ವಿದ್ಯುತ್ ಅಭಾವ ಇಲ್ಲ ಡಿಕೆಶಿ ಭರವಸೆ

No power crisis in state says D.k.shivakumar

06-02-2018

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಅಭಾವ ತಲೆದೋರದಂತೆ ಮಾಡಿಕೊಳ್ಳಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಿಧಾನಪರಿಷತ್‍ನಲ್ಲಿ ಭರವಸೆ ನೀಡಿದರು. ಪ್ರಶ್ನೋತ್ತರ ಕಲಾಪದಲ್ಲಿ ಮೋಟಮ್ಮ ಅವರ ಪರವಾಗಿ ಐವಾನ್ ಡಿಸೋಜಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರೈತರಿಗೆ ಕೈಗಾರಿಕೆಗಳಿಗೆ ಸೇರಿದಂತೆ ಯಾರಿಗೂ ಯಾವುದೇ ಕಾರಣಕ್ಕೂ ವಿದ್ಯುತ್ ಅಭಾವ ತಲೆದೋರದಂತೆ ಅಗತ್ಯಕ್ರಮಕೈಗೊಳ್ಳಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ ಸರಾಸರಿ ವಿದ್ಯುತ್ ಬೇಡಿಕೆ ಪ್ರಮಾಣ 10 ಸಾವಿರ ಮೆಗಾವ್ಯಾಟ್‍ಗಳಾಗಿದ್ದು, ಕಳೆದ ಜನವರಿ ತಿಂಗಳಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ 10347 ಮೆಗಾವ್ಯಾಟ್‍ಗಳನ್ನು ಪೂರೈಸಲಾಗಿದೆ. ವಿದ್ಯುತ್ ಅಭಾವ ನೀಗಿಸಲು ಮುಂಜಾಗ್ರತಾ ಕ್ರಮವಾಗಿ 900 ಮೆಗಾ ವ್ಯಾಟ್ ವಿದ್ಯುತ್ತನ್ನು ಅಲ್ಪಾವಧಿ ಆಧಾರದಲ್ಲಿ ಖರೀದಿಸಲಾಗುತ್ತಿದೆ ಎಂದರು.

ಜಲವಿದ್ಯುತ್  ಉತ್ಪಾದನಾ ಮೂಲಗಳಿಂದ 3788 ಮೆಗಾ ವ್ಯಾಟ್ ಶಾಖೋತ್ಪನ್ನ ಘಟಕಗಳಿಂದ 5020 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸ್ಥಾಪಿತ ಸಾಮರ್ಥ್ಯ ಹೊಂದಿದ್ದು ರಾಜ್ಯದಲ್ಲಿ ಲಭ್ಯವಿರುವ ಎಲ್ಲ ಸಾಂಪ್ರದಾಯಿಕ ಮೂಲಗಳನ್ನು ಬಳಸಿ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು 370 ಮೆಗಾ ವ್ಯಾಟ್ ಅನಿಲ ಆಧಾರಿತ  ಯೋಜನೆಯನ್ನು ಯಲಹಂಕದ ಬಳಿ ಅನುಷ್ಠಾನಗೊಳಿಸಲಾಗುತ್ತಿದ್ದು, ಮೇ 18 ರೊಳಗೆ ಚಾಲನೆಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.

ತುಮಕೂರು ಜಿಲ್ಲೆ ಪಾವಗಡ ತಾಲೂಕು 2000 ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಪಾರ್ಕ್ ಸ್ಥಾಪನೆಗೆ ಕ್ರಮ ವಹಿಸಲಾಗಿದೆ. ವಿಕೇಂದ್ರಿಕೃತ ವಿದ್ಯುತ್ ಉತ್ಪಾದನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ 43 ತಾಲೂಕುಗಳಲ್ಲಿ ಒಟ್ಟಾರೆ 860 ಮೆಗಾ ವ್ಯಾಟ್ ಸಾಮರ್ಥ್ಯದ ಸೌರವಿದ್ಯುತ್ ಯೋಜನೆಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

59 ಹಿಂದುಳಿದ ತಾಲೂಕುಗಳಲ್ಲಿ 105 ಮೆಗಾ ವ್ಯಾಟ್ ಹಾಗೂ ಕೇಂದ್ರ ಸರ್ಕಾರದ ಎಸ್‍ಇಸಿಐ ಯೋಜನೆಯಿಂದ 970 ಮೆಗಾ ವ್ಯಾಟ್ ಸಾಮರ್ಥ್ಯದ ಸೌರವಿದ್ಯುತ್ ಯೋಜನೆಗಳ ಸ್ಥಾಪನೆಗೆ ಹಂಚಿಕೆ ಮಾಡಲಾಗಿದ್ದು, ಈ ಪೈಕಿ 821 ಮೆಗಾ ವ್ಯಾಟ್ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಬೇಸಿಗೆ ಸಮೀಪಿಸುತ್ತಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿಯಾವುದೇರೀತಿಯ ವ್ಯತ್ಯಯಉಂಟಾಗಬಾರದೆಂಬ ಕಾರಣಕ್ಕೆ ವಿದೇಶದಿಂದ 10 ಲಕ್ಷ ಮೆಟ್ರಿಕ್‍ ಟನ್‍ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ವಾರ ಅಥವಾ 15 ದಿನದೊಳಗೆ ಅಂತಿಮ ಪ್ರಕ್ರಿಯೆ ಮುಗಿಯಲಿದೆ ಎಂದು ತಿಳಿಸಿದರು. ರಾಯಚೂರಿನ ವೈಟಿಪಿಎಸ್ ಹಾಗೂ ಬಿಟಿಪಿಎಸ್ ವಿದ್ಯುತ್ ಘಟಕಗಳಿಗೆ 136 ಲಕ್ಷ ಮೆಟ್ರಿಕ್ ಟನ್‍ ಕಲ್ಲಿದ್ದಲಿನ ಅವಶ್ಯಕತೆ ಇದೆ. ಕೇಂದ್ರದಿಂದ ನಮಗೆ ನಿಗದಿಯಾಗಿರುವ ಕಲ್ಲಿದ್ದಲು ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೈಟಿಪಿಎಸ್‍ಗೆ ಶೇ.32ರಷ್ಟು ಹಾಗೂ ಬಿಟಿಪಿಎಸ್‍ಗೆ ಶೇ.21ರಷ್ಟು ಮಾತ್ರಕಲ್ಲಿದ್ದಲು ಪೂರೈಕೆಯಾಗಿದೆ. ಈಗಾಗಲೇ ಬೇಸಿಗೆ ಪ್ರಾರಂಭವಾಗಿರುವ ಕಾರಣ ಜನರಿಗೆ ತೊಂದರೆಯಾಗದಂತೆ ವಿದೇಶದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳಲಾಗುವುದು. ಇದಕ್ಕಾಗಿ ನೀರನ್ನು ಸಹ ಸಂಗ್ರಹಿಸಲಿದ್ದೇವೆ ಎಂದರು.

ರಾಜ್ಯಕ್ಕೆ ನಿಗದಿಯಾಗಿರುವ ಕಲ್ಲಿದ್ದಲನ್ನು ಪೂರೈಕೆ ಮಾಡಬೇಕೆಂದು ಕೇಂದ್ರ ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್‍ ಅವರಿಗೆ ನಾನು ಹಾಗೂ ಮುಖ್ಯಮಂತ್ರಿಗಳು ಮನವಿ ಮಾಡಿದ್ದೇವೆ, ಖುದ್ದು ನಾನೇ ಕೇಂದ್ರ ಸಚಿವರಿಗೆ 51 ಪತ್ರಗಳನ್ನು ಬರೆದಿರುತ್ತೇನೆ ಈವರೆಗೂ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿದರು. ಕಲ್ಲಿದ್ದಲು ಪೂರೈಕೆ ಮಾಡದಿರುವ ಬಗ್ಗೆ ನಾನು ವೈಯಕ್ತಿಕವಾಗಿ ಯಾರನ್ನೂ ದೂಷಿಸುವುದಿಲ್ಲ. ಕರ್ನಾಟಕವಷ್ಟೇ ಅಲ್ಲ ಬೇರೆ ಬೇರೆ ರಾಜ್ಯಗಳಲ್ಲೂ ಇದೇರೀತಿ ಸಮಸ್ಯೆ ಇದೆ. ನಮಗೆ ನಿಗದಿಯಾಗಿರುವಷ್ಟು ಕಲ್ಲಿದ್ದಲು ಪೂರೈಕೆಯಾದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ತಿಳಿಸಿದರು.

ವಿದ್ಯುತ್ ಘಟಕಗಳನ್ನು ಪ್ರಾರಂಭಿಸಲುಜಮೀನು ನೀಡುವ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಸದಸ್ಯರ ಸಲಹೆಗೆ ಸ್ಪಂದಿಸಿದ ಸಚಿವರು, ಈಗಾಗಲೇ ಸರ್ಕಾರ 109 ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. 219 ಅರ್ಜಿಗಳು ಬಂದಿವೆ. 101 ಹೆಚ್ಚುವರಿ ಹುದ್ದೆಗಳನ್ನು ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ