ಸದನದಲ್ಲಿ ಶೆಟ್ಟರ್ ಶೋ..!

In Assembly Jagadish Shettar fierce outrage

07-02-2018

ಬೆಂಗಳೂರು: ವಿವಿಧ ಯೋಜನೆಗಳ ಗುತ್ತಿಗೆಯಲ್ಲಿ ರಾಜ್ಯಸರ್ಕಾರ ಪಡೆಯುತ್ತಿದ್ದ ಹತ್ತು ಪರ್ಸೆಂಟ್ ಕಮೀಷನ್ ಇದೀಗ 30ಕ್ಕೆ ಏರಿಕೆಯಾಗಿದ್ದು, ಪ್ರತಿಯೊಂದು ವಲಯದಲ್ಲೂ ಭಾರೀ ಅಕ್ರಮಗಳು ನಡೆಯುತ್ತಿವೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿಧಾನಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಪಿ.ರಾಜೀವ್ ಪ್ರಶ್ನೆಗೆ ಸರ್ಕಾರ ಇಂದೇ ಉತ್ತರ ನೀಡಬೇಕಿತ್ತಾದರೂ ಒಂಭತ್ತನೇ ತಾರೀಖು ಉತ್ತರ ನೀಡಲಾಗುವುದು ಎಂದು ಸಭಾಧ್ಯಕ್ಷರು ಹೇಳಿದ ನಂತರ ಶೆಟ್ಟರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಲೇಷಿಯಾದಿಂದ ಮರಳು ಆಮದು ಮಾಡಿಕೊಳ್ಳುವ ಸರ್ಕಾರದ ನಿರ್ಧಾರದ ಹಿಂದೆ ಭಾರೀ ಅಕ್ರಮ ನಡೆದಿದ್ದು, ಜನರನ್ನು ಮರುಳು ಮಾಡುವ ಕೆಲಸ ನಡೆಯುತ್ತಿದೆ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದರು.

 ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಪ್ರತಿಪಕ್ಷದ ನಾಯಕರು ವಿನಾಕಾರಣ ಆರೋಪ ಮಾಡಬಾರದು. ಅವರೂ ಸರ್ಕಾರ ನಡೆಸಿದವರು. ಇದು ಪರ್ಸೆಂಟೇಜ್ ಸರ್ಕಾರ ಎಂದರೆ ಹೇಗೆ? ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇವೆ. ಕಾಲಾವಕಾಶ ನೀಡಿ ಎಂದರು. ಇಷ್ಟಾದರೂ ಪಟ್ಟುಬಿಡದ ಜಗದೀಶ್ ಶೆಟ್ಟರ್, ವಿದೇಶದಿಂದ ಮರಳು ತರಿಸುವ ಧಂದೆಯಲ್ಲಿ ಭಾರೀ ಪ್ರಮಾಣದ ಡೀಲ್ ನಡೆದಿದ್ದು. ಇದು ಬಹಿರಂಗವಾಗುವುದನ್ನು ತಡೆಯುವ ಕೆಲಸ ಸರ್ಕಾರದಿಂದಾಗುತ್ತಿದೆ ಎಂದರು.

ಪುನ: ಮಾತನಾಡಿದ ಸಚಿವ ದೇಶಪಾಂಡೆ, ಸರ್ಕಾರದ ವಿರುದ್ಧ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಏನೇ ಇದ್ದರೂ ಪ್ರಶ್ನೆಗೆ ಉತ್ತರ ಕೊಡುವ ದಿನ ಹೇಳಿ. ಇಲ್ಲವೇ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುವ ಸಂದರ್ಭದಲ್ಲಿ ಹೇಳಿ ಎಂದರು. ಆಗ ಮತ್ತೆ ಶೆಟ್ಟರ್ ಮಾತನಾಡಿ, ಸರ್ಕಾರ ಉತ್ತರ ನೀಡುವ ಜವಾಬ್ದಾರಿಯಿಂದ ಏಕೆ ನುಣುಚಿಕೊಳ್ಳುತ್ತಿದೆ ಎಂದು ಪ್ರಶ್ನಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ