ಇಂದಿನಿಂದ ಮೂರು ದಿನಗಳ ಕಾಲ ಸಾವಯವ ಮತ್ತು ಸಿರಿಧಾನ್ಯಗಳ ರಾಷ್ಟ್ರೀಯ ವಾಣಿಜ್ಯ ಮೇಳ

Kannada News

28-04-2017 264

ಬೆಂಗಳೂರು,ಏ.28: ಕೃಷಿ ಇಲಾಖೆಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಿರುವ ಮೂರು ದಿನಗಳ ಸಾವಯವ ಮತ್ತು ಸಿರಿಧಾನ್ಯಗಳ ರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ವೈಭವದ ಚಾಲನೆ ದೊರೆತಿದೆ.
 
ಕೃಷಿ ಸಚಿವ ಕೃಷ್ಣ ಭೈರೇಗೌಡ ಮೇಳಕ್ಕೆ ಚಾಲನೆ ನೀಡಿ, ಸಾವಯವ ಮತ್ತು ಸಿರಿಧಾನ್ಯಗಳ ಆಹಾರಗಳು ಭಾರತದ ಭವಿಷ್ಯದ ಆಹಾರ ಪದ್ಧತಿಯಾಗಲಿದೆ. ಇದೇ ಉದ್ದೇಶದಿಂದ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂತಹ ಮೇಳ ನಡೆಯುತ್ತಿದ್ದು, ಸಾವಯವ ಪದಾರ್ಥಗಳಿಗೆ ಭಾರೀ ಬೇಡಿಕೆ ಉಂಟಾಗುತ್ತಿದೆ ಎಂದರು.
 
ದೇಶದಲ್ಲೇ ಕರ್ನಾಟಕದಲ್ಲಿ ಮೊದಲ ಬಾರಿಗೆ 2004 ರಲ್ಲಿ ಸಾವಯವ ನೀತಿಯನ್ನು ಜಾರಿಗೆ ತಂದಿದ್ದು, ಆಗ ಎರಡೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿ ಬೆಳೆಯಲಾಗುತ್ತಿದ್ದು, ಈಗ ಈ ಪ್ರಮಾಣ 1.80 ಲಕ್ಷ ಹೆಕ್ಟೇರ್‍ಗೆ ವಿಸ್ತರಣೆಯಾಗಿದೆ ಎಂದರು.
 
ಸಾವಯವ ಭಾಗ್ಯ ಮತ್ತು ಕೇಂದ್ರದ ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಹೆಚ್ಚುವರಿಯಾಗಿ 90 ಸಾವಿರ ಹೆಕ್ಟೇರ್ ಪ್ರದೇಶವನ್ನು ಸಾಮಾನ್ಯ ಕೃಷಿಯಿಂದ ಸಾವಯವ ಕೃಷಿಗೆ ಪರಿವರ್ತಿಸಲಾಗಿದೆ. ರೈತರು ಸಾಕಷ್ಟು ಪ್ರಮಾಣದಲ್ಲಿ ಸಾವಯವ ಕೃಷಿ ಬೆಳೆಯುತ್ತಾರೆ. ಆದರೆ ನಿಯಮಿತ ಮಾರುಕಟ್ಟೆ ಸರಿಯಾದ ದರ ದೊರೆಯುತ್ತಿರಲಿಲ್ಲ. ಇದಕ್ಕೆ ರೈತರು ಅಸಂಘಟಿತರಾಗಿರುವುದೇ ಪ್ರಮುಖ ಕಾರಣ. ಇದನ್ನು ಮನಗಂಡು ರಾಜ್ಯ ಸರ್ಕಾರ ಸಾವಯವ ಬೆಳೆಯುವ ರೈತರನ್ನು ಒಂದುಗೂಡಿಸಿ 14 ಸಾವಯವ ಒಕ್ಕೂಟಗಳನ್ನು ರಚನೆ ಮಾಡಿದ್ದು, ಒಂದೊಂದು ಒಕ್ಕೂಟದಲ್ಲೂ 2 ರಿಂದ 3 ಸಾವಿರ ರೈತರಿದ್ದಾರೆ ಎಂದರು.
 
ಇವರು ತಾವು ಬೆಳೆದ ಪದಾರ್ಥಗಳನ್ನು ಒಂದೆಡೆ ಕಲೆಹಾಕಿ ಖಾಸಗಿ ಸಂಸ್ಥೆಗಳಿಗೆ ನಿಯಮಿತವಾಗಿ ಸರಬರಾಜು ಮಾಡುತ್ತಿದ್ದಾರೆ. ಇದರಿಂದ ಅವರ ಬೆಳೆಗೂ ಉತ್ತಮ ದರ ಸಿಗುತ್ತಿದೆ. ಕಳೆದ ಒಂದು ವರ್ಷದಿಂದ ಇಂತಹ ಒಕ್ಕೂಟ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಪದಾರ್ಥಗಳನ್ನು ಪ್ಯಾಕ್ ಮಾಡಲು, ಲೇಬಲ್ ಹಾಕಲು ತರಬೇತಿಯನ್ನೂ ನೀಡಲಾಗುತ್ತಿದೆ. ಕಂಪನಿಗಳು ನೇರವಾಗಿ ರೈತರನ್ನು ಸಂಪರ್ಕಿಸಿ ವ್ಯವಹಾರ ಕುದುರಿಸುತ್ತಿದೆ. ರೈತರೊಂದಿಗೆ ಮಾತುಕತೆ ನಡೆಸಿ ಸಾವಯವ ಪದಾರ್ಥಗಳಿಗೆ ಬೇಡಿಕೆ ಸಲ್ಲಿಸುತ್ತಿವೆ. ಈಗಾಗಲೇ ಬಿಗ್ ಬಾಸ್ಕೆಟ್ ಸಂಸ್ಥೆ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಸಾವಯವ ಪದಾರ್ಥಗಳನ್ನು ಖರೀದಿಸಿ ಮಾರುಕಟ್ಟೆಗೆ ಪೂರೈಸುತ್ತಿದೆ ಎಂದು ಹೇಳಿದರು.
 
ಈ ಹಿಂದೆ ಸಿರಿಧಾನ್ಯಗಳ ಬಗ್ಗೆ ನಕಾರಾತ್ಮಕ ಭಾವನೆ ಜನರಲ್ಲಿ ಇತ್ತು. ನಾವು ಸಿರಿಧಾನ್ಯವನ್ನು ಮರೆತಿರುವುದರಿಂದ ಸಕ್ಕರೆ ಖಾಯಿಲೆಯಂತಹ ರೋಗಗಳಿಗೆ ಬಲಿಯಾಗುತ್ತಿದ್ದೇವೆ. ಸಿರಿಧಾನ್ಯಗಳು ಪರಿಸರ ಮತ್ತು ಆರೋಗ್ಯಕ್ಕೂ ಪೂರಕವಾಗಿರುತ್ತದೆ. ಭವಿಷ್ಯದ ಆಹಾರ ಪದ್ಧತಿ ಇದೇ ಆಗಿರಲಿದೆ ಎಂದು ಹೇಳಿದರು.
 
ಕೇಂದ್ರ ಸರ್ಕಾರ ರಾಗಿ ಮತ್ತು ಜೋಳಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚು ಮಾಡಬೇಕು. ಅದನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
 
ಕೇಂದ್ರ ಕಾರ್ಯಕ್ರಮ ಅನುಷ್ಠಾನ ಮತ್ತು ಅಂಕಿ ಅಂಶಗಳ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ, ಮಧ್ಯವರ್ತಿಗಳ ಕಾಟ ತಪ್ಪಿಸಿ, ರೈತರು ಬೆಳೆದ ಬೆಳೆಯನ್ನು ನೇರವಾಗಿ ಕಂಪನಿಗಳಿಗೆ ತಲುಪಿಸಲು ಕ್ರಮ ಕೈಗೊಳ್ಳುವುದು ಅಗತ್ಯ. ಇಂತಹ ಮೇಳಗಳಿಂದ ರೈತರು ಮತ್ತು ಕಂಪನಿಗಳ ಮಧ್ಯೆ ಸಂಪರ್ಕ ನಿರ್ಮಾಣವಾಗುತ್ತದೆ. ಸಾವಯವ ಕೃಷಿ ಪರಿಸರಕ್ಕೆ ಸಹಕಾರಿಯಾಗಿರುತ್ತದೆ. ಆರೋಗ್ಯಕ್ಕೂ ಪೂರಕವಾಗಿರುತ್ತದೆ ಎಂದು ಹೇಳಿದರು.
 
ಕಾರ್ಯಕ್ರಮದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ  ಅನಂತ್ ಕುಮಾರ್, ಗ್ರಾಮೀಣ ಅಭಿವೃದ್ಧಿ ಮತ್ತು ಪಂ. ರಾಜ್ ಸಚಿವ ಹೆಚ್.ಕೆ. ಪಾಟೀಲ್, ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಕೇಂದ್ರದ ಮಾಜಿ ಕೃಷಿ ಸಚಿವ ಸೋಂಪಾಲ್ ಶಾಸ್ತ್ರಿ, ವಿಧಾನ ಪರಿಷತ್ ಸದಸ್ಯರಾದ ರಾಮಚಂದ್ರೇಗೌಡ, ರಿಜ್ವಾನ್ ಹರ್ಷದ್, ಬಸವರಾಜ್ ಪಾಟೀಲ್, ಸಚಿವ ಎಂ.ಆರ್. ಸೀತಾರಾಂ, ವಿಜಯ್ ಸಿಂಗ್, ಶಾಸಕ ಸಿ.ಎನ್. ಅಶ್ವಥ್ ನಾರಾಯಣ್ ಮತ್ತಿತರರು ಭಾಗವಹಿಸಿದ್ದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ