ಭಕ್ತಿಯಲ್ಲಿ ಮಿಂದೆದ್ದ ಶಿವ ಭಕ್ತರು

Maha Shivaratri celebrations in karnataka

13-02-2018

ಇಂದು ಮಹಾಶಿವರಾತ್ರಿ ಹಿನ್ನೆಲೆ ರಾಜ್ಯಾದ್ಯಂತ ದೇವಸ್ಥಾನಗಳಿಗೆ ಭಕ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ವಿಶೇಷ ದಿನವಾದ ಇಂದು ಮೈಸೂರಿನ ಅರಮನೆ ಆವರಣದಲ್ಲಿರುವ ಶ್ರೀ ತ್ರಿನೇಶ್ವರ ಲಿಂಗಕ್ಕೆ ಸ್ವರ್ಣ ಕೊಳಗ ಧಾರಣೆ ಮಾಡಲಾಯಿತು. ಮುಂಜಾನೆಯಿಂದಲೇ ರುದ್ರಾಭಿಷೇಕ, ಪಂಚಾಂಮೃತ ಅಭಿಷೇಕ ಸೇರಿದಂತೆ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಶಿವನ ದರ್ಶನಕ್ಕೆ ಭಕ್ತರು ಸಾಲಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.

ಇನ್ನು ಗದಗ ಜಿಲ್ಲೆಯಲ್ಲಿ ಶಿವರಾತ್ರಿ ಸಂಭ್ರಮ ಜೋರಾಗಿದೆ. ಜಿಲ್ಲೆಯ ಹಸಿರು ಕೆರೆ ಬಳಿ ಇರುವ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಅಭಿಷೇಕಗಳನ್ನು ನಸುಕಿನಿಂದಲೇ ತ್ರೀಕೂಟೇಶ್ವರನ ಸನ್ನಿಧಿಯಲ್ಲಿ ನೆರವೇರಿಸಲಾಯಿತು. ತ್ರಿಕೂಟೇಶ್ವರನ ದರ್ಶನಕ್ಕೆ ಅಪಾರ ಭಕ್ತರು ಆಗಮಿಸಿ ದರ್ಶನ ಪಡೆದುಕೊಳ್ಳತ್ತಿದ್ದಾರೆ.

ರಾಜ್ಯದ ಕರಾವಳಿ ಭಾಗದಲ್ಲೂ ಶಿವರಾತ್ರಿಯನ್ನು ಜನ ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಕ್ತರು ಬೆಳಗ್ಗಿನಿಂದಲೇ ಶಿವನ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೃತಾರ್ಥರಾದರು. ಮಂಗಳೂರಿನ ಕದ್ರಿ ಶ್ರೀಮಂಜುನಾಥ ದೇವಸ್ಥಾನ, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರ ಸೇರಿದಂತೆ ವಿವಿಧ ಶಿವನ ದೇವಸ್ಥಾನಗಳಲ್ಲಿ ಆರಾಧನೆಗಳು ನಡೆಯುತ್ತಿವೆ.

ರಾಮನಗರದಲ್ಲಿ ಶಿವನಾಮಸ್ಮರಣೆಯಲ್ಲಿ ಮಿಂದೇಳುತ್ತಿರುವ ಭಕ್ತರು ಮಹಾಶಿವರಾತ್ರಿಯ ಸಂಭ್ರಮದಲ್ಲಿದ್ದಾರೆ. ಜಿಲ್ಲೆಯ ಅರ್ಕೇಶ್ವರ, ರೇವಣಸಿದ್ದೇಶ್ವರ, ಚನ್ನಪಟ್ಟಣದ ಮಳೂರು ಪಾರ್ವತಿ ಕೈಲಾಸೇಶ್ವರ, ಕಲಿನಾಥೇಶ್ವರ, ಕೋಡಂಬಳ್ಳಿಯ ಮರಳೇಶ್ವರ, ಮಾಗಡಿಯ ಸೋಮೇಶ್ವರ, ಕನಕಪುರದ ಶಿವನಾಂಕರೇಶ್ವರ ಸೇರಿದಂತೆ ಹಲವು ದೇವಸ್ಥಾನಗಳಿಗೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶಿವನ ದರ್ಶನ ಪಡೆಯುತ್ತಿದ್ದಾರೆ. ಒಟ್ಟಾರೆ ರಾಜ್ಯಾದ್ಯಂತ ಮಹಾಶಿವರಾತ್ರಿ ಸಂಭ್ರಮ-ಸಂತೋಷದಿಂದ ಆಚರಿಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mahashivratri karnataka ಶಿವನಾಮ ಸಂಭ್ರಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ