ರಾಜ್ಯಾದ್ಯಂತ ವ್ಯಾಪಕ ಬರಗಾಲ ಆವರಿಸಿರುವ ಹಿನ್ನೆಲೆ ಕಾಗೋಡು ತಿಮ್ಮಪ್ಪ ಹೇಳಿಕೆ

Kannada News

26-04-2017


ಬೆಂಗಳೂರು,ಏ,26: ರಾಜ್ಯಾದ್ಯಂತ ವ್ಯಾಪಕ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಬೇಸಿಗೆ ಮುಗಿಯುವವರೆಗೆ ಜಿಲ್ಲಾಧಿಕಾರಿಗಳು,ಉಪವಿಭಾಗಾಧಿಕಾರಿಗಳು,ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಯಾವ ಕಾರಣಕ್ಕೂ ವರ್ಗಾವಣೆ ಮಾಡುವುದಿಲ್ಲ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಒಂದು ವೇಳೆ ಯಾರಾದರೂ ವರ್ಗಾವಣೆಗೆ ಯತ್ನಿಸಿದರೆ ತಕ್ಷಣವೇ ಅವರನ್ನು ಅಮಾನತುಗೊಳಿಸುವುದಾಗಿ ಅವರು ಎಚ್ಚರಿಸಿದ್ದಾರೆ.
ಇಂದಿಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರಲ್ಲದೆ,ಕುಡಿಯುವ ನೀರಿನ ಸಮಸ್ಯೆ,ಜಾನುವಾರುಗಳಿಗೆ ಮೇವಿನ ಸಮಸ್ಯೆ ತೀವ್ರವಾಗಿದ್ದು ಈ ಹಿನ್ನೆಲೆಯಲ್ಲಿ ಬರಪರಿಹಾರ ಕಾಮಗಾರಿ ಮುಗಿಯುವವರೆಗೆ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಿಲ್ಲ ಎಂದರು.
ಕಂದಾಯ ಇಲಾಖೆಯಿಂದ ಹಿಡಿದು ಗ್ರಾಮೀಣಾಭಿವೃದ್ಧಿ ಇಲಾಖೆಯವರೆಗೆ ಹಲ ಇಲಾಖೆಗಳ ಅಧಿಕಾರಿಗಳು ಬರಪರಿಹಾರ ಕಾಮಗಾರಿ ಕೈಗೊಳ್ಳಬೇಕಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಅಂತವರ ವರ್ಗಾವಣೆಯನ್ನು ನಿಷೇಧಿಸಲಾಗಿದೆ ಎಂದರು.
ರಾಜ್ಯದಲ್ಲಿ ಕಳೆದ ವರ್ಷದಂತೆಯೇ ಈ ವರ್ಷವೂ ಬರಗಾಲ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೆರೆಗಳ ಹೂಳೆತ್ತಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರ ನೀಡಿದರು.
ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಈ ಬಾರಿ ಕೇಂದ್ರ ಸರ್ಕಾರ ಹೆಚ್ಚು ಹಣ ನೀಡಿದೆ.ಅದನ್ನು ಸಮರ್ಪಕವಾಗಿ ಬಳಸಿಕೊಂಡು ಕೆರೆಗಳ ಹೂಳೆತ್ತಿಸುವ ಕೆಲಸಕ್ಕೆ ಪ್ರಮುಖ ಆದ್ಯತೆ ನೀಡುತ್ತಿರುವುದಾಗಿ ಅವರು ಹೇಳಿದರು.
ಬಹುತೇಕ ಕೆರೆಗಳಲ್ಲಿ ಇವತ್ತು ನೀರಿಲ್ಲದ ಪರಿಸ್ಥಿತಿ ಇದೆ.ಹೀಗಾಗಿ ಬರಗಾಲದ ಸನ್ನಿವೇಶವನ್ನು ಉಪಯೋಗಿಸಿಕೊಂಡೇ ಕೆರೆಗಳಲ್ಲಿ ಹೂಳೆತ್ತಿಸುವ ಕೆಲಸ ನಡೆಸುತ್ತಿರುವುದಾಗಿ ಅವರು ಹೇಳಿದರು.
ಕೊಡಗಿನ ದಿಡ್ದಳ್ಳಿ ವಿವಾದವನ್ನು ಬಗೆಹರಿಸಲು ಈಗಾಗಲೇ ಸರ್ಕಾರ ಕ್ರಮ ಕೈಗೊಂಡಿದ್ದು ದಿಡ್ದಳ್ಳಿ ವಾಸಿಗಳಿಗೆ ಮಡಿಕೇರಿ,ವಿರಾಜಪೇಟೆ,ಸೋಮವಾರ ಪೇಟೆ ಸೇರಿದಂತೆ ಕೊಡಗಿನ ನಾಲ್ಕು ಭಾಗಗಳಲ್ಲಿ ಆರು ನೂರು ನಿವೇಶನಗಳನ್ನು ರೂಪಿಸಿಕೊಡಲಾಗುವುದು ಎಂದರು.
ಪ್ರತಿಯೊಬ್ಬರಿಗೆ 30*40 ನಿವೇಶನ ನೀಡಲಾಗುವುದು ಎಂದ ಅವರು,ಈಗಾಗಲೇ ಅಲ್ಲಿಗೆ ಹೋಗಿ ದಿಡ್ದಳ್ಳಿ ಅರಣ್ಯ ಪ್ರದೇಶವಾಗಿರುವುದರಿಂದ ಅಲ್ಲಿ ವಾಸ ಮಾಡಲು ಸಾಧ್ಯವಿಲ್ಲ ಎಂದಿದ್ದೇವೆ.ಆದರೂ ಕೆಲ ರಾಜಕೀಯ ಪಿತೂರಿಗಳಿಂದಾಗಿ ಹಲವರು,ಈ ಜಾಗ ಬಿಟ್ಟು ಹೊರಡುವುದಿಲ್ಲ ಎಂದು ಹೇಳುತ್ತಿದ್ದಾರೆ.
ಆದರೆ ಅದು ಅರಣ್ಯ ಭೂಮಿ.ಅಲ್ಲಿ ವಾಸವಾಗಿರಲು ನಾವು ಭೂಮಿ ಮಂಜೂರು ಮಾಡಲು ಸಾಧ್ಯವಿಲ್ಲ.ಬದಲಿಗೆ ಶಾಸನ ಸಭೆಯ ಒಪ್ಪಿಗೆ ಪಡೆದು ಕಾನೂನು ಮಾಡಿ ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕಾಯಬೇಕು.ಅದು ಅನುಮತಿ ನೀಡಿದ ಮೇಲೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದರು.
ಹೀಗೆ ಕಾಯುವ ಬದಲು ಕಂದಾಯ ಭೂಮಿಯಲ್ಲಿ ಅವರಿಗೆ ನಿವೇಶನ ನೀಡಿ ಎಲ್ಲೆಲ್ಲಿ ಭೂಮಿ ಲಭ್ಯವಿದೆಯೋ ಅಲ್ಲೆಲ್ಲ ವ್ಯವಸಾಯಕ್ಕೂ ಭೂಮಿ ನೀಡಲು ಹೇಳಿರುವುದಾಗಿ ಅವರು ಸುದ್ದಿಗಾರರಿಗೆ ವಿವರ ನೀಡಿದರು.
ಎಲ್ಲಕ್ಕಿಂತ ಮುಖ್ಯವಾಗಿ ಅವರು ಅಮಾಯಕ ಜನ.ಅಮಾಯಕರಿಗೆ ತಿಳಿವಳಿಕೆ ನೀಡುವುದು ಬಹಳ ಕಷ್ಟದ ಕೆಲಸ.ನಾನು ಕೂಡಾ ಖುದ್ದಾಗಿ ಹೋಗಿ ಪರ್ಯಾಯ ವ್ಯವಸ್ಥೆಗೆ ಒಪ್ಪಿಕೊಳ್ಳಿ ಎಂದು ಮನ ಒಲಿಸುವ ಕೆಲಸ ಮಾಡಿದ್ದೇನೆ.
ಈಗ ಹಲವರು ಇದಕ್ಕೆ ಒಪ್ಪಿದ್ದಾರೆ.ಮುಂದಿನ ದಿನಗಳಲ್ಲಿ ಈ ಕಾರ್ಯ ಯಶಸ್ವಿಯಾಗಿ ಪೂರ್ಣವಾಗಲಿದೆ ಎಂದು ಇದೇ ಸಂದರ್ಭದಲ್ಲಿ ಕಾಗೋಡು ತಿಮ್ಮಪ್ಪ ಅವರು ಸುದ್ದಿಗಾರರಿಗೆ ವಿವರ ನೀಡಿದರು.
ಇದೇ ರೀತಿ ಪಾರಂಪರಿಕ ಭೂಮಿಯ ಹಕ್ಕು ನೀಡುವ(ಬಗರ್ ಹುಕುಂ ಭೂಮಿ)ಕೆಲಸವನ್ನು ಮುಂದಿನ ಮೂರ್ನಾಲ್ಕು ತಿಂಗಳುಗಳಲ್ಲಿ ಮುಗಿಸದಿದ್ದರೆ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಅವರು ಹೇಳಿದರು.
ಎಷ್ಟೇ ಹೇಳಿದರೂ ಅಧಿಕಾರಿಗಳಿಗೆ ಬಗರ್ ಹುಕುಂ ಭೂಮಿಯ ಸಾಗುವಳಿ ಪತ್ರ ನೀಡುವ ಕುರಿತು ತಲೆಗೇ ಹೋಗುತ್ತಿಲ್ಲ. 75 ವರ್ಷ ಉಳುಮೆ ಮಾಡಿದ ದಾಖಲೆ ಬೇಕು ಎಂದು ಹೇಳುತ್ತಿದ್ದಾರೆ.ಇದೇ ರೀತಿ ವಿವರಣೆ ಕೇಳಿದ ಕಾರವಾರ ಜಿಲ್ಲಾಧಿಕಾರಿಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂದರು.
ಇದರ ಬೆನ್ನಲ್ಲೇ ಹೊಸ ಸುತ್ತೋಲೆಯೊಂದನ್ನು ಹೊರಡಿಸಿದ್ದು 2005 ರ ವೇಳೆಗೆ ಫಲಾನುಭವಿ ಸದರಿ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದನೇ?ಎಂಬುದನ್ನು ಮಾನದಂಡವಾಗಿ ಪರಿಗಣಿಸಲು ಹೇಳಿದ್ದೇವೆ.
ಅದೇ ರೀತಿ ಎಪ್ಪತ್ತೈದು ವರ್ಷಗಳಿಂದ ಅದೇ ಊರಿನಲ್ಲಿ ವಾಸ ಮಾಡುತ್ತಿದ್ದನೇ ಎಂಬುದನ್ನು ಖಚಿತಪಡಿಸಿಕೊಳ್ಳಲು,ಊರ ಹಿರಿಯರೊಬ್ಬರ ಹೇಳಿಕೆಯನ್ನು ಪಡೆದುಕೊಳ್ಳಲು,ಮತದಾರರ ಚೀಟಿ ಹೀಗೆ ಎರಡು ದಾಖಲೆಗಳ ಆಧಾರದ ಮೇಲೆ ಭೂಮಿ ಹಂಚಿಕೆ ಮಾಡಿ ಎಂದು ಹೇಳಿದ್ದೇವೆ.
ಗ್ರಾಮಪಂಚಾಯ್ತಿಗಳು ಮೊದಲ ಹಂತದಲ್ಲಿ ಕೆಲಸ ಮಾಡುತ್ತವೆ.ಎರಡನೇ ಹಂತದಲ್ಲಿ ಉಪವಿಭಾಗಾಧಿಕಾರಿಗಳ ನೇತೃತ್ವದ ತಂಡ ಕೆಲಸ ಮಾಡುತ್ತದೆ.ಮೂರನೇ ಹಂತದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.
ಹೀಗಾಗಿ ಈಗಾಗಲೇ ತಿರಸ್ಕ್ರತಗೊಂಡಿರುವ ಅರ್ಜಿಗಳನ್ನೂ ಪುನ: ಪರಿಶೀಲಿಸಬೇಕು ಎಂಬುದರಿಂದ ಹಿಡಿದು ಪ್ರತಿಯೊಂದು ಅರ್ಜಿಗಳನ್ನು ಪರಿಶೀಲಿಸಿ ಸಮಸ್ಯೆಯನ್ನು ಬಗೆಹರಿಸಲು ಹೇಳಿದ್ದೇವೆ ಎಂದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ