ಎಲ್ಲಿದೆ ಸರ್ಕಾರ? ಎಲ್ಲಿದೆ ಸಂವೇದನೆ? 

bisi oota workers protest v/s Government

09-02-2018

ಬೆಂಗಳೂರು: ಕನಿಷ್ಟ ವೇತನ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿರುವ ಬಿಸಿಯೂಟ ನೌಕರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಹೋರಾತ್ರಿ ಧರಣಿ ನಡೆಸುತ್ತಿದ್ದ 6 ಮಂದಿ ಕಾರ್ಯಕರ್ತರು ಅಸ್ವಸ್ಥಗೊಂಡಿದ್ದು, ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದಿರುವ ಸುಮಾರು 10 ಸಾವಿರಕ್ಕೂ ಹೆಚ್ಚು ಬಿಸಿಯೂಟ ತಯಾರಕರು ಸರಿಯಾಗಿ ಊಟ, ನಿದ್ದೆಗಳಿಲ್ಲದೆ ರಸ್ತೆ ಮಗ್ಗುಲಲ್ಲಿ ಮಲಗಿ ಪ್ರತಿಭಟಿಸುತ್ತಿದ್ದಾರೆ. 

ಇದೇ ವೇಳೆ, ಮಧ್ಯಾಹ್ನದ ಆಹಾರವಾಗಿ ಬಿಸಿಯೂಟವನ್ನೇ ನಂಬಿಕೊಂಡಿದ್ದ 60 ಲಕ್ಷಕ್ಕೂ ಹೆಚ್ಚು ಮಕ್ಕಳು ಪರದಾಡುತ್ತಿದ್ದಾರೆ. ಇನ್ನೇನು ಪರೀಕ್ಷೆಗಳು ಹತ್ತಿರ ಬರುತ್ತಿರುವ ಇಂಥ ಸಮಯದಲ್ಲಿ, ಮಧ್ಯಾಹ್ನದ ಊಟ ಸಿಗದಿದ್ದರೆ ಈ ಮಕ್ಕಳು ಹೇಗೆ ತಾನೆ ಓದಿನ ಕಡೆಗೆ ಗಮನ ಹರಿಸಲು ಸಾಧ್ಯ?
ಪರಿಸ್ಥಿತಿ ಈ ಹಂತ ತಲುಪಿದ್ದರೂ ಕೂಡ, ರಾಜ್ಯ ಸರ್ಕಾರವಾಗಲಿ ಅಥವ ಪ್ರತಿಪಕ್ಷಗಳ ನಾಯಕರಾಗಿ ಈ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿ ತಕ್ಷಣಕ್ಕಾದರೂ ಒಂದು ಪರಿಹಾರ ಕಂಡುಹಿಡಿಯಲು ಮುಂದಾಗದಿರುವುದು ರಾಜಕಾರಣಿಗಳ ನಿರ್ಲಕ್ಷ್ಯಕ್ಕೆ ಮತ್ತು ವ್ಯವಸ್ಥೆಯ ವೈಫಲ್ಯಕ್ಕೆ ಒಂದು ದೊಡ್ಡ ಉದಾಹರಣೆಯಾಗಿದೆ.

ಬಿಸಿಯೂಟದ ಸಿಬ್ಬಂದಿ ಮುಷ್ಕರದ ಬಗ್ಗೆ ಮಾಧ್ಯಮಗಳು ಒಂದಿಷ್ಟು ಸುದ್ದಿ ಪ್ರಸಾರ ಮಾಡುತ್ತಿವೆ. ಆದರೆ, ಸುಮಾರು 60 ಲಕ್ಷ ಮಕ್ಕಳ ದಿನ ನಿತ್ಯದ ಬದುಕು ಮತ್ತು ಭವಿಷ್ಯದ ಮೇಲೆ ಪ್ರಭಾವ ಬೀರುವಂಥ ಈ ಸುದ್ದಿಗೆ ನೀಡಬೇಕಾದ ಮಟ್ಟದ ಪ್ರಾಶಸ್ತ್ಯ ಸಿಗುತ್ತಿದ್ದಂತೆ ಕಾಣುತ್ತಿಲ್ಲ. ಇದರ ಜೊತೆಗೆ, ಕಳೆದ ಎರಡು ಮೂರು ದಿನಗಳಿಂದ ಬಹುತೇಕ ನ್ಯೂಸ್ ಚಾನಲ್ ಗಳಲ್ಲಿ ಕಾರ್ಪೊರೇಟರ್ ರೇಖಾ ಪತಿ ಕದಿರೇಶನ್ ಕೊಲೆ ವಿಚಾರದ ವಿಶ್ಲೇಷಣೆಗೆ ಹೆಚ್ಚು ಆದ್ಯತೆ ಸಿಕ್ಕಿದ್ದು ಮತ್ತು ಆ ಗದ್ದಲದಲ್ಲಿ ಬಿಸಿಯೂಟದವರ ಕೂಗು ಕೇಳದಂತಾಗಿದ್ದೂ ಕೂಡ ವಿಪರ್ಯಾಸವಲ್ಲದೆ ಬೇರೇನೂ ಅಲ್ಲ.


ಸಂಬಂಧಿತ ಟ್ಯಾಗ್ಗಳು

bisi oota Government ಕಾರ್ಯಕರ್ತ ಅಸ್ವಸ್ಥ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ