ನಲಪಾಡ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು

attempt to murder case against Nalapad

19-02-2018

ಬೆಂಗಳೂರು:  ನಗರದ ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಹಲ್ಲೆ ಮಾಡಿ ಗೂಂಡಾಗಿರಿ ನಡೆಸಿ ಪರಾರಿಯಾಗಿದ್ದ ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಪೊಲೀಸರ ಮುಂದೆ ಶರಣಾಗಿದ್ದಾನೆ.

ಕಳೆದ ಫೆ.17ರ ರಾತ್ರಿ ಫರ್ಜಿ ಕೆಫೆಯಲ್ಲಿ ಊಟ ಮಾಡುತ್ತಿದ್ದ ವೇಳೆ ಕಾಲು ತಗುಲಿಸಿದ ಎಂಬ ಕಾರಣಕ್ಕೆ ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ (24) ಮೇಲೆ ಹಲ್ಲೆ ಸ್ನೇಹಿತರೊಂದಿಗೆ ಹಲ್ಲೆ ನಡೆಸಿ ನಂತರ ಮಲ್ಯ ಆಸ್ಪತ್ರೆಗೆ ನುಗ್ಗಿ ಗೂಂಡಾಗಿರಿ ತೋರಿ ಪರಾರಿಯಾಗಿದ್ದ ಮೊಹಮದ್ ನಲಪಾಡ್ (24) ಬಂಧನದ ಭೀತಿಯಿಂದ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಗೆ ಆಗಮಿಸಿ ತನಿಖಾಧಿಕಾರಿಗಳ ಮುಂದೆ ಶರಣಾಗಿದ್ದಾರೆ.

ಗೂಂಡಾಗಿರಿ ಪ್ರಕರಣದ ಸಂಬಂಧಿಸಿದಂತೆ ನಿನ್ನೆ ರಾತ್ರಿ ಮೊಹಮ್ಮದ್ ನಲಪಾಡ್ ಮತ್ತವರ ಐವರು ಸ್ನೇಹಿತರಾದ ಅಭಿಷೇಕ್, ಅರುಣ್, ಬಾಲಕೃಷ್ಣ, ಮಂಜುನಾಥ್, ಹಾಗೂ ನಸೀಬ್‍ನನ್ನು ಬಂಧಿಸಿ ಪ್ರಕರಣವನ್ನು ಸಿಸಿಬಿ ತನಿಖೆಗೆ ಒಳಪಡಿಸಲಾಗಿತ್ತು. ಪ್ರಕರಣವು ರಾಜಕೀಯ ಹೋರಾಟಗಳಿಗೆ ಕಾರಣವಾಗಿ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬೆಳಿಗ್ಗೆ 10.40ರ ವೇಳೆ ಪ್ರಮುಖ ಆರೋಪಿ ಮೊಹಮ್ಮದ್ ನಲ್ಪಾಡ್ ವಕೀಲ ಉಸ್ಮಾನ್ ಜೊತೆ ಶರಣಾಗಿದ್ದಾನೆ.

ಆರೋಪಿ ಮೊಹಮ್ಮದ್ ನಲಪಾಡ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿ ಕೃತ್ಯದ ಕುರಿತು ಮಾಹಿತಿ ಪಡೆದರು. ಈ ವೇಳೆ ಮೊಹಮ್ಮದ್  ನಲಪಾಡ್ ನನ್ನು ಬಂಧಿಸುವಂತೆ ಪರ ವಿರೋಧ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಜಟಾಪಟಿ ನಡೆದಿದ್ದು ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಆರೋಪಿ ಮೊಹಮ್ಮದ್ ನಲಪಾಡ್ ಪರವಾಗಿ ಠಾಣೆಯಲ್ಲಿ ವಕೀಲ ಉಸ್ಮಾನ್ ಅವರು ವಕಾಲತ್ತು ವಹಿಸಲು ಮುಂದಾದರು. ಆದರೆ ಹೆಚ್ಚುವರಿ ಪೊಲೀಸ್ ಆಯುಕ್ತ ಬಿಕೆ ಸಿಂಗ್ ಡಿಸಿಪಿ ಚಂದ್ರಗುಪ್ತಾ ಅವರು ತನಿಖಾಧಿಕಾರಿಗಳೊಂದಿಗೆ ಆರೋಪಿ ನಲಪಾಡ್ ನನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಮೊಹಮ್ಮದ್ ನಲಪಾಡ್ ಪತ್ತೆಗಾಗಿ 3 ವಿಶೇಷ ತಂಡಗಳನ್ನು ರಚಿಸಲಾಗಿದ್ದು ಬೆಳಿಗ್ಗೆ ಪೊಲೀಸ್ ತಂಡವೊಂದು ಆತನ ಮನೆಗೆ ಹೋಗಿ ತಪಾಸಣೆ ನಡೆಸಲಾಗಿತ್ತಾದರೂ ಆತ ಪತ್ತೆಯಾಗಿರಲಿಲ್ಲ ಪೊಲೀಸರು ಬರಿಗೈಯಲ್ಲಿ ಠಾಣೆಗೆ ಮರಳಿದ ಕೆಲ ಹೊತ್ತಿನಲ್ಲಿಯೇ ಆತ ಶರಣಾಗಿದ್ದಾನೆ. ಈ ನಡುವೆ ಸುದ್ದಿಗಾರರ ಜೊತೆ ಮಾತನಾಡಿದ್ದ ಶಾಸಕ ಹ್ಯಾರೀಸ್ ನನ್ನ ಮಗನನ್ನು ನಾನೇ ಪೊಲೀಸರ ಮುಂದೆ ಶರಣಾಗತಿ ಮಾಡಿಸುತ್ತೇನೆ ಎಂದು ಹೇಳಿದ 2 ಗಂಟೆಯೊಳಗೆ ಶರಣಾಗತಿ ನಡೆದಿದೆ.

ಘಟನೆಯ ವಿವರ: ಸಿಂಗಪುರದಲ್ಲಿ ಎಂಬಿಎ ವ್ಯಾಸಂಗ ಮುಗಿಸಿ ಆರು ತಿಂಗಳ ಹಿಂದೆ ನಗರಕ್ಕೆ ವಾಪಾಸಾಗಿದ್ದ ವಿದ್ವತ್ ಬೈಕ್‍ನಿಂದ ಬಿದ್ದು ಅವರ ಕಾಲಿನ ಮೂಳೆ ಮುರಿದುಕೊಂಡಿದ್ದರು ಅವರ ಯೋಗಕ್ಷೇಮ ವಿಚಾರಿಸಿಕೊಂಡು ಬರಲು ವಸಂತನಗರದ ಮನೆಗೆ ಬಂದಿದ್ದ ಸ್ನೇಹಿತರನ್ನು ವಿದ್ವತ್ ಊಟಕ್ಕೆ ಕರೆದಿದ್ದರು ಅದರಂತೆ ಎಲ್ಲರೂ ಫೆ.17ರ ರಾತ್ರಿ 10 ಗಂಟೆ ಸುಮಾರಿಗೆ ಫರ್ಜಿ ಕೆಫೆಗೆ ಊಟಕ್ಕೆ ತೆರಳಿದ್ದರು. ಈ ವೇಳೆ ಪಾನಮತ್ತರಾಗಿ ಪಕ್ಕದ ಟೇಬಲ್‍ನಲ್ಲೇ ಸ್ನೇಹಿತರ ಜತೆ  ಮೊಹಮದ್ ಕುಳಿತಿದ್ದರು. ಮೂಳೆ ಮುರಿದಿದ್ದರಿಂದ ಕುರ್ಚಿಯಲ್ಲಿ ಸರಿಯಾಗಿ ಕೂರಲು ಆಗದೆ, ವಿದ್ವತ್ ಕಾಲು ಚಾಚಿಕೊಂಡು ಕುಳಿತಿದ್ದು ಅವರ ಕಾಲು ಮೊಹಮದ್‍ನ ಸ್ನೇಹಿತನೊಬ್ಬನಿಗೆ ತಗುಲಿತ್ತು.

ಇದರಿಂದ ಕುಪಿತಗೊಂಡು ಸ್ನೇಹಿತ ಕಾಲು ಚಾಚಿಕೊಂಡು ಕುಳಿತಿದ್ದನ್ನು ಪ್ರಶ್ನಿಸಿದಾಗ, `ಮೂಳೆ ಮುರಿದಿದೆ. ಆ ಕಾರಣಕ್ಕೆ ಹೀಗೆ ಕುಳಿತಿದ್ದೇನೆ' ಎಂದು ವಿದ್ವತ್ ಹೇಳಿದ್ದಾರೆ. ಅದಕ್ಕೆ ಕಾಲು ಮುರಿದಿದ್ದರೆ ಮನೆಯಲ್ಲಿ ಇರುವುದನ್ನು ಬಿಟ್ಟು ಇಲ್ಲಿಗೆ ಏಕೆ ಬಂದೆ' ಎಂದು ವಾಗ್ವಾದ ನಡೆಸಿದ್ದಾರೆ. ಎದುರು ಮಾತನಾಡಿದಾಗ ಆರೋಪಿಗಳು ಹಲ್ಲೆ ನಡೆಸಿದ್ದರು.

ಅಲ್ಲದೇ ರಕ್ತದ ಮಡುವಿನಲ್ಲಿ ನಿತ್ರಾಣನಾಗಿ ಬಿದ್ದಿದ್ದ ವಿದ್ವತ್‍ನನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಿದ ನಂತರವೂ ಹಿಂಬಾಲಿಸಿಕೊಂಡು ಬಂದು ದಾಂದಲೆ ನಡೆಸಿದ ಮೊಹಮ್ಮದ್ ನಲಪಾಡ್ ಮತ್ತವರ ಸ್ನೇಹಿತರು ದೂರು ಕೊಟ್ಟರೆ ಜೀವಂತವಾಗಿ ಉಳಿಸುವುದಿಲ್ಲ' ಎಂದು ಬೆದರಿಕೆ ಹಾಕಿದ್ದರು.

ಈ ಸಂಬಂಧ ಮೊಹಮದ್ ಹಾಗೂ ಸ್ನೇಹಿತರ ವಿರುದ್ಧ ಗಂಭೀರ ಸ್ವರೂಪದ ಹಲ್ಲೆ (ಐಪಿಸಿ 326), ಅಕ್ರಮ ಬಂಧನ (ಐಪಿಸಿ 341), ಉದ್ದೇಶ ಪೂರ್ವಕವಾಗಿ ಶಾಂತಿ ಕದಡುವುದು (ಐಪಿಸಿ 504) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪಗಳಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಪ್ರಕರಣವು ಬಹಿರಂಗಗೊಂಡು ರಾಜಕೀಯ ಹೋರಾಟಗಳಿಗೆ ಕಾರಣವಾಗಿತ್ತು ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಕಬ್ಬನ್‍ಪಾರ್ಕ್ ಪೊಲೀಸ್ ಇನ್ಸ್‍ ಪೆಕ್ಟರ್ ವಿಜಯ್ ಹಡಗಲಿಯನ್ನು ಅಮಾನತ್ತು ಗೊಳಿಸಿ ಸಿಸಿಬಿ ತನಿಖೆ ಒಳಪಡಿಸಿದ್ದರು.

ಆರೋಪಿ ಮೊಹಮ್ಮದ್ ನಲಪಾಡ್ ಪತ್ತೆಗಾಗಿ ರಚಿಸಿಲಾಗಿದ್ದ ವಿಶೇಷ ಪೊಲೀಸ್ ತಂಡಗಳು ರಾತ್ರಿಯಿಡಿ ಶೋಧ ನಡೆಸಿದ್ದು ಆರೋಪಿ ಪತ್ತೆಯಾಗಿರಲಿಲ್ಲ ಪೊಲೀಸರು ಬೆನ್ನತ್ತಿರುವುದನ್ನು ತಿಳಿದ ಮೊಹಮ್ಮದ್ ನಲಪಾಡ್ ಪೊಲೀಸರೇ ಕಾರ್ಯಾಚರಣೆ ನಡೆಸಿ ಬಂಧಿಸಿದರೆ ಜಾಮೀನು ದೊರೆಯುವ ಸಾಧ್ಯತೆ ಕಡಿಮೆ ಇರುವುದರಿಂದ ಸ್ವತಃ ತಾನೇ ಪೊಲೀಸರ ಮುಂದೆ ಜಾಮೀನು ಪಡೆಯಲು ನಲಪಾಡ ಮುಂದಾಗಿದ್ದಾನೆ ಎನ್ನಲಾಗಿದೆ. ಬಂಧಿತ ಮೊಹಮ್ಮದ್‍ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಆತನನ್ನು ವಶಕ್ಕೆ ತೆಗೆದುಕೊಂಡು ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಲಿದ್ದಾರೆ.

ಈ ಮಧ್ಯೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನಲಪಾಡ್ ಮೇಲೆ ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಹಲ್ಲೆ ಘಟನೆಯ ಬಳಿಕ ನಲಪಾಡ್ ಮೇಲೆ ಪೊಲೀಸರು ಕೇವಲ ಹಲ್ಲೆ ಮತ್ತು ದಾಂಧಲೆ ಪ್ರಕರಣ ದಾಖಲಿಸಲಾಗಿತ್ತು. ನಲಪಾಡ್ ಹ್ಯಾರಿಸ್ ರಕ್ಷಣೆಗೆಂದೇ ಗಂಭೀರ ಪ್ರಕರಣ ದಾಖಲಿಸಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೊಲೆ ಯತ್ನದ ಎಫ್‍ಐಆರ್ ದಾಖಲಿಸುವಂತೆ ಗೃಹ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದು ಅದರಂತೆ ಆರೋಪಿ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.


ಸಂಬಂಧಿತ ಟ್ಯಾಗ್ಗಳು

moahamad Nalapad ಎಫ್‍ಐಆರ್ ವಿಚಾರಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ