There is no PU colleges in hobalis

21-02-2018

ಬೆಂಗಳೂರು: ರಾಜ್ಯದ 27 ಹೋಬಳಿಗಳಲ್ಲಿ ಪದವಿ ಪೂರ್ವ ಕಾಲೇಜುಗಳು ಇಲ್ಲ ಎಂದು ಒಪ್ಪಿಕೊಂಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಕಾಲೇಜು ಮಂಜೂರು ಮಾಡಲಾಗುವುದು ತುರ್ತು ಅಗತ್ಯಕಡೆ ಶಾಲಾ-ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಭರವಸೆ ನೀಡಿದರು.

ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಪ್ರಶ್ನೆ ಕೇಳಿ ತಮ್ಮ ಯಶವಂತಪುರ ಕ್ಷೇತ್ರದ ಕೆಂಗೇರಿ ಹಾಗೂ ತಾವರೆಕೆರೆಗಳಲ್ಲಿ ಪದವಿ ಪೂರ್ವ ಕಾಲೇಜುಗಳಿಲ್ಲ. ಪ್ರಭಾವಿಗಳಿಗೆ ಮಾತ್ರ ಕಾಲೇಜು ಮಂಜೂರು ಮಾಡುತ್ತೀರಾ ನಮ್ಮಂಥ  ಸಾಮಾನ್ಯ ಶಾಸಕರ ಕ್ಷೇತ್ರಕ್ಕೂ ಕಾಲೇಜು ಮಂಜೂರು ಮಾಡಿ ಎಂದು ಮನವಿ ಮಾಡಿದರು.

ಸಭಾಧ್ಯಕ್ಷ ಕೋಳಿವಾಡ ಅವರು, ಈ ಸರ್ಕಾರದಲ್ಲಿ ಸೋಮಶೇಖರ್ ಗಿಂತ ಪ್ರಭಾವಿ ಶಾಸಕರಿದ್ದಾರೆಯೇ ಎಂದು ಹಾಸ್ಯ ಚಟಾಕಿ ಹಾರಿಸಿದರು. ಸರ್ಕಾರಿ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಅವರು, ಸಾಮಾನ್ಯ ಮತ್ತು ಪ್ರಭಾವಿ ಶಾಸಕರ ನಡುವಿನ ವ್ಯತ್ಯಾಸವೇನು ಎಂದು ಛೇಡಿಸಿದರು.

ಲಘು ಹಾಸ್ಯದ ನಂತರ ಉತ್ತರ ನೀಡಿದ ಸಚಿವ ತನ್ವೀರ್ ಸೇಠ್ ಅವರು, ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಕಾಲೇಜುಗಳನ್ನು ಮಂಜೂರು ಮಾಡಲಾಗುತ್ತದೆ. ಎಲ್ಲೆಲ್ಲಿ ಕಾಲೇಜುಗಳ ಅಗತ್ಯವಿದೆ. ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಎಂಬ ಸಮೀಕ್ಷೆ ಈಗಾಗಲೇ ನಡೆದಿದೆ. ಕೆಂಗೇರಿಯಲ್ಲಿ ಖಾಸಗಿ ಮತ್ತು ಅನುದಾನಿತ ಕಾಲೇಜುಗಳಿವೆ. ತಾವರೆಕೆರೆಯಲ್ಲಿ ಅನುದಾನಿತ ಕಾಲೇಜುಗಳಿವೆ. ಸಮೀಪದ ದೊಡ್ಡೇರಿಯಲ್ಲಿ ಸರ್ಕಾರಿ ಕಾಲೇಜು ಇದ್ದು, 37 ಮಂದಿ ವಿದ್ಯಾರ್ಥಿಗಳಿದ್ದಾರೆ. ಶಾಲೆಗಳ ಸಂಖ್ಯೆ ಹಾಗೂ ಮಕ್ಕಳ ಪ್ರಮಾಣ ಆಧರಿಸಿ ಮುಂದಿನ ದಿನಗಳಲ್ಲಿ ಕೆಂಗೇರಿ ಮತ್ತು ತಾವರೆಕೆರೆಗೆ ಕಾಲೇಜುಗಳನ್ನು ಮಂಜೂರು ಮಾಡುವುದಾಗಿ ಹೇಳಿದರು. ಜತೆಗೆ ಒಂದರಿಂದ 12ನೆ ತರಗತಿಯವರೆಗೂ ಎಲ್ಲಾ ರೀತಿಯ ಶಾಲಾ-ಕಾಲೇಜುಗಳನ್ನು ಒಂದೇ ಸೂರಿನಡಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ