ಸಿಕ್ಕಿಬಿದ್ದ ಬಗೋಲಿ ಗ್ಯಾಂಗ್ ನ ನಾಲ್ವರು

bagoli gang members arrested in bengaluru

15-02-2018

ಬೆಂಗಳೂರು: ಕೊಡಿಗೇಹಳ್ಳಿ ಪೊಲೀಸರ ಮೇಲೆ ಹಲ್ಲೆ ಮಾಡಿ ರೈಫಲ್ ದೋಚಿ ಪರಾರಿಯಾಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಮಧ್ಯಪ್ರದೇಶದ ಬಗೋಲಿ ಗ್ಯಾಂಗ್‍ನ ಮತ್ತೆ ನಾಲ್ವರು ಆರೋಪಿಗಳನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯ ಬಗೋಲಿಯ ಅಜಂಬಾಯ್ ಸಿಂಗ್ ಮೆಹರ್ (25), ಜಿತೇನ್ ರೇಮಸಿಂಗ್ ಪಲಾಶೆ ಬಿನ್ ರೇಮ್ ಸಿಂಗ್ (19), ಸುರೇಶ್ ಕೋದ್ರಿಯಾ ಮೆಹರ್ ಬಿನ್ ಸಾಗರ್ ಬಿನ್ ಕುದ್ರಿಯಾ (19), ಅಬುಬಾಯ್ ಸಿಂಗ್ ಮೊಹೆರ್ ಬಿನ್ ಅಜಂ ಬಾಯ್‍ಸಿಂಗ್ ಮೆಹರ್ (21) ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ತಿಳಿಸಿದರು.

ಬಂಧಿತರಿಂದ 630 ಗ್ರಾಂ ಚಿನ್ನಾಭರಣ, ಎರಡೂವರೆ ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡು 18 ಕನ್ನಗಳವು ಪ್ರಕರಣಗಳನ್ನು ಬೇಧಿಸಲಾಗಿದೆ. ಆರೋಪಿಗಳು ಗಸ್ತಿನಲ್ಲಿದ್ದ ಕೊಡಿಗೇಹಳ್ಳಿಯ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಪರಮೇಶ್ವರಪ್ಪ ಸಿದ್ದಪ್ಪ ಎಂಬುವರ ಮೇಲೆ ಹಲ್ಲೆ ನಡೆಸಿ ರೈಫಲ್‍ನ್ನು ಕಸಿದುಕೊಂಡು ಪರಾರಿಯಾಗಿ ಬಗೋಲಿಯಲ್ಲಿ ತಲೆ ಮರೆಸಿಕೊಂಡಿದ್ದರು.

ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ ಈಶಾನ್ಯ ವಿಭಾಗದ ಪೊಲೀಸರ ವಿಶೇಷ ತಂಡ ಬಗೋಲಿಯಲ್ಲಿ ಇತರ ನಾಲ್ವರು ಆರೋಪಿಗಳನ್ನು ಬಂಧಿಸಿ ಆರೋಪಿಗಳು ಯಲಹಂಕದಲ್ಲಿ 6, ಯಲಹಂಕ ಉಪನಗರ, ಸಂಪಿಗೆ ಹಳ್ಳಿ, ಚಿಕ್ಕಜಾಲ ತಲಾ 2, ಅಮೃತಹಳ್ಳಿ 1 ಸೇರಿ 18 ಕನ್ನಗಳವು ಪ್ರಕರಣದಲ್ಲಿ ದೋಚಿದ್ದ ಚಿನ್ನ-ಬೆಳ್ಳಿ ಆಭರಣಗಳನ್ನು ಮಧ್ಯಪ್ರದೇಶದ ಜೋಪಡ್ ಹಾಗೂ ಭೋರಿ ಎಂಬಲ್ಲಿ ಸ್ಥಳೀಯ ವರ್ತಕರಿಗೆ ಮಾರಾಟ ಮಾಡಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳು 18 ಪ್ರಕರಣಗಳಲ್ಲದೆ ಇನ್ನು ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು, ಅವುಗಳ ತನಿಖೆ ಕೈಗೊಳ್ಳಲಾಗಿದೆ ಎಂದು ಸುನಿಲ್ ಕುಮಾರ್ ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

bagoli gang case ಆಭರಣ ಮಧ್ಯಪ್ರದೇಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ