ಫೇಸ್‍ಬುಕ್' ಸಹಾಯದಿಂದ ಪತ್ತೆಯಾದ ವೃದ್ಧ

Kannada News

27-04-2017

ಬೆಂಗಳೂರುಏ.27- ಪುತ್ರನ ಮನೆಯ ಗೃಹ ಪ್ರವೇಶಕ್ಕೆ ಗುಜರಾತ್‍ನಿಂದ ನಗರಕ್ಕೆ ಬಂದು ನಾಪತ್ತೆಯಾಗಿದ್ದ ವೃದ್ಧರೊಬ್ಬರು ಸಾಮಾಜಿಕ ಜಾಲತಾಣ `ಫೇಸ್‍ಬುಕ್' ಸಹಾಯದಿಂದ ಪತ್ತೆಯಾಗಿದ್ದಾರೆ.
ಗುಜರಾತ್ ಮೂಲದ ಮಹೇಂದ್ರ (65) ಪತ್ತೆಯಾದವರು.ತನ್ನ ಪುತ್ರ ಹಿತೇಶ್ ವೈಟ್‍ಫೀಲ್ಡ್‍ನಲ್ಲಿ ನಿರ್ಮಿಸಿದ್ದ ಮನೆಯ ಗೃಹ ಪ್ರವೇಶಕ್ಕೆ ಗುಜರಾತ್‍ನಿಂದ ಪತ್ನಿಯೊಂದಿಗೆ  ಮಹೇಂದ್ರ ಬಂದಿದ್ದರು.ಕಳೆದ ಏ.23ರಂದು ಸಂಜೆ 6ರ ವೇಳೆ ಮಹೇಂದ್ರ ಅವರು ಪತ್ನಿಯೊಂದಿಗೆ ವೈಟ್‍ಫೀಲ್ಡ್‍ನ ಬೋರ್‍ವೆಲ್ ರಸ್ತೆಯಲ್ಲಿರುವ ಹೇರ್ ಸಲೂನ್‍ಗೆ ತೆರಳಿದ್ದು ಪತ್ನಿ ತರಕಾರಿ ತರುವಷ್ಟರಲ್ಲಿ ಮಹೇಂದ್ರ ಅಲ್ಲಿಂದ ಕಾಣೆಯಾಗಿದ್ದರು.
ಸ್ಥಳೀಯರನ್ನು ವಿಚಾರಿಸದರೂ ಪತಿ ಬಗ್ಗೆ ಮಾಹಿತಿ ಸಿಗುವುದಿಲ್ಲ.ಕೂಡಲೇ ಪುತ್ರ ಹಿತೇಶ್‍ಗೆ ಕರೆ ಮಾಡಿ ತಂದೆ ಕಾಣೆಯಾಗಿರುವ ವಿಷಯ ತಿಳಿಸಿದ್ದಾರೆ. ಮಹೇಂದ್ರ ಅವರಿಗೆ ಬೆಂಗಳೂರಿನ ಪರಿಚಯವಿಲ್ಲ. ಅಲ್ಲದೆ, ಕನ್ನಡ ಬರುವುದಿಲ್ಲ. ನಡೆದುಕೊಂಡೆ ಸುಮಾರು 7-8 ಕಿ.ಮೀ ದೂರ ಕ್ರಮಿಸಿದ್ದಾರೆ.
ಈ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಗಾಯಗೊಂಡಿದ್ದರು. ನೋವಿನಿಂದ ಬಳಲಿದ ಅವರು ಬೆಳ್ಳಂದೂರಿನ ಇಕೋಸ್ಪೆಸ್ ಬಳಿಯ ಆಟೋ ನಿಲ್ದಾಣದಲ್ಲಿ ಇಡೀ ರಾತ್ರಿ ಕಳೆದಿದ್ದಾರೆ. ಮರುದಿನ ಬೆಳಗ್ಗೆ 8 ಗಂಟೆ ಸುಮಾರಿಗೆ ಆಟೋ ಚಾಲಕರೊಬ್ಬರು ವೃದ್ಧ ಮಹೇಂದ್ರವರನ್ನು ಕಂಡು ಬೆಳ್ಳಂದೂರು ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಚಿಕಿತ್ಸೆ ಕೊಡಿಸಿದ್ದರು.
ವೃದ್ಧರೊಬ್ಬರ ಬಗ್ಗೆ ಪೊಲೀಸರು ಕಮ್ಯೂನಿಟಿ ಪೊಲೀಸಿಂಗ್ ಸದಸ್ಯ ವಿಕಾಸ್‍ಗೆ ತಿಳಿಸಿದ್ದರು. ಅಲ್ಲದೇ ಹಿತೇಶ್ ಸ್ನೇಹಿತರೊಬ್ಬರು ಫೇಸ್‍ಬುಕ್‍ನಲ್ಲಿ ಮಹೇಂದ್ರ ಅವರ ಫೋಟೋ ಹಾಕಿ ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಪ್ರಕಟಿಸಿದ್ದರು. ಏ.25ರಂದು ಇದನ್ನು ಗಮನಿಸಿದ ವಿಕಾಸ್, ಹಿತೇಶ್‍ಗೆ ಕರೆ ಮಾಡಿ ತಂದೆ ಪತ್ತೆ ಬಗ್ಗೆ ಮಾಹಿತಿ ನೀಡಿದರು. ಬಳಿಕ ಠಾಣೆಗೆ ಬಂದ ಹಿತೇಶ್ ಕಾಣೆಯಾಗಿದ್ದ ತಂದೆಯನ್ನು ಕರೆದುಕೊಂಡು ಹೋಗಿದ್ದಾರೆ.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ