ಎಲ್ಲರಿಗೂ ‘ಆರೋಗ್ಯ ರಕ್ಷಣೆ ಯೋಜನೆ’16-02-2018

ಬೆಂಗಳೂರು: ರೈತರು, ಮಹಿಳೆಯರು ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಮತದಾರ ಸಮೂಹವನ್ನು ಕಣ್ಣ ಮುಂದಿಟ್ಟುಕೊಂಡಿರುವ ಸಿದ್ದರಾಮಯ್ಯ ಕಾಲೇಜು ವಿದ್ಯಾರ್ಥಿ ಸಮುದಯವನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ದೂರ ಪ್ರದೇಶಗಳಲ್ಲಿರುವ ಶೈಕ್ಷಣಿಕ ಸಂಸ್ಥೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ನೀಡುತ್ತಿದ್ದ ಸರ್ಕಾರ ಇನ್ನು ಮುಂದೆ ಎಲ್ಲ ವಿದ್ಯಾರ್ಥಿಗಳಿಗೂ ಸಾರಾಸಗಟಾಗಿ ಉಚಿತ ಬಸ್ ಪಾಸ್ ನೀಡಲು ನಿರ್ಧರಿಸಿದೆ. ಇದರಿಂದಾಗಿ ಜಾತಿ, ಧರ್ಮ, ಸಮುದಾಯಗಳ ಬೇಧವಿಲ್ಲದೇ ಅಂತರವಿಲ್ಲದೆ ಬಹುತೇಕ ಎಲ್ಲರಿಗೂ ಅನುಕೂಲವಾಗಲಿದೆ. ಅದರಲ್ಲೂ ಪ್ರಮುಖವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಸಮುದಾಯಕ್ಕೆ ಸಹಾಯವಾಗಲಿದೆ.

ಒಣಭೂಮಿ ಪ್ರದೇಶದ ರೈತರಿಗೆ ಹೆಕ್ಟೇರ್‍ಗೆ ಪ್ರತಿ ವರ್ಷ ಐದರಿಂದ ಹತ್ತು ಸಾವಿರ ರೂ.ನೀಡುವ ಯೋಜನೆ ಜಾರಿಗೊಳಿಸಿದ್ದು, ಇದಕ್ಕಾಗಿ ಮೂರೂವರೆ ಸಾವಿರ ಕೋಟಿ ರೂಗಳನ್ನು ನೀಡಿರುವ ಕ್ರಮ ರಾಜ್ಯದ ಬಹುತೇಕ ಭಾಗಗಳಲ್ಲಿರುವ ಒಣಭೂಮಿ ಪ್ರದೇಶಗಳ ರೈತರ ಗಮನ ಸೆಳೆಯುವುದು ನಿಶ್ಚಿತ ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ.

ಈ ಯೋಜನೆಯಿಂದಾಗಿ ಒಣಭೂಮಿ ಪ್ರದೇಶದ ರೈತರು ಇನ್ನು ಮುಂದೆ ತಮ್ಮ ಜಮೀನಿನಲ್ಲಿ ಬರಬಿದ್ದರೆ ಸಹಜವಾಗಿಯೇ ಆರ್ಥಿಕ ಲಾಭ ಪಡೆಯಲಿದ್ದು ಇದು ಆ ಸಮುದಾಯದ ಪಾಲಿಗೆ ಬಂಪರ್ ಕೊಡುಗೆಯೇ ಆಗಿದೆ. ಅದೇ ರೀತಿ ಸಹಕಾರ ಸಂಘಗಳಿಂದ ಸಾಲ ಪಡೆದ ರೈತರು ಮೃತಪಟ್ಟರೆ ಒಂದು ಲಕ್ಷ ರೂವರೆಗಿನ ಅವರ ಸಾಲವನ್ನು ಮನ್ನಾ ಮಾಡುವ ಯೋಜನೆ ಕೂಡಾ ಸಹಜವಾಗಿಯೇ ಆ ಸಮುದಾಯಕ್ಕೆ ಸರ್ಕಾರ ನೀಡಿದ ಬಂಪರ್ ಕೊಡುಗೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಕುರಿ-ಮೇಕೆ ಸಾಕಾಣಿಕೆದಾರರ 50 ಸಾವಿರ ರೂವರೆಗಿನ ಸಾಲ ಮನ್ನಾ ಯೋಜನೆ ಕೂಡಾ ರಾಜ್ಯದ ಬಹುತೇಕ ಎಲ್ಲ ಭಾಗಗಳಲ್ಲಿರುವ ಕುರಿ, ಮೇಕೆ ಸಾಕಾಣಿಕೆದಾರರಿಗೆ ಅನುಕೂಲ ಒದಗಿಸಿಕೊಡಲಿದ್ದು ಸಹಜವಾಗಿಯೇ ಈ ಅಂಶ ಸರ್ಕಾರದ ಬಗ್ಗೆ ಆ ಮತದಾರರು ಖುಷಿಪಡುತ್ತಾರೆ ಎಂಬ ನಂಬಿಕೆ ಇರಿಸಿಕೊಳ್ಳಲಾಗಿದೆ.

ಈ ಮಧ್ಯೆ ಕಾರ್ಮಿಕರ ನಿವೃತ್ತಿ ವಯಸ್ಸನ್ನು ಐವತ್ತೆಂಟರಿಂದ ಅರವತ್ತಕ್ಕೇರಿಸಿರುವ ಅವರ ಕ್ರಮ ರಾಜ್ಯದ ನಲವತ್ತು ಸಾವಿರ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಕ್ಷಾಂತರ ಮಂದಿಗೆ ಅನುಕೂಲವಾಗಲಿದ್ದು ಸಹಜವಾಗಿಯೇ ಅವರ ಹಲವು ಕಾಲದ ಬೇಡಿಕೆ ಈಡೇರಿದಂತಾಗಿದೆ.

ಉನ್ನತ ಶಿಕ್ಷಣ ಮಹಿಳೆಯರ ಕೈಗೆಟಕುವಂತೆ ಮಾಡಲು ಪದವಿ ಪೂರ್ವ,ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣವನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದ್ದು 3.7 ಲಕ್ಷ ವಿದ್ಯಾರ್ಥಿನಿಯರಿಗೆ, ಆ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಕೆಲಸ ಮಾಡಿದೆ.

ಬಡವ-ಶ್ರೀಮಂತ ಎಂಬ ಭೇಧವಿಲ್ಲದೆ ರಾಜ್ಯದ ಎಲ್ಲರಿಗೂ ಉಚಿತ ಆರೋಗ್ಯ ಚಿಕಿತ್ಸೆ ನೀಡುವ ಆರೋಗ್ಯ ರಕ್ಷಣೆ ಯೋಜನೆ ಫೆಬ್ರವರಿಯಿಂದಲೇ ಜಾರಿಗೆ ಬರಲಿದ್ದು ವರ್ಷಾಂತ್ಯದೊಳಗೆ ಎಲ್ಲರಿಗೂ ಲಭ್ಯವಾಗಲಿರುವುದರಿಂದ ವಿವಿಧ ಯೋಜನೆಗಳಡಿ ಚಿಕಿತ್ಸಾ ಸೇವೆ ಪಡೆಯಲು ಪರದಾಡುತ್ತಿದ್ದ ಜನಸಾಮಾನ್ಯರು ಇನ್ನು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

ಹೀಗೆ ಅಹಿಂದ ಸಮುದಾಯಗಳಲ್ಲದೆ ಸರ್ವ ಸಮುದಾಯಗಳಿಗೂ ಒಂದಲ್ಲ, ಒಂದು ರೀತಿಯಲ್ಲಿ ಸರ್ಕಾರ 2018-19 ನೇ ಸಾಲಿನ ಬಜೆಟ್ ಮೂಲಕ ಬಂಪರ್ ಕೊಡುಗೆ ನೀಡಿದ್ದು ಆ ಮೂಲಕ ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿದೆ.

ಇದೇ ಕಾಲಕ್ಕೆ ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣದ ಬೆಳವಣಿಗೆ ಸಹಜವಾಗಿಯೇ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಆದಾಯದ ಮೇಲೆ ಹೊಡೆತ ಕೊಟ್ಟಿದ್ದು, ಇಷ್ಟಾದರೂ ಜನರ ಹಿತ ಕಾಪಾಡುವ ವಿಷಯದಲ್ಲಿ ತಮ್ಮ ಸರ್ಕಾರ ಬದ್ಧತೆ ತೋರಿದೆ ಎಂದೂ ಸಿದ್ದರಾಮಯ್ಯ ಪರೋಕ್ಷವಾಗಿ ಬಜೆಟ್‍ನಲ್ಲಿ ಪ್ರಸ್ತಾಪಿಸಿರುವುದೂ ಗಮನಾರ್ಹವಾಗಿದೆ. ಒಟ್ಟಾರೆ ಆರ್ಥಿಕ ಸಂಕಷ್ಟದ ನಡುವೆಯೂ ಮುಂಬರುವ ವಿಧಾನಸಭಾ ಚುನಾವಣೆಯನ್ನು ವಿಶ್ವಾಸದಿಂದ ಎದುರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಅಸ್ತ್ರವನ್ನು ಬಳಕೆ ಮಾಡಿಕೊಂಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

siddaramaiah Budget ಸರ್ಕಾರ ಆದಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ