ಪ್ರತಿಭಾನ್ವಿತರಿಗೆ ಅನ್ಯಾಯ: ತನಿಖೆಗೆ ಆಗ್ರಹ

Assistant Professor Appointment and Corruption

20-02-2018

ಬೆಂಗಳೂರು:  ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನಡೆದ ಸಹಾಯಕ ಪ್ರಾಧ್ಯಾಪಕರು ಹಾಗೂ ಸಹ ಪ್ರಾಧ್ಯಾಪಕರುಗಳ ನೇಮಕಾತಿಯಲ್ಲಿ ಪ್ರತಿಭಾನ್ವಿತರಿಗೆ ಅನ್ಯಾಯವಾಗಿರುವ ಬಗ್ಗೆ ಉನ್ನತ ಅಧಿಕಾರಿಯೊಬ್ಬರಿಂದ ತನಿಖೆ ನಡೆಸುವುದಾಗಿ ಕೃಷಿ ಸಚಿವ ಕೃಷ್ಣ ಬೈರೇಗೌಡ ವಿಧಾನಪರಿಷತ್ತಿನಲ್ಲಿಂದು ತಿಳಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಆರ್.ಚೌಡರೆಡ್ಡಿ ತೂಪಲ್ಲಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಹಾಯಕ ಪ್ರಾಧ್ಯಾಪಕರು ಹಾಗೂ ಸಹ ಪ್ರಾಧ್ಯಾಪಕರುಗಳ ನೇಮಕಾತಿಯಲ್ಲಿ ಅಕ್ರಮ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸರ್ಕಾರದ ಗಮನಕ್ಕೂ ಬಂದಿದೆ. ಈಗಾಗಲೇ ಕೆಲವು ಅಭ್ಯರ್ಥಿಗಳು ತಮಗೆ ದೂರು ಸಲ್ಲಿಸಿದ್ದಾರೆ. ಇನ್ನಷ್ಟು ದೂರುಗಳನ್ನು ಪಡೆದು ಅನ್ಯಾಯವಾಗಿದ್ದರೆ, ಕ್ರಮ ಕೈಗೊಳ್ಳಲಿದ್ದೇನೆ ಎಲ್ಲಾ ಅಭ್ಯರ್ಥಿಗಳ ಸ್ಕೋರ್ ಕಾರ್ಡ್‍ಗಳನ್ನು ನೀಡುವಂತೆ ಸೂಚಿಸಲಾಗಿದೆ. ಆರ್.ಟಿ.ಐ.ಮೂಲಕ ಪಡೆದು ಸಲ್ಲಿಸುವುದಾಗಿ ತಿಳಿಸಿದ್ದಾರೆ ಎಂದರು.

ಅಭ್ಯರ್ಥಿಗಳು ಆರ್.ಟಿ.ಐ. ಮೂಲಕ ಸ್ಕೋರ್ ಕಾರ್ಡ್‍ಗಳನ್ನು ಪಡೆಯುವುದಕ್ಕೂ ಮೊದಲೇ ಪ್ರಕಟಿಸುವಂತೆ ಕೃಷಿ ವಿಶ್ವವಿದ್ಯಾಲಯಕ್ಕೂ ನಿರ್ದೇಶನ ನೀಡಲಾಗಿದೆ ಎಂದರು. ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು ಈ ನೇಮಕಾತಿ ಆದೇಶವನ್ನೇ ರದ್ದುಪಡಿಸುವಂತೆ ಪಟ್ಟುಹಿಡಿದರು.

ಇದಕ್ಕೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಎಲ್ಲಾ ವಿಶ್ವವಿದ್ಯಾನಿಲಯಗಳಂತೆ ಸ್ವಾಯತ್ತ ಸಂಸ್ಥೆಯಾಗಿದೆ. ಹಾಗಾಗಿ ವಿಶ್ವವಿದ್ಯಾನಿಲಯ ಮಾಡಿದ ನೇಮಕಾತಿಗಳನ್ನು ತಡೆಹಿಡಿಯುವುದಾಗಲಿ, ರದ್ದುಪಡಿಸುವುದಾಗಲಿ ಸರ್ಕಾರಕ್ಕೆ ಸಂಬಂಧಪಟ್ಟದ್ದಲ್ಲ. ಆದರೂ ಕಾನೂನು ಚೌಕಟ್ಟಿನಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು. ಅಧಿಕಾರದ ಅವಧಿ 6 ತಿಂಗಳು ಇದ್ದರೂ ಈ ನೇಮಕಾತಿಗಳು ನಡೆದಿದ್ದು, ಕೋಟ್ಯಾಂತರ ರೂ. ಅವ್ಯವಹಾರವಾಗಿದೆ ಎಂದು ಈಶ್ವರಪ್ಪ ಆರೋಪಿಸಿದಾಗ, ಆಗ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು, ರಾಜ್ಯಪಾಲರ ಸೂಚನೆ ಆಧರಿಸಿ ವಿಶ್ವವಿದ್ಯಾನಿಲಯದ ಕುಲಪತಿಗಳು ನೇಮಕ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.


ಸಂಬಂಧಿತ ಟ್ಯಾಗ್ಗಳು

Krishna Byre Gowda RTI ವಿಶ್ವವಿದ್ಯಾನಿಲಯ ನೇಮಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ