ಅಧಿವೇಶನ ಮೂರು ದಿನ ಮೊಟಕು

session time shorted by 3 days

20-02-2018

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯಕಲಾಪವನ್ನು ಮೂರು ದಿನಗಳ ಕಾಲ ಮೊಟಕು ಮಾಡಲಾಗಿದೆ. ಫೆಬ್ರವರಿ 23ಕ್ಕೆ ಅಧಿವೇಶನ ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿದೆ. ವಿಧಾನಮಂಡಲ ಅಧಿವೇಶನದ ಕಲಾಪದ ದಿನಗಳು ಹೆಚ್ಚಾಗಬೇಕೆಂಬ ಕೂಗು ಬಹಳ ಹಿಂದಿನಿಂದಲೂ ಇದೆ. ಪ್ರತಿವರ್ಷ 60 ದಿನಗಳ ಕಾಲ ಅಧಿವೇಶನ ನಡೆಯಬೇಕೆಂದು ಶಾಸನ ಸಹ ಮಾಡಲಾಗಿದೆ. ಆದರೆ ಬಹುತೇಕ ವರ್ಷ ಕಲಾಪ 30 ರಿಂದ 45 ದಿನಗಳಿಗೆ ಮಾತ್ರ ಸೀಮಿತವಾಗುತ್ತಿದೆ.

ಆದರೆ ಹಾಲಿ ಸರ್ಕಾರದ ಕೊನೆಯ ಅಧಿವೇಶನದಲ್ಲೂ ಮೂರು ದಿನಗಳ ಕಲಾಪವನ್ನು ಮೊಟಕು ಮಾಡಲಾಗಿದೆ. ಸಂಸದೀಯ ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಇದು ಕಪ್ಪು ಚುಕ್ಕೆಯಾಗಿದೆ. ಇಂದು ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಅಧಿವೇಶವನ್ನು ಈ ತಿಂಗಳ 23ಕ್ಕೆ ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಹುತೇಕ ಶಾಸಕರು ಮತದಾರರತ್ತ ಚಿತ್ತ ಹರಿಸಿದ್ದು ಈ ಹಿನ್ನೆಲೆಯಲ್ಲಿ ಫೆಬ್ರವರಿ 28 ರವರೆಗೆ ಸದನ ನಡೆಸುವುದು ಕಷ್ಟ ಎಂಬ ಅಭಿಪ್ರಾಯಕ್ಕೆ ಬರಲಾಯಿತು. ಸದನಕ್ಕೆ ಬಹುತೇಕ ಶಾಸಕರು ಬರುತ್ತಲೆ ಇಲ್ಲ. ಹೀಗಾಗಿ ಸದನವನ್ನು ನಿಗದಿತ ಅವಧಿಯಲ್ಲಿ ಆರಂಭಿಸುವ ಬದಲು ಕೋರಂಗಾಗಿ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಹೀಗಾಗಿ ಅವಧಿಗೂ ಮುನ್ನ ಅಧಿವೇಶನ ಮುಗಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಯಿತು.

ಸಭಾಧ್ಯಕ್ಷರ ಪೀಠದಲ್ಲಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಕುರಿತ ನಿರ್ಧಾರವನ್ನು ಓದಿದರು. ನಾಳೆ ಮುಖ್ಯಮಂತ್ರಿಯವರು ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಲಿದ್ದು ಫೆಬ್ರವರಿ 23 ರಂದು ಲೇಖಾನುದಾನ ಕೋರಿ ಮಂಡಿಸಿರುವ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಲಿದ್ದಾರೆ. ಇದರ ನಡುವೆ ವಿವಿಧ ವಿಧೇಯಕಗಳನ್ನು ಮಂಡಿಸಲಾಗುವುದಲ್ಲದೆ ಫೆಬ್ರವರಿ 23ರಂದು ಬಜೆಟ್‍ಗೆ ಲೇಖಾನುದಾನ ಪಡೆದ ನಂತರ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ನಿರ್ಧಾರ ಮಾಡಲಾಗಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

vidhana sabha session ರಾಜ್ಯಪಾಲರ ಬಜೆಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ