ಒಣಮೀನಲ್ಲಿ ಗಾಂಜಾ: 6 ಮಂದಿ ಸರೆ

ganja in fish: 6 people are arrested

14-02-2018

ಬೆಂಗಳೂರು: ಒಣಮೀನಿನ ನಡುವೆ ಗಾಂಜಾ ಇಟ್ಟು ಯಾರಿಗೂ ಅನುಮಾನ ಬಾರದಂತೆ, ಮಾರಾಟ ಮಾಡುತ್ತಿದ್ದ 6 ಮಂದಿ ಗಾಂಜಾ ಮಾರಾಟಗಾರರನ್ನು ಬಂಧಿಸಿ ಬೃಹತ್ ಗಾಂಜಾ ಮಾರಾಟ ದಂಧೆಯನ್ನು ಆಗ್ನೇಯ ವಿಭಾಗದ ಪೊಲೀಸರು ಬೇಧಿಸಿ 130 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಕೋರಮಂಗಲ ಪೊಲೀಸರು ಕೊಳ್ಳೆಗಾಲ ಮೂಲದ ನವೀನ್ ಕುಮಾರ್ (29) ನನ್ನು ಬಂಧಿಸಿದರೆ, ಕೊತ್ತನೂರಿನ ಹರಿನಗರದ ಗೋವಿಂದ್ ರಾಜ್ (29), ಯಲಚೇನಹಳ್ಳಿಯ ಬಸವರಾಜ್ (28), ಕೊತ್ತನೂರಿನ ಮುಗೇಂದ್ರ ಅಲಿಯಾಸ್ ಮಹೇಂದ್ರನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಇವರ ಜೊತೆಗೆ ಮೈಕೋ ಲೇಔಟ್ ಪೊಲೀಸರು, ಬಸವಪುರದ ಜಗರ್ ಸಮನ್ (30) ಹಾಗೂ ಹಿಗಲೂರಿನ ಲೋಕನಾಥ್ ಸಹನಿ (32) ಎಂಬ ಗಾಂಜಾ ಮಾರಾಟಗಾರರನ್ನು ಬಂಧಿಸಿ, ಭಾರಿ ಪ್ರಮಾಣದ ಗಾಂಜಾ ಮಾರಾಟ ದಂಧೆಯನ್ನು ಬಯಲಿಗೆಳೆದಿದ್ದಾರೆ.

ಗಾಂಜಾ ಮಾರಾಟದಿಂದ ವಿಲ್ಲಾ, ಇನೋವಾ ಕಾರು ಖರೀದಿಸಿ ಲಕ್ಷಾಂತರ ರೂ. ಆದಾಯ ತೆರಿಗೆ ಪಾವತಿಸಿದ್ದ ರಾಚಪ್ಪನ ಸಹಚರನಾಗಿದ್ದ ಆರೋಪಿ ನವೀನ್ ಕುಮಾರ್, ಚಾಮರಾಜನಗರ, ಆಂಧ್ರ, ಇನ್ನಿತರ ಕಡೆಗಳಿಂದ ಗಾಂಜಾವನ್ನು ಖರೀದಿಸಿ ನಗರಕ್ಕೆ ಸಾಗಿಸಿ ಮಾರಾಟ ಮಾಡುತ್ತಿದ್ದ. ಆರೋಪಿ ನವೀನ್ ವಿಚಾರಣೆಯಲ್ಲಿ ಹಲವು ವರ್ಷಗಳಿಂದ ಗಾಂಜಾ ಮಾರಾಟ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದು, ಇದರಿಂದ ಬರುವ ಸಂಪಾದನೆಯಲ್ಲಿ ಹನೂರಿನಲ್ಲಿ ನಿವೇಶನವೊಂದನ್ನು ಖರೀದಿಸಿ ಮನೆ ನಿರ್ಮಾಣ ಮಾಡುತ್ತಿದ್ದುದನ್ನು ಬಾಯ್ಬಿಟ್ಟಿದ್ದಾನೆ.

ಹುಳಿಮಾವು ಪೊಲೀಸರು ಬಂಧಿಸಿರುವ ಗೋವಿಂದ್ ರಾಜ್ ಬಸವರಾಜ್ ಮುಗೇಂದ್ರ ಅಲಿಯಾಸ್ ಮಹೇಂದ್ರ ಗಾಂಜಾವನ್ನು ಒಣಮೀನಿನ ನಡುವೆ ಇಟ್ಟುಕೊಂಡು ನಗರಕ್ಕೆ ಸಾಗಿಸುತ್ತಿದ್ದ. ಹೋಟೆಲ್‍ಗಳಲ್ಲಿ ಚಪಾತಿಗಳನ್ನು ಪ್ಯಾಕ್ ಮಾಡುವ ರೀತಿ ಗಾಂಜಾವನ್ನು ರೋಲ್ ಮಾಡಿ ಗ್ರಾಹಕರಿಗೆ 200 ರಿಂದ 500 ರೂ. ಗಳಂತೆ ಮಾರಾಟ ಮಾಡುತ್ತಿದ್ದ. ಮೊಬೈಲ್ ಮೂಲಕವೂ ಸಂಪರ್ಕಿಸಿ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಆರೋಪಿಗಳನ್ನು ಪೊಲೀಸರು ಹೆಚ್ಚಿನ ತನಿಖೆಗೊಳಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ganja arrest ಮೊಬೈಲ್ ಒಣಮೀನು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ