'ಮಾಂಸ ತಿಂದು ದೇಗುಲಕ್ಕೆ ಹೋಗಿಲ್ಲ'13-02-2018

ಬೆಂಗಳೂರು: ‘ಆಹಾರ ಪದ್ಧತಿ ವೈಯಕ್ತಿಕ ವಿಚಾರ ಅದು ಅವರವರಿಗೆ ಸೇರಿದ್ದು’, ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಹುಲ್ ಗಾಂಧಿ ಮಾಂಸ ಸೇವಿಸಿ ದೇವಾಲಯಕ್ಕೆ ಹೋಗಿದ್ದಾರೆ ಎಂದು ಯಡಿಯೂರಪ್ಪ ಮಾಡಿದ್ದ ಟೀಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಆರೋಪ ಮಾಡಿರುವಂತೆ ರಾಹುಲ್ ಗಾಂಧಿಯವರು ದೇವಾಲಯಕ್ಕೆ ಹೋಗುವ ಮೊದಲು ಮಾಂಸಾಹಾರ ಸೇವನೆ ಮಾಡಿಯೂ ಇಲ್ಲ. ಇದನ್ನು ರಾಹುಲ್ ಗಾಂಧಿಯವರೇ  ಸ್ಪಷ್ಟಪಡಿಸಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಒಂದಲ್ಲ ನೂರು ಬಾರಿ ರಾಜ್ಯಕ್ಕೆ ಬರಲಿ. ಅದರಿಂದ ನಮಗೇನೂ ತೊಂದರೆ ಇಲ್ಲ. ಕಳೆದ ಬಾರಿ ಅವರು ಬೆಂಗಳೂರಿಗೆ ಬಂದಾಗ ನಮ್ಮದು ಹತ್ತು ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿದ್ದರು. ಮುಂದಿನ ಬಾರಿ ಬರುವಾಗ ಅದಕ್ಕೆ ದಾಖಲೆ ತರುತ್ತಾರಂತೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.ನಮ್ಮ ಸರ್ಕಾರದಲ್ಲಿ ಯಾವುದೇ ಕಮಿಷನ್ ವ್ಯವಹಾರ ಇಲ್ಲ, ಅಂತಹ ವ್ಯವಹಾರ ಏನಾದರೂ ನಡೆದಿದ್ದರೆ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರಬಹುದು, ಆ ಸರ್ಕಾರ ನೂರು ಪರ್ಸೆಂಟ್ ಕಮಿಷನ್ ಸರ್ಕಾರವಾಗಿತ್ತು ಎಂದು ದೂರಿದರು.

ರಾಹುಲ್ ಗಾಂಧಿಯವರ ಎರಡನೇ ಹಂತದ ರಾಜ್ಯ ಪ್ರವಾಸ ಮುಂಬೈ-ಕರ್ನಾಟಕ ಭಾಗದಲ್ಲಿ ಫೆಬ್ರವರಿ 24ರಿಂದ ಮೂರು ದಿನ ನಡೆಯಲಿದ್ದು, ಪಕ್ಷಕ್ಕೆ ಲಾಭವಾಗಲಿದೆ. ರಾಹುಲ್ ಗಾಂಧಿ ಹೋದ ಕಡೆ ಕಾಂಗ್ರೆಸ್ ಸೋಲುತ್ತದೆ ಎಂಬ ಬಿಜೆಪಿ ಹೇಳಿಕೆ ಸರಿಯಲ್ಲ. ಹಾಗಾದರೆ ಗುಜರಾತ್ ನಲ್ಲಿ ನಮ್ಮ ಪಕ್ಷ ಗೆಲುವಿನ ಸಮೀಪ ಹೋಗಲು ಹೇಗೆ ಸಾಧ್ಯವಾಯಿತು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ನಾನು ದೇಶದ 6ನೇ ಶ್ರೀಮಂತ ಮುಖ್ಯಮಂತ್ರಿ, 13 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದೇನೆ ಎಂದು ಸಮೀಕ್ಷೆಯೊಂದು ಹೇಳಿದೆ. ಅದು ನಮ್ಮ ಅವಿಭಕ್ತ ಕುಟುಂಬದ ಆಸ್ತಿ ಲೆಕ್ಕ. ಕಳೆದ ಚುನಾವಣೆಯಲ್ಲಿ ನಮ್ಮ ಒಟ್ಟು ಕುಟುಂಬದ ಆಸ್ತಿ  ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದೆ ಎಂದು ತಿಳಿಸಿದರು.

ಮಹದಾಯಿ ವಿಚಾರದಲ್ಲಿ  ಗೋವಾ ಸರ್ಕಾರ ನ್ಯಾಯಾಂಗ ನಿಂದನೆ ಅರ್ಜಿ ವಾಪಸ್ ಪಡೆದಿದೆ. ನಾವು ಯಾವುದೇ ಕಾಮಗಾರಿ ನಡೆಸಿಲ್ಲ, ನ್ಯಾಯಾಂಗ ನಿಂದನೆ ಆಗಿಲ್ಲ ಎಂದು ಮೊದಲೇ ಹೇಳಿದ್ದರೂ ಕೇಳಲಿಲ್ಲ. ಈಗ ಅವರಿಗೆ ಗೊತ್ತಾಗಿ, ಅವರಾಗಿಯೇ ನ್ಯಾಯಾಂಗ ನಿಂದನೆ ಅರ್ಜಿ ವಾಪಸ್ ಪಡೆದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

siddaramaiah Rahul Gandhi ಕಾಮಗಾರಿ ನ್ಯಾಯಾಂಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ