ಹಿಂದೂ ಧರ್ಮದ ಗುತ್ತಿಗೆ?

Ramalinga Reddy allegation on BJP president amit shah

12-02-2018

ಬೆಂಗಳೂರು: ಬಿಜೆಪಿ ಅಧ್ಯಕ್ಷ ಅಮಿತ್ ಷಾ ಜೈನಧರ್ಮದವರಾದರೂ ಹಿಂದೂ ಧರ್ಮವನ್ನು ಗುತ್ತಿಗೆಗೆ ಪಡೆದವರಂತೆ ವರ್ತಿಸುತ್ತಿದ್ದಾರೆ. ಇವರು ಹಿಂದೂ ಧರ್ಮದ ಬಗ್ಗೆ ನಮಗೆ ಪಾಠ ಮಾಡುವುದು ಎಷ್ಟು ಸರಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆಕ್ಷೇಪಿಸಿದ್ದಾರೆ.

ಕೋರಮಂಗಲದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಕೇವಲ ವೋಟಿನ ಹಿಂದುಗಳು. ನಾವು ವೋಟಿಗಾಗಿ ಹಿಂದುತ್ವದ ವೇಷ ತೊಡುವುದಿಲ್ಲ. ನಮ್ಮ ಪಕ್ಷದ ಮುಖಂಡರು ದೇವಸ್ಥಾನ ಪ್ರವೇಶಿಸಿದರೆ ಸಾಕು, ಬಿಜೆಪಿಯವರಿಗೆ ಇನ್ನಿಲ್ಲದ ಯಾತನೆ ಶುರುವಾಗುತ್ತದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ದೇಗುಲ ಭೇಟಿಯನ್ನು ಯಡಿಯೂರಪ್ಪ ಟೀಕಿಸುತ್ತಿದ್ದಾರೆ ಆದರೆ, ಅದರಲ್ಲಿ ತಪ್ಪೇನಿದೆ?. ಹಿಂದೆ ರಾಜೀವ್ ಗಾಂಧಿ, ಇಂದಿರಾ ಗಾಂಧಿಯವರೂ ಕೂಡ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರು. ಹೀಗಿದ್ದರೂ ಬಿಜೆಪಿಯವರು ಏಕೆ ಕಿರುಚಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಬಿಜೆಪಿಯವರು ನಾವೇ ಹಿಂದೂ ಧರ್ಮದ ವಾರಸುದಾರರು ಎಂದು ಹೇಳಿಕೊಳ್ಳಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಸ್ಲಮ್  ಭೇಟಿಯನ್ನು ಟೀಕಿಸಿದ ರಾಮಲಿಂಗಾ ರೆಡ್ಡಿ, ಸ್ಲಮ್ಮುಗಳಿಗೆ ಹೋಗುವುದಾದರೆ ಬೆಳಗಿನ ಹೊತ್ತು ಹೋಗಬೇಕು, ಆದರೆ ಇವರು ರಾತ್ರಿ ಏಕೆ ಹೋಗುತ್ತಿದ್ದಾರೆ ಎಂದು ಪ್ರಶ್ನಿಸಿದರು. ಬಿಜೆಪಿಯವರು ಸ್ಲಮ್ ಗಳಲ್ಲಿ ವಾಸ್ತವ್ಯ ಹೂಡಿ ಅವನ್ನು ಉದ್ದಾರ ಮಾಡುತ್ತಾರಾ? ಇವರು ಅಧಿಕಾರದಲ್ಲಿದ್ದಾಗ ಸ್ಲಮ್ ಮುಕ್ತ ಕರ್ನಾಟಕ ಮಾಡಬಹುದಿತ್ತಲ್ಲ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಾನು ಕೊಟ್ಟ ಭರವಸೆಗಳನ್ನೆಲ್ಲ ಈಡೇರಿಸಿದೆ. ಆದರೆ ಬಿಜೆಪಿಯವರು ಚುನಾವಣೆಗೆ ಮುಂಚೆ ಭರವಸೆ ಕೊಟ್ಟು ಆ ನಂತರ ಮರೆತು ಬಿಡುತ್ತಾರೆ ಎಂದು ಆರೋಪಿಸಿದರು.


ಸಂಬಂಧಿತ ಟ್ಯಾಗ್ಗಳು

Ramalinga Reddy Amit Shah ಭರವಸೆ ಹಿಂದೂ ಧರ್ಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ