ಆರ್ಥಿಕ ಸಮಾನತೆ ಕಾರ್ಮಿಕರ ಘನತೆಯ ಮೂಲಭೂತ ಅಗತ್ಯ : ಚಿಂತಕ ಡಾ. ಕೆ. ಮರಳುಸಿದ್ದಪ್ಪ

Kannada News

01-05-2017 281

ಬೆಂಗಳೂರು : ಆರ್ಥಿಕ ಸಮಾನತೆ ಕಾರ್ಮಿಕರ ಘನತೆಯ ಮೂಲಭೂತ ಅಗತ್ಯ ಎಂದು ಸಾಹಿತಿ ಹಾಗೂ ಚಿಂತಕ ಡಾ. ಕೆ. ಮರಳುಸಿದ್ದಪ್ಪ ಅಭಿಪ್ರಾಯಪಟ್ಟರು.

ನಗರದ ಕಲಾ ಕಾಲೇಜು ಮೈದಾನದಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ವತಿಯಿಂದ ಕಾರ್ಮಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿಂದು ಮಾತನಾಡಿದರು.

ದುಡಿಯುವ ವರ್ಗದ ಹಕ್ಕುಗಳು ಇಂದು ದಮನಗೊಳ್ಳುತ್ತಿವೆ. ಕಾರ್ಪೋರೇಟ್ ವಲಯಗಳಿಂದ ರಾಜಕೀಯ ಹಾಗೂ ಮಾಧ್ಯಮ ಕ್ಷೇತ್ರಗಳು ನಿಯಂತ್ರಿಸಲ್ಪಡುತ್ತಿವೆ. ದುಡಿಯುವ ವರ್ಗದ ಜನರ ಒಗ್ಗಟ್ಟನ್ನು ಹೊಡೆದು ಆಳುವ ನೀತಿ ಅನುಸರಿಸಲಾಗುತ್ತಿದೆ. ಕಾರಣ ಈ ಎಲ್ಲ ತಾರತಮ್ಯಗಳ ವಿರುದ್ಧ ಕಾರ್ಮಿಕರು ಒಗ್ಗಟ್ಟಾಗಿ ಹೋರಾಡಬೇಕಾದ ಅನಿವಾರ್ಯವಿದೆ ಎಂದರು.

ಕಾರ್ಮಿಕರ ಕೈ ಕೆಸರಾದರೆ ಬಾಯಿ ಮೊಸರಾಗುವ ಪರಿಸ್ಥಿತಿ ಇಂದು ದೂರವಾಗಿದೆ. ಮಾತಿನ ಮೂಲಕ ಕಾರ್ಮಿಕರ ಕುರಿತಂತೆ ಕರುಣೆ ವ್ಯಕ್ತವಾಗುತ್ತಿದಿಯೇ ವಿನಃ ಪ್ರಾಮಾಣಿಕವಾಗಿ ಕಾರ್ಮಿಕರ ಹಕ್ಕುಗಳ ಸಂರಕ್ಷಣೆಗೆ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಕಾರ್ಮಿಕರ ಹಕ್ಕುಗಳನ್ನು ಸಂರಕ್ಷಿಸಿಕೊಳ್ಳಲು ಸಂಘಟಿತ ಹೋರಾಟದ ಅಗತ್ಯವಿದೆ ಎಂದರು.

ಪ್ರಸ್ತುತ ಕಾಯಕ ನರಕವಾಗುತ್ತಿದೆ. ಮೂಲಭೂತ ವಿಷಯಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಠ ತೀರ್ಮಾನ ಆಗಿಲ್ಲ. ಸಾರ್ವಜನಿಕರು ಅನ್ಯಾಯವನ್ನು ವಿರೋಧಿಸುವುದನ್ನೇ ಕೈಬಿಟ್ಟಿದ್ದಾರೆ. ಒಂದೇ ತರಹದ ಕೆಲಸ ಮಾಡುತ್ತಿದ್ದರೂ ಸಹ ಅನೇಕ ತಾರತಮ್ಯಗಳನ್ನು, ಅನ್ಯಾಯಗಳನ್ನು ಎದುರಿಸಬೇಕಾಗಿದೆ ಎಂದರು.

ವಾಕ್ ಸ್ವಾತಂತ್ರ್ಯ, ಸಂಘಟನಾ ಸ್ವಾತಂತ್ರ್ಯ, ಕಾರ್ಮಿಕರ ಮೂಲಭೂತ ಹಕ್ಕಾಗಿದೆ. ಆರೋಗ್ಯ, ಶಿಕ್ಷಣ, ಆಹಾರ ಭದ್ರತೆ ಕುರಿತಂತೆ ಲಾಭ-ನಷ್ಟದ ಪ್ರಶ್ನೆ ಉದ್ಭವವಾಗತೊಡಗಿದೆ. ಇಂತಹ ಅಪಾಯಕಾರಿ ನೀತಿಗಳು ಕಾರ್ಮಿಕರನ್ನು ದಮನಗೊಳಿಸುತ್ತಿವೆ. 80 ರ ದಶಕದ ನಂತರ ಇಂತಹ ವ್ಯವಹಾರಗಳು ಹಾಗೂ ಅಭಿವೃದ್ಧಿ ಮಂತ್ರ ನೇರವಾಗಿ ದುಡಿಯುವ ವರ್ಗಕ್ಕೆ ಪೆಟ್ಟು ನೀಡುತ್ತಿವೆ ಎಂದು ಹೇಳಿದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ