ಕುದಿಯುತ್ತಿದ್ದ ಭೂಮಿಗೆ ಬಿದ್ದು ಬಾಲಕ ಸಾವನ್ನಪ್ಪಿದ್ದ ಪ್ರಕರಣ ಕುರಿತು ತಜ್ಞರ ಸಮಿತಿಯಿಂದ ವರದಿ

Kannada News

01-05-2017

ಮೈಸೂರು: ಮೈಸೂರಿನಲ್ಲಿ ಕುದಿಯುತ್ತಿದ್ದ ಭೂಮಿಗೆ ಬಿದ್ದು ಬಾಲಕ ಸಾವನ್ನಪ್ಪಿದ್ದ ಪ್ರಕರಣದ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ತಜ್ಞರ ಸಮಿತಿಯಿಂದ ಮಧ್ಯಂತರ ವರದಿ ಸಲ್ಲಿಕೆ.
ಮೈಸೂರು ತಾಲ್ಲೂಕು ಶಾದನಹಳ್ಳಿ ಸಮೀಪ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡು ಬಾಲಕ ಸಾವನ್ನಪ್ಪಿದ್ದ ಸ್ಥಳದಲ್ಲಿ ಬಾಯ್ಲರ್ ಬೂದಿ ಹಾಗೂ ಮರಳು ಪತ್ತೆಯಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ತಜ್ಞರ ಸಮಿತಿ ವರದಿ ನೀಡಿದೆ.
ಬಿ.ಎಸ್‌.ಜೈಪ್ರಕಾಶ್ ನೇತೃತ್ವದ 10 ಸದಸ್ಯರ ಸಮಿತಿ ಜಿಲ್ಲಾಧಿಕಾರಿಗೆ ಮಧ್ಯಂತರ ವರದಿ ಸಲ್ಲಿಸಿದ್ದು ಇದೊಂದು ಮಾನವ ಕೃತ್ಯ ಎಂದು ಅಭಿಪ್ರಾಯಪಟ್ಟಿದೆ. ಆದರೆ ಪತ್ತೆಯಾದ ಬೂದಿ ರಾಸಾಯನಿಕ ತ್ಯಾಜ್ಯವೇ ಎಂಬುದನ್ನು ಸ್ಪಷ್ಟಪಡಿಸಿಲ್ಲ.
110ರಿಂದ 140 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಕಾಣಿಸಿಕೊಂಡ ಸ್ಥಳದ ಸುತ್ತ ಯಾವುದೇ ರಾಸಾಯನಿಕ ವಸ್ತುವಿನ ಘಾಟು ಪತ್ತೆಯಾಗಿಲ್ಲ. ವರುಣಾ ನಾಲೆಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಬೆಳೆದಿರುವ ಪೊದೆಗಳಿಗೆ ಬಿದ್ದ ಬೆಂಕಿ ತಾಪಮಾನ ಏರಿಕೆಗೆ ಕಾರಣವಾಗಿದೆ. 
ಇದು ಬಾಯ್ಲರ್ ಬೂದಿಗೆ ವಿಸ್ತರಿಸಿರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಿದೆ.
ಬೆಂಕಿ ಕಾಣಿಸಿಕೊಂಡ ಸ್ಥಳದ ಸುತ್ತಲಿನ ಪ್ರದೇಶದಲ್ಲಿ ಇದ್ದಿಲು ತಯಾರಿಸಲಾಗಿದೆ. ಇದಕ್ಕೆ ತೆಂಗಿನ ಕಾಯಿ ಚಿಪ್ಪು ಬಳಕೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ ಎಂದು ತಜ್ಞರ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.
ಈ ಘಟನೆಗೆ ಮಾನವ ನಿರ್ಮಿತ ಬೆಂಕಿ ಕಾರಣ ಎಂದು ತಜ್ಞರ ತಂಡ ಅಭಿಪ್ರಾಯಪಟ್ಟಿದೆ.
ಅಲ್ಲದೇ ಸಮಿತಿಯಿಂದ ಅಂತಿಮ ವರದಿ ಸಿದ್ದಗೊಳ್ಳುವವರೆಗೂ ಘಟನಾ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಬೇಕು.
ಮುಂದಿನ ತನಿಖೆಗೆ ಅನುಕೂಲವಾಗುವಂತೆ ಮೃತ ಬಾಲಕನ ಶವ ಪರೀಕ್ಷೆ ವರದಿ ಸಲ್ಲಿಸಬೇಕು.
ಜೊತೆಗೆ ಪೊಲೀಸರು, ಜಮೀನು ಮಾಲೀಕನನ್ನು ವಿಚಾರಣೆ ನಡೆಸಿರುವ ವರದಿಯನ್ನು ಸಮಿತಿಗೆ ಸಲ್ಲಿಸಬೇಕೆಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ