ಉಭಯ ಸದನಗಳಲ್ಲಿ ಪುಟ್ಟಣ್ಣಯ್ಯಗೆ ಶ್ರದ್ಧಾಂಜಲಿ

1 minute silence in both legislative assemblies

19-02-2018

ಬೆಂಗಳೂರು: ಮಂಡ್ಯದಲ್ಲಿ ನಿನ್ನೆ ನಿಧನ ಹೊಂದಿದ ಕರ್ನಾಟಕ ಸರ್ವೋದಯ ಪಕ್ಷದ ಶಾಸಕ ಹಾಗೂ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಗೌರವಾರ್ಥ ವಿಧಾನಮಂಡಲದ ಉಭಯ ಸದನಗಳಲ್ಲಿ  ಇಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೃತರ ಗೌರವಾರ್ಥ ಎರಡೂ ಸದನಗಳಲ್ಲಿ 1 ನಿಮಿಷ ಮೌನ ಆಚರಿಸಲಾಯಿತು. ಬಳಿಕ ಉಭಯ ಸದನಗಳ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ವಿಧಾನಸಭೆಯಲ್ಲಿ ಇಂದು ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ್ ಸಂತಾಪ ನಿರ್ಣಯ ಮಂಡಿಸಿದರು. ಇದಕ್ಕೆ ಕಾನೂನು ಸಚಿವ ಜಯಚಂದ್ರ ಧ್ವನಿಗೂಡಿಸಿ ರೈತರಿಗೆ ಸದಾಕಾಲ ನ್ಯಾಯ ಸಿಗಬೇಕು ಎಂಬುದು ಅವರ ಹೋರಾಟವಾಗಿತ್ತು ಎಂದರು. ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ರೈತರ ವಿಚಾರದಲ್ಲಿ ಪುಟ್ಟಣ್ಣಯ್ಯ ಅವರದ್ದು ನಿಜಕ್ಕೂ ಗಟ್ಟಿ ಧ್ವನಿ, ಕಾಳಜಿಯ ಧ್ವನಿ ಎಂದು ಗುಣಗಾನ ಮಾಡಿದರು.

ಪರಿಷತ್ತಿನಲ್ಲಿ ಸಭಾಪತಿ ಶಂಕರಮೂರ್ತಿ ಸಂತಾಪ ನಿರ್ಣಯ ಮಂಡಿಸಿದರು. ಸಭಾನಾಯಕ ಎಂ.ಆರ್. ಸೀತಾರಾಮ್ ಮತ್ತು ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ರೈತರ ವಿಚಾರದಲ್ಲಿ ಪುಟ್ಟಣ್ಣಯ್ಯನವರ ಕಾಳಜಿಯನ್ನು ಯಾರೊಬ್ಬರೂ ಪ್ರಶ್ನೆ ಮಾಡುವಂತಿಲ್ಲ ಎಂದರು. ಇದಕ್ಕೂ ಮುನ್ನ ಮುಖ್ಯಮಂತ್ರಿ  ಸಿದ್ದರಾಮಯ್ಯ ಮತ್ತು ಲೋಕೋಪಯೋಗಿ  ಸಚಿವ ಹೆಚ್.ಸಿ. ಮಹದೇವಪ್ಪ್ಪ ಪಾಂಡವಪುರ ತಾಲೂಕಿನ ಕೇತನಹಳ್ಳಿ ಗ್ರ್ರಾಮಕ್ಕೆ ಇಂದು ತೆರಳಿ, ಆಗಲಿದ ಶಾಸಕ ಪುಟ್ಟಣ್ಣಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಕುಟುಂಬದ ಸದಸ್ಯರಿಗೆ ಸ್ವಾಂತನ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪುಟ್ಟಣ್ಣಯ್ಯ ಅವರು ರೈತರ ವಿಚಾರದಲ್ಲಿ ಜನಪರ ಕಾಳಜಿ ಹೊಂದಿದ್ದ ನಾಯಕರಾಗಿದ್ದರು. ಅವರನ್ನು ಕಳೆದುಕೊಂಡಿರುವುದು ಭಾರಿ ದುಃಖದ ಸಂಗತಿ ಎಂದರು. ರೈತ ಹೋರಾಟದ ಮೂಲಕ ಕೆ.ಎಸ್.ಪುಟ್ಟಣ್ಣಯ್ಯ ಜನ ಮಾನಸದಲ್ಲಿ ಉಳಿಯುವ ದೊಡ್ಡ ನಾಯಕರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

siddaramaiah B.S.Yeddyurappa ನಾಯಕ ಪುಟ್ಟಣ್ಣಯ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ