ಐಟಿಐ ವಿದ್ಯಾರ್ಥಿಗಳತ್ತ ಸರ್ಕಾರದ ಚಿತ್ತ..!

Government planing to pay fees of private ITI student fee..!

12-02-2018

ಬೆಂಗಳೂರು: ರಾಜ್ಯಾದ್ಯಂತ ಖಾಸಗಿ ಐಟಿಐಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶುಲ್ಕವನ್ನು ಭರಿಸಲು ಸರ್ಕಾರ ಮುಂದಾಗಿದೆ. ಸಧ್ಯಕ್ಕೆ ರಾಜ್ಯದಲ್ಲಿರುವ 65ಕ್ಕೂ ಹೆಚ್ಚು ಖಾಸಗಿ ಐಟಿಐಗಳು ಸರ್ಕಾರದಿಂದ ಓರ್ವ ವಿದ್ಯಾರ್ಥಿಯ ಲೆಕ್ಕದಲ್ಲಿ ಎರಡೂವರೆ ಸಾವಿರ ರೂ. ಶುಲ್ಕ ಪಡೆಯುತ್ತಿದ್ದು ಇದನ್ನು ಹೆಚ್ಚಳ ಮಾಡುವಂತೆ ಇಲ್ಲವೇ ಖಾಸಗಿ ಐಟಿಐಗಳಿಗೆ ವೇತನಾನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಹೀಗಾಗಿ ಈ ಎರಡರ ಪೈಕಿ ಒಂದನ್ನು ಜಾರಿಗೊಳಿಸುವ ಲೆಕ್ಕಾಚಾರ ಸರ್ಕಾರದಲ್ಲಿದ್ದು ಈಗಾಗಲೇ ಬಜೆಟ್ ಪೂರ್ವಭಾವಿ ಸಭೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಎರಡು ಬೇಡಿಕೆಗಳ ಪೈಕಿ ಯಾವುದನ್ನು ಈಡೇರಿಸುವುದು ಸೂಕ್ತ ಎಂದು ಯೋಚಿಸುತ್ತಿದ್ದಾರೆ.

ಸರ್ಕಾರದ ಉನ್ನತಾಧಿಕಾರಿಗಳು ವೇತನಾನುದಾನವನ್ನು ಹೆಚ್ಚಳ ಮಾಡುವ ಬದಲು ಖಾಸಗಿ ಐಟಿಐಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿ ವಿದ್ಯಾರ್ಥಿಯ ಶುಲ್ಕ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಸಲಹೆ ನೀಡಿದ್ದಾರೆ. ಪ್ರತಿ ವಿದ್ಯಾರ್ಥಿಗಳ ಲೆಕ್ಕದಲ್ಲಿ ಈಗ ನೀಡುತ್ತಿರುವ ಎರಡೂವರೆ ಸಾವಿರ ರೂ. ಶುಲ್ಕವನ್ನು ಐದು ಸಾವಿರಕ್ಕೇರಿಸಬೇಕು, ಮತ್ತು ವ್ಯಾಸಂಗ ಮಾಡುತ್ತಿರುವ ಪ್ರತಿ ವಿದ್ಯಾರ್ಥಿ ಐನೂರು ರೂ ಶುಲ್ಕವನ್ನು ಸಾಂಕೇತಿಕವಾಗಿ ಭರಿಸುವಂತೆ ನೋಡಿಕೊಳ್ಳಬೇಕು.

ಹೀಗೆ ಮಾಡುವುದರ ಜೊತೆ ಪ್ರತಿ ವಿದ್ಯಾರ್ಥಿಯ ನೋಂದಣಿ ಸಂದರ್ಭದಲ್ಲಿ ಆಧಾರ್ ಕಾರ್ಡ್ ಕಡ್ಡಾಯ ಮಾಡಿದರೆ ಸರ್ಕಾರ ವಿದ್ಯಾರ್ಥಿಗಳ ಲೆಕ್ಕದಲ್ಲಿ ನೀಡುವ ಶುಲ್ಕ ಪ್ರಮಾಣ ಸಮರ್ಪಕವಾಗಿ ಬಳಕೆಯಾದಂತಾಗುತ್ತದೆ ಎಂಬುದು ಉನ್ನತಾಧಿಕಾರಿಗಳ ವಾದ.

ವೇತನಾನುದಾನಕ್ಕಿಂತ ವಿದ್ಯಾರ್ಥಿಗಳ ಲೆಕ್ಕದಲ್ಲಿ ನೀಡುತ್ತಿರುವ ಶುಲ್ಕದ ಪ್ರಮಾಣವನ್ನು ಹೆಚ್ಚಳ ಮಾಡಿದರೆ ಖಾಸಗಿ ಐಟಿಐಗಳ ಬೇಡಿಕೆಯನ್ನೂ ಈಡೇರಿಸಿದಂತಾಗುತ್ತದೆ. ವಿದ್ಯಾರ್ಥಿಗಳ ಹಿತವನ್ನೂ ಕಾಪಾಡಿದಂತಾಗುತ್ತದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ವಿವರಿಸಿದ್ದಾರೆ. ನಿರೀಕ್ಷೆಯಂತೆ ನಡೆದರೆ ಫೆಬ್ರವರಿ ಹದಿನಾರರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ 2018-19 ನೇ ಸಾಲಿನ ಬಜೆಟ್‍ನಲ್ಲಿ ಈ ಕುರಿತು ಅಧಿಕೃತ ಘೋಷಣೆಯಾಗಲಿದೆ.


ಸಂಬಂಧಿತ ಟ್ಯಾಗ್ಗಳು

colleges ITI ಲೆಕ್ಕಾಚಾರ ವೇತನಾನುದಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ