ಕದಿರೇಶನ್ ಕತೆ...

BBMP councillor kadiresan story

08-02-2018

ಬೆಂಗಳೂರು: ದುಷ್ಕರ್ಮಿಗಳಿಂದ ಹಾಡುಹಗಲೇ ಕೊಲೆಯಾದ ಛಲವಾದಿ ಪಾಳ್ಯ ಬಿಬಿಎಂಪಿ ಸದಸ್ಯೆ ರೇಖಾ ಪತಿ ಕದಿರೇಶನ್ ಕೆಲವು ವರ್ಷಗಳ ಹಿಂದಷ್ಟೇ ರೌಡಿಸಮ್ ತೊರೆದು ಜನನಾಯಕರಾಗಿ ಬೆಳೆದವನು. ಜೋಪಡಿ ರಾಜೇಂದ್ರ ಮತ್ತು ಗಾರ್ಡನ್ ದಾಸ ಎಂಬ ಹಳೆ ಖತರ್ನಾಕ್ ರೌಡಿಗಳ ಕೊಲೆ ಆರೋಪಿಯಾಗಿದ್ದ ಕದಿರೇಶನ್, 2002ರ ನಂತರ ಸಮಾಜಸೇವೆಯಲ್ಲಿ ತೊಡಗಿ ನಂತರ ಸ್ಥಳೀಯ ಮುಖಂಡನಾಗಿ ಗುರುತಿಸಿಕೊಂಡಿದ್ದ.

ಹಿಂದೆ ಕಾಟನ್ ಪೇಟೆಯ ವಿನಾಯಕ ಚಿತ್ರಮಂದಿರ ಸಮೀಪ ನಡೆಯುತ್ತಿದ್ದ ಗಾಂಜಾ ಮಾಫಿಯಾವನ್ನು ಜೋಪಡಿ ರಾಜೇಂದ್ರ ನಿಯಂತ್ರಿಸುತ್ತಿದ್ದು ಆ ಪ್ರದೇಶದಲ್ಲಿ ಆತನ ಮಾತಿಗೆ ಎದುರಾಡುವವರೇ ಇರಲಿಲ್ಲ. ಇಂಥ ವ್ಯಕ್ತಿಯನ್ನು ಮುಗಿಸಿದರೆ ಇಡೀ ಏರಿಯಾ ನನ್ನ ಹಿಡಿತಕ್ಕೆ ಬರಲಿದೆ ಎನ್ನುವ ಕಾರಣಕ್ಕೆ  ರಾಜೇಂದ್ರನನ್ನು ಕೊಲೆ ಮಾಡಲಾಗಿತ್ತು. ರಾಜೇಂದ್ರನ ಕೊಲೆ ನಂತರ ಛಲವಾದಿ ಪಾಳ್ಯದಲ್ಲಿ ಕದಿರೇಶನ್ ಹೆಸರು ಚಾಲ್ತಿಗೆ ಬಂತು.

2002ರಲ್ಲಿ ನಡೆದ ಗಾರ್ಡನ್ ದಾಸ ಹತ್ಯೆ ನಂತರ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕದಿರೇಶನ್ ಹೆಸರು ರೌಡಿ ಪಟ್ಟಿ ಸೇರಿತ್ತು. ಆ ವೇಳೆಗಾಗಲೇ ಏರಿಯಾದಲ್ಲಿ ಸಾಕಷ್ಟು ಪ್ರಭಾವ ಬೆಳೆಸಿಕೊಂಡಿದ್ದ ಕದಿರೇಶನ್, ಬಿಜೆಪಿ ಸೇರ್ಪಡೆಗೊಂಡು ತನ್ನ ಪತ್ನಿ ರೇಖಾ ಅವರನ್ನು ಬಿಬಿಎಂಪಿ ಚುನಾವಣೆಗೆ ನಿಲ್ಲಿಸಿ ಅತಿಹೆಚ್ಚು ಮತಗಳಿಂದ ಗೆಲ್ಲಿಸಿಕೊಂಡಿದ್ದ. ಮತ್ತೊಂದು ಬಿಬಿಎಂಪಿ ಚುನಾವಣೆಯಲ್ಲೂ ರೇಖಾ ಗೆಲುವು ಸಾಧಿಸಿದ ನಂತರ ಕದಿರೇಶನ್ ಪ್ರಭಾವ ಮತ್ತಷ್ಟು ಹೆಚ್ಚಾಗಿ ಈ ಭಾಗದ ಜನನಾಯಕನಾಗಿ ಬೆಳೆದಿದ್ದ.
ಛಲವಾದಿ ಪಾಳ್ಯ ಸುತ್ತಮುತ್ತಲ ಪ್ರದೇಶದಲ್ಲಿ ಇಂದಿಗೂ ಇರುವ ಗಾಂಜಾ ಮಾಫಿಯಾವನ್ನು ಮಟ್ಟ ಹಾಕಲು ಕದಿರೇಶನ್ ಮುಂದಾದ ಹಿನ್ನೆಲೆಯಲ್ಲೇ ಆತನ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಕದಿರೇಶನ್ ಗೂ ಏರಿಯಾದಲ್ಲೊಬ್ಬ ಪ್ರತಿಸ್ಪರ್ಧಿ ಇದ್ದ. ಅವನೇ ಪೀಟರ್.

ಸದ್ಯಕ್ಕೆ ಜೈಲಿನಲ್ಲಿರುವ ಪೀಟರ್ ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಿದ್ದ. ನಾನು ಬಿಡುಗಡೆಯಾಗಿ ಹೊರಬರುವ ಮುನ್ನ ನನ್ನ ಎದುರಾಳಿ ಇರಬಾರದು, ಛಲವಾದಿ ಪಾಳ್ಯದಲ್ಲಿ ನಾನು ಇರಬೇಕು, ಇಲ್ಲ ಕದಿರೇಶನ್ ಇರಬೇಕು ಎಂದು ತನ್ನ ಸಹಚರರಿಗೆ ಪೀಟರ್ ಹೇಳಿದ್ದ ಎನ್ನಲಾಗಿದೆ. ಇದಲ್ಲದೆ, ಯುವತಿಯೊಬ್ಬಳೊಂದಿಗಿನ ಪ್ರೀತಿ ವಿಚಾರದಲ್ಲಿ ಬುದ್ದಿ ಹೇಳಿ ಎಚ್ಚರಿಕೆ ನೀಡಿದ್ದಕ್ಕೆ ನವೀನ್ ಎಂಬುವನು ತನ್ನ ತಮ್ಮನ ಜೊತೆ ಸೇರಿ ಕದಿರೇಶನ್ ಕೊಲೆ ಮಾಡಿರಬಹುದು ಎಂದೂ ಕೂಡ ಶಂಕಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

BBMP councillors ಕದಿರೇಶನ್ ಚಿತ್ರಮಂದಿರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ