ಪ್ಯಾಡ್ ಮ್ಯಾನ್ ಸೂಪರ್ ಮ್ಯಾನ್..!

pad man super man..!

09-02-2018

ತನ್ನ ಕಥಾ ವಸ್ತುವಿನ ಕಾರಣಕ್ಕಾಗಿ ನಿರ್ಮಾಣ ಹಂತದಿಂದಲೂ ಸಾಕಷ್ಟು ಸುದ್ದಿ ಮಾಡಿದ್ದ ಪ್ಯಾಡ್ ಮ್ಯಾನ್ ಸಿನೆಮಾ ತೆರೆಗೆ ಬಂದಿದೆ. ಅಕ್ಷಯ್ ಕುಮಾರ್, ಸೋನಮ್ ಕಪೂರ್, ರಾಧಿಕಾ ಆಪ್ಟೆ ಮತ್ತಿತರರು ತಾರಾಗಣದಲ್ಲಿರುವ ಈ ಚಿತ್ರವನ್ನು ಆರ್. ಬಾಲ್ಕಿ ನಿರ್ದೇಶಿಸಿದ್ದಾರೆ. 
140 ನಿಮಿಷಗಳ ಈ ಸಿನೆಮಾವನ್ನು ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಮತ್ತು ಇತರೆ ಮೂರು ಕಂಪನಿಗಳು ಸೇರಿ ನಿರ್ಮಾಣ ಮಾಡಿವೆ. 

ಭಾರತದ ಬಹುತೇಕ ಹಳ್ಳಿಗಳಲ್ಲಿನ ಮಹಿಳೆಯರು, ಸ್ಯಾನಿಟರಿ ನ್ಯಾಪ್ಕಿನ್ ಬಗ್ಗೆ ಗೊತ್ತಿಲ್ಲದ ಕಾರಣ ಮತ್ತು ಗೊತ್ತಿದ್ದರೂ ಹಣ ಕೊಟ್ಟು ಅವನ್ನು ಕೊಳ್ಳಲು ಶಕ್ತಿ ಇಲ್ಲದ ಕಾರಣ, ತಮ್ಮ ಋುತುಚಕ್ರದ ವೇಳೆ ಶುಚಿಯಿಲ್ಲದ ಬಟ್ಟೆಬರೆಗಳನ್ನು ಬಳಸಿ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಇಂಥ ಸನ್ನಿವೇಶದಲ್ಲಿ ಹೊಸದಾಗಿ ಮದುವೆಯಾದ ವೆಲ್ಡರ್ ವೃತ್ತಿಯ ಒಬ್ಬ ವ್ಯಕ್ತಿ, ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕೆ ಮತ್ತು ಬಳಕೆಗೆ ಬಗ್ಗೆ ಅರಿವು ಮೂಡಿಸುವುದೇ ಈ ಸಿನೆಮಾದ ಕಥಾ ವಸ್ತು.
ಈ ಸಿನೆಮಾ ತಮಿಳುನಾಡಿನ ಅರುಣಾಚಲಮ್ ಮುರುಗನಾಥಮ್ ಅವರ ನಿಜ ಜೀವನದ ಕಥೆ. ಸೂಕ್ಷ್ಮ ಕಥಾ ವಸ್ತುವನ್ನು ಅತ್ಯುತ್ತಮವಾಗಿ ನಿಭಾಯಿಸಿರುವ ನಿರ್ದೇಶಕ ಬಾಲ್ಕಿ, ಅದನ್ನು ಒಳ್ಳೆಯ ಕಮರ್ಶಿಯಲ್ ಸಿನೆಮಾ ಆಗಿಸಿದ್ದಾರೆ. ಚಿತ್ರಕಥೆ ಮತ್ತು ಸಂಭಾಷಣೆಗಳು ಉತ್ತಮವಾಗಿದ್ದು ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ನಾಯಕ ಅಕ್ಷಯ್ ಕುಮಾರ್ ವಿಶ್ವಸಂಸ್ಥೆಯಲ್ಲಿ ಮಾಡುವ ಭಾಷಣವಂತೂ ಭಾರಿ ಚಪ್ಪಾಳೆ ಗಿಟ್ಟಿಸುತ್ತದೆ.

ಚಿತ್ರದ ಮೊದಲ ದೃಶ್ಯದಿಂದ ಕಡೆಯವರೆಗೂ ಸ್ಯಾನಿಟರಿ ಪ್ಯಾಡ್ ಗಳ ಬಗ್ಗೆಯೇ ಮಾತನಾಡುವ ಸಿನೆಮಾ, ಎಲ್ಲಿಯೂ ಮುಜುಗರ ಉಂಟುಮಾಡುವುದಿಲ್ಲ. ಅಭಿನಯಕ್ಕಾಗಿ ಪ್ರಶಸ್ತಿ ಗಿಟ್ಟಿಸುವ ಮಟ್ಟದಲ್ಲಿ ನಟಿಸಿರುವ ಅಕ್ಷಯ್ ಕುಮಾರ್ ಗೆ ರಾಧಿಕಾ ಆಪ್ಟೆ ಮತ್ತು ಸೋನಮ್ ಕಪೂರ್ ಅಷ್ಟೇ ಉತ್ತಮವಾದ ರೀತಿಯಲ್ಲಿ ಸಾಥ್ ನೀಡಿದ್ದಾರೆ. 

ನಿಜವಾದ ಲೊಕೇಷನ್ಗಳು ಮತ್ತು ಪರಿಣಾಮಕಾರಿ ಹಿನ್ನೆಲೆ ಸಂಗೀತ, ಚಿತ್ರ ರಸಿಕರ ಮನಗೆಲ್ಲುತ್ತದೆ. ಆದರೆ, ಸಿನೆಮಾದ ಮೊದಲ ಅರ್ಧದಲ್ಲಿನ ಕೆಲವು ದೃಶ್ಯಾವಳಿಗಳು ತುಂಬಾ ಉದ್ದವಾಗಿದ್ದು ಅನಗತ್ಯವಾಗಿ ಎಳೆಯಲಾಗಿದೆ. ನೆನಪಿನಲ್ಲಿ ಉಳಿಯುವಂಥ ಯಾವುದೇ ಹಾಡು ಮತ್ತು ಅಂಥ ಮನರಂಜನೆ ಇಲ್ಲದಿರುವುದು, ಸಿನೆಮಾದಲ್ಲಿನ ಕೊರತೆಗಳು. 

ಸಂದೇಶಾತ್ಮಕವಾಗಿರುವ ಸಿನೆಮಾದ ವಸ್ತು ಮತ್ತು ಅಕ್ಷಯ್ ಕುಮಾರ್ಗಿರುವ ಮಾಸ್ ಅಪೀಲ್ ವೀಕ್ಷಕರನ್ನು, ಅದರಲ್ಲೂ ಮಹಿಳೆಯರನ್ನಂತೂ ಥಿಯೇಟರ್ಗೆ ಕರೆತರುವುದರಲ್ಲಿ ಅನುಮಾನವಿಲ್ಲ, ಹೀಗಾಗಿ, ಪ್ಯಾಡ್ ಮ್ಯಾನ್ ಚಿತ್ರ, ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಸಾಧನೆ ಮಾಡುವ ತಾಕತ್ ಹೊಂದಿದೆ. 100 ಕೋಟಿಗೂ ಹೆಚ್ಚು ಗಳಿಕೆಯ ಅಕ್ಷಯ್ ಕುಮಾರ್ ಸಿನೆಮಾಗಳ ಲಿಸ್ಟ್ಗೆ ಇದೂ ಕೂಡ ಸೇರುವ ಸಾಧ್ಯತೆಗಳೇ ಹೆಚ್ಚು.-ಸಿನೆಮಾ ವಿಮರ್ಶೆ ಅನೀಸ್ ಮೊರಾಬ್.


ಸಂಬಂಧಿತ ಟ್ಯಾಗ್ಗಳು

akshay kumar pad man ಥಿಯೇಟರ್ ವಿಮರ್ಶೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ