ಕೇಂದ್ರದ ವಿರುದ್ಧ ಆರೋಪ

tanveer sait allegation on central government

07-02-2018

ಬೆಂಗಳೂರು: ಶಿಕ್ಷಣದ ಅಭಿವೃದ್ಧಿಗೆ ಕೇಂದ್ರದಿಂದ ಬರಬೇಕಿದ್ದ ಹಣದಲ್ಲಿ ಸಾವಿರಾರು ಕೋಟಿ ರೂಪಾಯಿ ಕಡಿತವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ವಿಧಾನಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಶಾಸಕ ಜೀವರಾಜ್ ಪ್ರಶ್ನೆಗೆ ಉತ್ತರಿಸಿದ ತನ್ವೀರ್ ಸೇಠ್, ಕೇಂದ್ರ ಸರ್ಕಾರದಿಂದ ಸರ್ವ ಶಿಕ್ಷಣ ಅಭಿಯಾನದಡಿ 1631 ಕೋಟಿ ರೂ. ಬರಬೇಕಿತ್ತು ಆದರೆ, ಕೇವಲ 440 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದರು. ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ನಮ್ಮಿಂದಾದ ಎಲ್ಲ ಯತ್ನವನ್ನು ಮಾಡುತ್ತಿದ್ದೇವೆ, ಕೇಂದ್ರಸರ್ಕಾರ ನಿಗದಿತ ಪ್ರಮಾಣದ ಹಣ ಬಿಡುಗಡೆ ಮಾಡದೇ ಹೋದರೂ ಕೂಡ ಸರ್ಕಾರಿ ಶಾಲೆಗಳ ದುರಸ್ತಿಗೆ, ಹೊಸ ಕೊಠಡಿಗಳ ನಿರ್ಮಾಣಕ್ಕೆ, ಮತ್ತಿತರ ಕೆಲಸಗಳಿಗೆ 566.45 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ ಎಂದು ಸಚಿವರು ಹೇಳಿದರು.
ಇದೇ ರೀತಿ, 2002 ರಿಂದ 2012 ರವರೆಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಉಳಿದ ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆಂದೇ ಪಡೆಯಲಾಗಿದೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಒಟ್ಟು 243 ಕೋಟಿ ರೂ. ಲಭ್ಯವಾಗಿದ್ದು ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ದೊರೆತ ಹಣವನ್ನು ಆಯಾ ಜಿಲ್ಲೆಗಳ ಶಾಲೆಗಳಿಗೆ ಒದಗಿಸಲಾಗುವುದು ಎಂದರು.
ಸರ್ಕಾರಿ ಶಾಲೆಗಳ ಕಟ್ಟಡಗಳು ದುಸ್ಥಿತಿಯಲ್ಲಿದ್ದರೆ, ಅವನ್ನು ನೆಲಸಮ ಮಾಡಿ ಬೇರೆ ಕಟ್ಟಡಗಳನ್ನು ಕಟ್ಟಲಾಗುವುದು ಎಂದ ಅವರು, ರಾಜ್ಯಸರ್ಕಾರ ಶಿಕ್ಷಣದ ಅಭಿವೃದ್ಧಿಗೆ ಏನೆಲ್ಲ ಮಾಡಲು ಸಾಧ್ಯವೋ? ಅದನ್ನು ಮಾಡುತ್ತದೆ ಎಂದು ಭರವಸೆ ನೀಡಿದರು.
ಇದಕ್ಕೆ ಮುನ್ನ ಸದನದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಜೀವರಾಜ್, ಸರ್ಕಾರಿ ಶಾಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ಶಿಕ್ಷಕರನ್ನಂತೂ ಒದಗಿಸಲಿಲ್ಲ. ಆದರೆ ತಮ್ಮ ಕ್ಷೇತ್ರದ ಕೆಲವು ಶಾಲೆಗಳು ಕುಸಿದು ಬೀಳುವ ಸ್ಥಿತಿ ಇದ್ದರೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
ಮೊದಲು ಸರ್ಕಾರಿ ಶಾಲೆಗಳನ್ನು ಉದ್ಧಾರ ಮಾಡಿ. ಮಾತೆತ್ತಿದರೆ ಕೇಂದ್ರ ಸರ್ಕಾರ ನೆರವು ಕೊಡಲಿಲ್ಲ ಎನ್ನುವುದು ಸರಿಯಲ್ಲ. ನೀವೇನು ಮಾಡಿದ್ದೀರಿ, ಮೊದಲು ಅದನ್ನು ಹೇಳಿ ಎಂದರು. ಒಂದು ಹಂತದಲ್ಲಿ ಶಾಸಕ ಜೀವರಾಜ್ ಮತ್ತು ಸಚಿವ ತನ್ವೀರ್ ಸೇಠ್ ನಡುವೆ ಬಿಸಿ ಬಿಸಿ ವಾಗ್ಯುದ್ಧವೂ ನಡೆಯಿತು.


ಸಂಬಂಧಿತ ಟ್ಯಾಗ್ಗಳು

Tanveer Sait Minister ಜೀವರಾಜ್ ಅಸಮಾಧಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ