ಹಿರಿಯ ನಾಗರಿಕರ ಮನಸ್ಥಿತಿಯನ್ನು ಅರಿತು ನೆರವಿಗೆ ಧಾವಿಸಬೇಕು : ಪೊಲೀಸ್ ಆಯುಕ್ತ ಪ್ರವೀಣ್ ಸೂದ್

Kannada News

26-04-2017

ಬೆಂಗಳೂರು, ಏ.26: ಹಿರಿಯ ನಾಗರಿಕರು ಹಣ ಮತ್ತು ಅಂತಸ್ತಿಗಾಗಿ ಆಸೆ ಪಡುವುದಿಲ್ಲ. ಇಳಿ ವಯಸ್ಸಿನಲ್ಲಿ ಭಾವನಾತ್ಮಕ ಸಂಬಂಧಕ್ಕಾಗಿ ಹಾತೊರೆಯುತ್ತಿದ್ದು ಅವರ ನೆರವಿಗೆ ಧಾವಿಸಬೇಕಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಕರೆ ನೀಡಿದ್ದಾರೆ.
ಹಿರಿಯ ನಾಗರೀಕರಿಗೆ ಬೇಕಿರುವುದು ಹಣ ಅಂತಸ್ಥಲ್ಲ ಕೇವಲ ಅರ್ಧ ಗಂಟೆಯ ಮಾತುಕತೆ ಅವರ ಕಷ್ಟ ಸುಖಗಳನ್ನು ತಿಳಿದುಕೊಂಡು ಮುಕ್ತ ಮನಸ್ಸಿನಿಂದ ಮಾತನಾಡಿದರೆ ಎಷ್ಟೋ ಹಿರಿಯರು ನೆಮ್ಮದಿಯಿಂದಿರುತ್ತಾರೆ ಸಮಾಜ ಹಿರಿಯ ನಾಗರಿಕರ ಮನಸ್ಥಿತಿಯನ್ನು ಅರಿತು ಅವರ ನೆರವಿಗೆ ಧಾವಿಸಬೇಕು ಎಂದರು
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಸೇವೆಯನ್ನು 24 ಗಂಟೆಗಳ ಕಾಲ ವಿಸ್ತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಿರಿಯ ನಾಗರಿಕ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರ ಸಮಸ್ಯೆಗಳನ್ನು ಸಾವಧಾನದಿಂದ ಆಲಿಸಬೇಕು. ಹೆಚ್ಚಿನ ಹಿರಿಯ ನಾಗರಿಕರು ಕೌಟುಂಬಿಕ ಸಮಸ್ಯೆಯಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಸಹಾಯವಾಣಿಯ ಅಧಿಕಾರಿಗಳು ಅವರ ಸಮಸ್ಯೆಯನ್ನು ಕೇಳಿಸಿಕೊಂಡು ಸಂಬಂಧಪಟ್ಟವರ ಮನೆಯವರನ್ನು ಸಂಪರ್ಕಿಸಿ ಅವರಿಗೆ ಹಿರಿಯ ನಾಗರಿಕ ಮಹತ್ವ, ಅವರು ಜೀವನದಲ್ಲಿ ಬಂದ ಕಷ್ಟ-ಸುಖ, ಗಳಿಸಿದ ಅನುಭವಗಳ ಬಗ್ಗೆ ತಿಳಿಹೇಳಬೇಕು. ಅವರ ಬಗ್ಗೆ ಗೌರವ ಮೂಡುವಂತೆ ಮಾಡಬೇಕು ಎಂದು ಹೇಳಿದರು.
ಹಿರಿಯ ನಾಗರಿಕರು ಹೆಚ್ಚಾಗಿ ಚಿಟ್ ಫಂಡ್, ಕಡಿಮೆ ಬೆಲೆ ನಿವೇಶನ ಮುಂತಾದವುಗಳಿಂದ ಹಣ ಕಳೆದುಕೊಳ್ಳುತ್ತಾರೆ. ಇಂತಹ ಮೋಸಗಳ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು. ಅಂತಹ ಯಾವುದೇ ಯೋಜನೆಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಪಡೆದುಕೊಂಡ ಬಳಿಕವೇ ಹಣ ಹೂಡಬೇಕು ಎಂದು ಮನವಿ ಮಾಡಿದ ಪ್ರವೀಣ್ ಸೂದ್, ಇದುವರೆಗೆ ಸಹಾಯವಾಣಿ 8 ಗಂಟೆಗಳ ಕಾಲ ಮಾತ್ರ ಕಾರ್ಯಾಚರಿಸುತ್ತಿತ್ತು. ಇನ್ನು ಮುಂದೆ ದಿನದ 24 ಗಂಟೆಯೂ ಕೆಲಸ ನಿರ್ವಹಿಸಲಿದೆ. ಹಿರಿಯ ನಾಗರಿಕರು ತಮಗೆ ಯಾವುದೇ ವ್ಯಕ್ತಿಯಿಂದ ತೊಂದರೆಯಾದರೆ ತಕ್ಷಣ ಇಲ್ಲಿಗೆ ಕರೆ ಮಾಡಬೇಕು. ಇಲ್ಲಿನ ಸಿಬ್ಬಂದಿ ನಿಮ್ಮ ನೆರವಿಗೆ ಧಾವಿಸಲಿದ್ದಾರೆ ಎಂದು ಹೇಳಿದರು.
ಈ ವೇಳೆ ಹೆಚ್ಚುವರಿ ಪೊಲೀಸ್ ಆಯುಕ್ತ ನಂಜುಂಡಸ್ವಾಮಿ,ಡಿಸಿಪಿ ಅನೂಪ್ ಶೆಟ್ಟಿ ಹಿರಿಯ ಸಹಾಯವಾಣಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ