ಮಹತ್ವದ ವಿಧೇಯಕಗಳ ಅಂಗೀಕಾರ

Important Bills discussed and Accepted

21-02-2018

ಬೆಂಗಳೂರು: ಸರ್ಕಾರದ ಸವಲತ್ತುಗಳು, ಸಬ್ಸಿಡಿ ಹಾಗೂ ಇತರ ಸೇವೆಗಳನ್ನು ಪಡೆಯಲು ಆಧಾರ್ ಕಡ್ಡಾಯಗೊಳಿಸುವ ಕರ್ನಾಟಕ ಆಧಾರ್ ವಿಧೇಯಕ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ವಿ.ವಿ. ಹಾಗೂ ಖ್ವಾಜಾ ಬಂದೇ ನವಾಜ್ ವಿ.ವಿ.ಸ್ಥಾಪನೆಗೆ ಅವಕಾಶ ನೀಡುವ ಮಸೂದೆಗಳಿಗೆ ವಿಧಾನಸಭೆ ಅಂಗೀಕಾರ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಆಧಾರ್ ವಿಧೇಯಕ ಮಂಡಿಸಿದ್ದರು. ಇಂದು ವಿಧೇಯಕದ ಮೇಲೆ ಚರ್ಚೆ ಬಳಿಕ ಧ್ವನಿಮತದಿಂದ ಅಂಗೀಕರಿಸಲಾಯಿತು.

ಮುಖ್ಯಮಂತ್ರಿಯವರ ಅನುಪಸ್ಥಿತಿಯಲ್ಲಿ ಈ ವಿಧೇಯಕದ ಬಗ್ಗೆ ವಿವರ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್, ಸರ್ಕಾರದ ಸೌಲಭ್ಯ, ಸೇವೆಗಳು ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಆಧಾರ್ ಬಳಕೆ ಕಡ್ಡಾಯ ಮಾಡಲು ವಿಧೇಯಕ ಜಾರಿ ಮಾಡಲಾಗುತ್ತಿದೆ ಎಂದರು.

ಈಗಾಗಲೇ ಬಹುತೇಕ ಎಲ್ಲ ಸೇವೆಗಳಿಗೂ ಆಧಾರ್ ಕಡ್ಡಾಯಗೊಳಿಸಲಾಗಿದೆ,  ಹೀಗಿರುವಾಗ ಇದಕ್ಕೆ ಮಸೂದೆ ಮಂಡಿಸುವ ಅಗತ್ಯವಾದರೂ ಏನು ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರಶ್ನಿಸಿದರು. ಇದಕ್ಕೆ, ಬಿಜೆಪಿಯ ಸುರೇಶ್ ಕುಮಾರ್ ಕೂಡ ದನಿಗೂಡಿಸಿದರು.  ದಕ್ಷಿಣ ಕನ್ನಡದ ಉಜಿರೆಯಲ್ಲಿ ಧರ್ಮಸ್ಥಳ ಶಿಕ್ಷಣ ಸಂಸ್ಥೆಯವರು ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸುತ್ತಿದ್ದು, ಇದಕ್ಕೆ ಅವಕಾಶ ನೀಡಬೇಕೆಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಮಸೂದೆ ಮಂಡಿಸಿದರು.
ರಾಜ್ಯದಲ್ಲಿ ಉನ್ನತ ಶಿಕ್ಷಣದ ಬೆಳವಣಿಗೆಗೆ ಹಲವು ಖಾಸಗಿ ವಿವಿಗಳನ್ನು ಸ್ಥಾಪಿಸುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರದ ಕಾಯ್ದೆ ಅವಕಾಶ ನೀಡಿದೆ. ರಾಜ್ಯದಲ್ಲಿ 22 ಖಾಸಗಿ ವಿವಿಗಳಿವೆ. ಇಡೀ ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ಸಚಿವ ರಾಯರೆಡ್ಡಿ ತಿಳಿಸಿದರು. ಧರ್ಮಸ್ಥಳ ಶಿಕ್ಷಣ ಸಂಸ್ಥೆಯವರು ಸ್ಥಾಪಿಸಲು ಮುಂದಾಗಿರುವ ವಿವಿಯಲ್ಲಿ ವಿಜ್ಞಾನ, ಭಾಷೆ, ಗಣಕ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಭಾಷೆಗಳು, ಎಂಜಿನಿಯರಿಂಗ್, ತಾಂತ್ರಿಕ ಕೋರ್ಸ್  ಮುಂತಾದ ಕೋರ್ಸ್ಗಳು ಇರುತ್ತವೆ ಎಂದರು.

ಇದೇ ರೀತಿ ಖ್ವಾಜಾ ಬಂದೇ ನವಾಜ್ ವಿ.ವಿ.ಯಲ್ಲಿ ವಿಜ್ಞಾನ, ತಂತ್ರಜ್ಞಾನ, ಮಾನವಿಕ ವಿಷಯಗಳು, ಕಾನೂನು, ವೈದ್ಯಕೀಯ, ಔಷಧ ಶಾಸ್ತ್ರ, ಮಾನವ ಕಲ್ಯಾಣಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಕಲಿಸುವ ಬೋಧನೆ, ತರಬೇತಿ, ಸಂಶೋಧನೆಗೆ ಸಂಬಂಧಿಸಿದಂತೆ ಶಿಕ್ಷಣ ನೀಡಲಾಗುತ್ತದೆ. ಇವುಗಳಿಗೆ ಅನುಮತಿ ನೀಡಬೇಕೆಂದು ಸಚಿವರು ಕೋರಿದರು.

ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಈ ಹಿಂದೆ ನೀವು ಪ್ರತಿಪಕ್ಷದಲ್ಲಿದ್ದಾಗ ಕಾಂಗ್ರೆಸ್ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದಿರಿ, ಆಗೊಂದು ನಿಲುವು, ಈಗೊಂದು ನಿಲುವು ಹೇಗೆ ಎಂದು ಪ್ರಶ್ನಿಸಿದರು. ಆದರೂ, ಈ ವಿವಿಗಳಿಗೆ ನಮ್ಮ ವಿರೋಧವಿಲ್ಲ ಎಂದರು. ನಂತರ ಧ್ವನಿಮತದಿಂದ ವಿಧೇಯಕ ಅನುಮೋದನೆಗೊಂಡಿತು.


ಸಂಬಂಧಿತ ಟ್ಯಾಗ್ಗಳು

Jagadish Shettar Bande Nawaz ಧ್ವನಿಮತ ವಿಧೇಯಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ