ಖತರ್ನಾಕ್ ವಂಚಕರ ಬಂಧನ..!

Graduates did fraud for money..!

14-02-2018

ಬೆಂಗಳೂರು: ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ (ಪಿಜಿ) ಸೀಟುಗಳನ್ನು ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ. ಹಣ ಪಡೆದು ವಂಚಿಸುತ್ತಿದ್ದ ಇಬ್ಬರು ಖತರ್ನಾಕ್ ಪದವೀಧರರನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು 1ಕೋಟಿ 3 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯ ರಜತ್ ಶೆಟ್ಟಿ (31) ಹಾಗೂ ಕೊಡಿಗೆಹಳ್ಳಿಯ ಜಯ ಪ್ರಕಾಶ್ ಸಿಂಗ್ (31) ಬಂಧಿತ ಆರೋಪಿಗಳು. ನಗರದ ಬಿಟಿಎಂ ಲೇಔಟ್‍ನ 2ನೇ ಹಂತದಲ್ಲಿ ಗ್ಲೋಬಲ್ ಲರ್ನಿಂಗ್ ಅಂಡ್ ಎಜುಕೇಷನ್ ಕನ್ಸಲ್ಟೆನ್ಸಿ ಕಚೇರಿ ತೆಗೆದು ಪ್ರತಿಷ್ಠಿತ ಕಾಲೇಜುಗಳಲ್ಲಿ ಪಿಜಿ ಸೀಟು ಕೊಡಿಸುವುದಾಗಿ ವೈದ್ಯಕೀಯ ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದರು.

ವಂಚನೆಗೊಳಗಾದ ಸುದರ್ಶನ್, ಸಂದೀಪ್ ಹಾಗೂ ರಾಹುಲ್ ಕುಮಾರ್ ಎಂಬುವವರು ನೀಡಿದ್ದ ದೂರು ದಾಖಲಿಸಿ ತನಿಖೆ ಕೈಗೊಂಡ ಮೈಕೋ ಲೇಔಟ್ ಪೊಲೀಸ್ ಇನ್ಸ್ ಪೆಕ್ಟರ್ ಆರ್.ಎಂ.ಅಜಯ್ ಮತ್ತು ಅವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕುಂದಾಪುರ ಮೂಲದವನಾದ ರಜತ್ ಶೆಟ್ಟಿ ಬಿಇ ಪದವೀಧರನಾಗಿದ್ದಾನೆ. ಎರಡು ವರ್ಷಗಳ ಕಾಲ ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಕೆಲಸ ಮಾಡಿದ್ದು, ಮಣಿಪಾಲ್‍ನಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ಹಲವರಿಗೆ ವಂಚಿಸಿದ್ದ. ಈ ಸಂಬಂಧ 2013 ರಲ್ಲಿ ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ 8 ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ.

ಮತ್ತೊಬ್ಬ ಆರೋಪಿ ಜಯಪ್ರಕಾಶ್ ಸಿಂಗ್ ಜಾರ್ಖಂಡ್‍ನ ಧನ್ ಭಾಗ್ ಮೂಲದವನಾಗಿದ್ದು, ಬಿಬಿಎಂ ಪದವೀಧರನಾಗಿದ್ದಾನೆ. ಹಿಂದೆ ಮೆಡಿಕಲ್ ಕಾಲೇಜುಗಳಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ಹಲವರಿಗೆ ವಂಚಿಸಿದ್ದು, ಈತನ ವಿರುದ್ಧ ಸಂಜಯ್ ನಗರ ಹಾಗೂ ಕೊಡಿಗೆಹಳ್ಳಿ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ವಂಚನೆ ಹಣದಲ್ಲಿ ಮೋಜು ಮಸ್ತಿ ಮಾಡುತ್ತಾ ವಿಲಾಸಿ ಜೀವನ ನಡೆಸುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ.


ಸಂಬಂಧಿತ ಟ್ಯಾಗ್ಗಳು

graduates Medical seats ಪ್ರತಿಷ್ಠಿತ ಜಾರ್ಖಂಡ್‍


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ