ಹಕ್ಕು ಪತ್ರಗಳಿಗಾಗಿ ಪ್ರತಿಭಟನೆ

Dss protest in front of town hall for Claim letters

19-02-2018

ಬೆಂಗಳೂರು: ನಗರಗಳಲ್ಲಿ ವಾಸಿಸುತ್ತಿರುವ ದಲಿತರಿಗೆ ಹಕ್ಕುಪತ್ರಗಳನ್ನು ವಿತರಿಸಬೇಕೆಂದು  ದಲಿತ ಸಂಘರ್ಷ ಸಮಿತಿ(ಸಮತಾವಾದ) ಆಗ್ರಹಿಸಿದೆ. ನಗರದಲ್ಲಿಂದು ಪುರಭವನದ ಎದುರು ದಸಂಸ(ಸಮತಾವಾದ) ನೇತೃತ್ವದಲ್ಲಿ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ನಗರಗಳಲ್ಲಿ ವಾಸಿಸುತ್ತಿರುವ ದಲಿತರಿಗೆ ಹಕ್ಕುಪತ್ರಗಳನ್ನು ವಿತರಿಸದೇ ವಿಳಂಬ ನೀತಿ ಅನುಸರಿಸುತ್ತಿರುವುದು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ಯನ್ನುದ್ದೇಶಿಸಿ ಮಾತನಾಡಿದ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಚ್.ಮಾರಪ್ಪ ಪ್ರಭಾವಿ ರಾಜಕಾರಣಿಗಳು, ಕಾರ್ಪೋರೇಟ್ ಕಂಪನಿಗಳು, ಉಳ್ಳವರು, ಸ್ಥಳೀಯ ಪ್ರಭಾವಿಗಳು ದಬ್ಬಾಳಿಕೆ ನಡೆಸಿ ನೂರಾರು ಎಕರೆ ಭೂಮಿಯನ್ನು ಕಬಳಿಸುತ್ತಿದ್ದಾರೆ. ಆದರೆ, ನಿವೇಶನ ರಹಿತರಿಗೆ ಹಾಗೂ ಭೂಮಿಯಿಲ್ಲದವರಿಗೆ ಭೂ ಮತ್ತು ನಿವೇಶ ನೀಡಲು ಕಾನೂನು ತೊಡಕಿದೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರ ಪ್ರದೇಶದಲ್ಲಿರುವ ದಲಿತರು ಬಾಡಿಗೆ ಮನೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಅವರಿಗೆ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದೇ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಮತ್ತೊಂದು ಕಡೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಕುಟುಂಬ ನಿರ್ವಹಣೆ ಕಠಿಣ ಸ್ಥಿತಿಯಲ್ಲಿದ್ದಾರೆ. ಇದರ ನಡುವೆ ಸರಕಾರಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡಿರುವ ದಲಿತರನ್ನು ಒಕ್ಕಲೆಬ್ಬಿಸುವ ಮೂಲಕ ನಮ್ಮನ್ನಾಳುತ್ತಿರುವ ಸರಕಾರಗಳು  ದಲಿತರನ್ನು ಬೀದಿ ಪಾಲು ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರು ನಗರ ಜಿಲ್ಲೆಯ ಸಿಂಗಸಂದ್ರ ಗ್ರಾಮದ ಅಂಬೇಡ್ಕರ್ ನಗರದಲ್ಲಿ 35 ವರ್ಷಗಳಿಂದ ಸರಕಾರಿ ಜಾಗದಲ್ಲಿ 350ಕ್ಕೂ ಅಧಿಕ ದಲಿತ ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡಿದ್ದು, ಸರಕಾರ ಇವರಿಗೆ ಹಕ್ಕುಪತ್ರ ನೀಡದೇ ವಂಚಿಸುತ್ತಿದೆ. ದಕ್ಷಿಣ ತಾಲೂಕಿನ ಚಿಕ್ಕಬೇಗೂರು, ಶ್ರೀನಗರ ಗುಟ್ಟೆ ಪ್ರದೇಶದಲ್ಲಿ ಹತ್ತಾರು ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡಿರುವವರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು ಎಂದು  ಆಗ್ರಹಿಸಿದರು.

ಬೆಂಗಳೂರು ಉತ್ತರ ತಾಲೂಕಿನ ಕೊಂಡಪ್ಪ ಬಡಾವಣೆ, ಕೋಗಿಲು ಬಡಾವಣೆ, ಹೆಬ್ಬಾಳ ಕುಂತಿ ಗ್ರಾಮ, ಮತ್ತೀಕೆರೆ ಎಂ.ಆರ್.ಜಯರಾಂ ಕಾಲೋನಿ, ಲಗ್ಗೆರೆ, ಹೆಗ್ಗನವಳ್ಳಿ ಗ್ರಾಮಗಳಲ್ಲಿ ನೂರಾರು ದಲಿತರು ಮನೆಗಳನ್ನು ನಿರ್ಮಿಸಿಕೊಂಡಿದ್ದು, ಅವರಿಗೆ ಸೂಕ್ತ ಭದ್ರತೆಯಿಲ್ಲದೆ ನರಳುತ್ತಿದ್ದಾರೆ. ಹಾಗೂ ಯಲಹಂಕ ಉಪನಗರದ ಡಾ.ಬಿ.ಆರ್.ಅಂಬೇಡ್ಕರ್ ನಗರ ಸೇರಿದಂತೆ ನಗರ ಮತ್ತು ಗ್ರಾಮಾಂತರ ಜಿಲ್ಲೆಯ ನೂರಾರು ದಲಿತರು ಮನೆಗಳಿಲ್ಲದೆ ವಂಚಿತರಾಗಿದ್ದು, ಹಲವರಿಗೆ ಇದುವರೆಗೂ ಹಕ್ಕುಪತ್ರಗಳನ್ನು ನೀಡಿಲ್ಲ. ಹೀಗಾಗಿ, ಕೂಡಲೇ ಎಲ್ಲರಿಗೂ ಹಕ್ಕುಪತ್ರಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.

 

 

 


ಸಂಬಂಧಿತ ಟ್ಯಾಗ್ಗಳು

dalith Townhall ಖಂಡನೆ ಪುರಭವನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ