ಮೋಜಿಗಾಗಿ ಎಟಿಎಂಗಳಿಂದ ಹಣ ಕಳ್ಳತನ

cash refill agency workers fraud at ATM

15-02-2018

ಬೆಂಗಳೂರು: ಬ್ಯಾಂಕ್ ಅಧಿಕಾರಿಗಳಿಗೆ ಗೊತ್ತಾಗದಂತೆ ಎಟಿಎಂಗಳಲ್ಲಿ ಹಣ ಕಳವು ಮಾಡಿ ಮೋಜಿನ ಜೀವನ ನಡೆಸುತ್ತಿದ್ದ ರೇಡಿಯೆಂಟ್ ಕ್ಯಾಶ್ ಮ್ಯಾನೇಜ್‍ಮೆಂಟ್ ಸರ್ವೀಸಸ್ ಕಂಪನಿಯ ಕಸ್ಟೋಡಿಯನ್ ಸೇರಿ ಮೂವರು ಈಶಾನ್ಯ ವಿಭಾಗದ ಪೊಲೀಸರ ಅತಿಥಿಯಾಗಿದ್ದಾರೆ.

ರಾಮಮೂರ್ತಿ ನಗರದ ಲಕ್ಷ್ಮಣಮೂರ್ತಿ ನಗರವಾಸಿ ಸತೀಶ್ (32), ಸುನಿಲ್ ಕುಮಾರ್ (24) ಹಾಗೂ ಟಿಸಿ ಪಾಳ್ಯದ  ಮಂಜುನಾಥ್ (21) ಬಂಧಿತ ಆರೋಪಿಗಳಾಗಿದ್ದಾರೆ. ಬ್ಯಾಂಕ್‍ನ ಅಧಿಕಾರಿಗಳಿಗೆ ಗೊತ್ತಾಗದಂತೆ ಕಳೆದ 4 ತಿಂಗಳಿಂದ ಆರೋಪಿಗಳು ಈ ಕೃತ್ಯದಲ್ಲಿ ತೊಡಗಿದ್ದರು  ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಂಧಿತರಿಂದ 5,81,500 ನಗದು, ಎಟಿಎಂ ಮೆಷಿನ್ ತೆಗೆಯಲು ಬಳಸುವ ಮೂರು ಮಾಸ್ಟರ್ ಕೀಗಳು, ಎಸ್‍ಬಿಐನ ಮೂರು, ಇಂಡಿಯನ್ ಓವರ್‍ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೋಟಕ್ ಮಹೇಂದ್ರ ಬ್ಯಾಂಕ್‍ನ ತಲಾ ಒಂದು ಸೇರಿ 6 ಎಟಿಎಂ ಕಾರ್ಡ್‍ಗಳು, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್‍ನ ತಲಾ 1, ಅಡ್ಮಿನ್ ಕಾರ್ಡ್, 3 ಮೊಬೈಲ್‍ಗಳು, ಆಟೊವೊಂದನ್ನು ವಶಪಡಿಸಿಕೊಳ್ಳಲಾಗಿದೆ.

ಈಜಿಪುರದ ರೇಡಿಯೆಂಟ್ ಕ್ಯಾಶ್ ಮ್ಯಾನೇಜ್‍ಮೆಂಟ್ ಸರ್ವೀಸಸ್ ಕಂಪನಿಯ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಸತೀಶ್, ನಗರದ ಕೆನರಾಬ್ಯಾಂಕ್, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸಿಟಿ ಬ್ಯಾಂಕ್, ಎಚ್‍ಡಿಎಫ್‍ಸಿ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್‍ನ ಎಟಿಎಂಗಳಿಗೆ ಹಣ ತುಂಬುವ ಕೆಲಸ ಮಾಡುತ್ತಿದ್ದನು. ಈ ಕಂಪನಿಯಲ್ಲಿ ಕೆಲಸ ಮಾಡುವ ಆರೋಪಿಗಳಿಗೆ ಕೆಆರ್ ಪುರ, ರಾಮಮೂರ್ತಿ ನಗರ, ಹೆಬ್ಬಾಳ-ಕೊತ್ತನೂರು ಕಡೆಗಳ ತಲಾ 20 ಎಟಿಎಂಗಳಿಗೆ ಹಣ ತುಂಬುವ ಕೆಲಸವನ್ನು ವಹಿಸಲಾಗಿತ್ತು.

ಎಟಿಎಂ ಮೆಷಿನ್‍ಗೆ ಬಳಸುವ ಮೂರು ಮಾಸ್ಟರ್ ಕೀಗಳು, ಅಡ್ಮಿನ್ ಕಾರ್ಡ್‍ಗಳು ಹಾಗೂ ಸೀಕ್ರೆಟ್ ಕೋಡ್ ನಂಬರ್‍ಗಳನ್ನು ಆರೋಪಿ ಸತೀಶ್‍ಗೆ ಕಂಪನಿಯಿಂದ ನೀಡಲಾಗಿತ್ತು. ಆರೋಪಿಯು ತಮ್ಮ ಕಚೇರಿ ಸಿಬ್ಬಂದಿಯೊಂದಿಗೆ ಎಟಿಎಂಗಳಿಗೆ ಹಣ ತುಂಬಿಸಿ ನಂತರ ಮಧ್ಯರಾತ್ರಿ ಮತ್ತೊಬ್ಬ ಆರೋಪಿ ಆಟೋ ಚಾಲಕನಾಗಿದ್ದ, ಸುನಿಲ್ ಕುಮಾರ್ ಜೊತೆ ಆಟೋದಲ್ಲಿ ಹೋಗಿ ಹಣ ತುಂಬಿರುವ ಎಟಿಎಂಗಳಿಂದ ಹಣ ಕಳವು ಮಾಡುತ್ತಿದ್ದರು. ಬಂಧಿಸಿರುವ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ATM Money ಮೆಷಿನ್‍ ಕಂಪನಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ