ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿಯ ಹೆಸರಿನಲ್ಲಿ ಸುಲಿಗೆ ಹಿನ್ನೆಲೆ ಆರೋಪಿಗಳ ಬಂಧನ

Kannada News

26-04-2017

ಬೆಂಗಳೂರು, ಏ. 26 -ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿಯ ಹೆಸರಿನಲ್ಲಿ ಗರ್ಭಿಣಿಯಾಗಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬರಿಗೆ ಗರ್ಭಪಾತ ಮಾಡಿಸಿದ ನೆಪದಲ್ಲಿ ವೈದ್ಯರೊಬ್ಬರನ್ನು ಬೆದರಿಸಿ ಸುಲಿಗೆ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ.
ಕೃತ್ಯದ ಸಂಬಂಧ  ಸಮಿತಿಯ ಅಧ್ಯಕ್ಷ ಸೇರಿ ನಾಲ್ವರನ್ನು ಆಡುಗೋಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಯನಗರದ 6ನೇ ಬ್ಲಾಕ್‍ನ ಮಂಜುನಾಥ ರೆಡ್ಡಿ (36), ಜೆಪಿನಗರದ ಆರ್‍ಬಿಐ ಲೇಔಟ್‍ನ ಲೋಕೇಶ್ (38), ಯಡಿಯೂರಿನ ಅಂಜನಮೂರ್ತಿ (40), ಬ್ಯಾಟ್ ರಾಜ್ (30) ಬಂಧಿತ ಆರೋಪಿಗಳಾಗಿದ್ದಾರೆ.ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ರೌಡಿಗಳಾದ ಉಮೇಶ್ ಹಾಗೂ ನವೀನಗಾಗಿ ಶೋಧ ನಡೆಸಲಾಗಿದೆ
ತ್ಯಾಗರಾಜನಗರದಲ್ಲಿ ರಾಜ್ಯ ಮಾನವ ಹಕ್ಕುಗಳ ಸಮಿತಿಯ ಕಚೇರಿ ತೆರೆದಿದ್ದ ಆರೋಪಿ ಮಂಜುನಾಥರೆಡ್ಡಿ, ಬಿಬಿಎಂಪಿ ಸದಸ್ಯರೊಬ್ಬರ ಬಾಮೈದುನನಾಗಿದ್ದಾನೆ  ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.
ಆರೋಪಿಯು ಇತರ ಐವರೊಂದಿಗೆ ಸೇರಿಕೊಂಡು ಲಕ್ಕಸಂದ್ರದ 15ನೇ ಅಡ್ಡರಸ್ತೆಯಲ್ಲಿರುವ ದೀಪ್ತಿ ನರ್ಸಿಂಗ್ ಹೋಂಗೆ  ವೈದ್ಯರಾದ ಇಂದ್ರಸೇನಾ ಅವರಿಗೆ 10 ಲಕ್ಷ ರೂ.ಗಳಿಗೆ ಬ್ಲ್ಯಾಕ್ಮೇಲ್ ಮಾಡಿ ನಂತರ ಬ್ಲ್ಯಾಕ್ಮೇಲ್ ಹಣವನ್ನು 2.5 ಲಕ್ಷಕ್ಕೆ ಇಳಿಸಿ 60 ಸಾವಿರ ಸುಲಿಗೆ ಮಾಡಿದ್ದನು
ಇತ್ತೀಚೆಗೆ ಹೊಟ್ಟೆನೋವಿನಿಂದ ರಕ್ತಸ್ರಾವ ಉಂಟಾಗಿ ಬಳಲುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಕಳೆದ ಮಾ.17ರಂದು ದೀಪ್ತಿ ನರ್ಸಿಂಗ್ ಹೋಂಗೆ ಚಿಕಿತ್ಸೆಗಾಗಿ ತೆರಳಿದ್ದು, ಇದನ್ನು ಗಮನಿಸಿದ್ದ ಆರೋಪಿಗಳು ಚಿಕಿತ್ಸೆ ನೀಡುವ ವೇಳೆ ನರ್ಸಿಂಗ್ ಹೋಂಗೆ ನುಗ್ಗಿ ವೈದ್ಯರಾದ ಡಾ. ಇಂದ್ರಸೇನಾ ಅವರನ್ನು ವಿದ್ಯಾರ್ಥಿನಿಗೆ ಗರ್ಭಪಾತ ಮಾಡಿದ್ದೀರಾ? ಎನ್ನುತ್ತ ನಿಮ್ಮ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲು ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಸಮಿತಿಯ ಹೆಸರಿನಲ್ಲಿ ಬೆದರಿಸಿದ್ದಾರೆ.
ಪ್ರಕರಣ ದಾಖಲಿಸದಂತೆ ನೋಡಿಕೊಳ್ಳಲು 10 ಲಕ್ಷಕ್ಕೆ ಬ್ಲ್ಯಾಕ್ಮೇಲ್ ಮಾಡಿ ನಂತರ 2 ಲಕ್ಷಕ್ಕೆ ಇಳಿಸಿ ನರ್ಸಿಂಗ್ ಹೋಂನಲ್ಲಿ ಸಂಗ್ರಹವಾಗಿದ್ದ 60 ಸಾವಿರ ದೋಚಿ ಪರಾರಿಯಾಗಿದ್ದರು. ಮರು ದಿನ ಉಳಿದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಬೆದರಿಕೆಯ ಬಗ್ಗೆ ಇಂದ್ರಸೇನಾ ಅವರ ಪತಿ ಡಾ. ಶ್ರೀನಿವಾಸ್ ರೆಡ್ಡಿ ಅವರು ಆಡುಗೋಡಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿ 40 ಸಾವಿರ ನಗದು,3 ಮೊಬೈಲ್‍ಗಳು ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ ಬಂಧಿತ ಆರೋಪಿಗಳು ಹಿಂದೆಯೂ ಕೂಡ ಹಲವು ಅಪರಾಧಗಳಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಬೋರಲಿಂಗಯ್ಯ ತಿಳಿಸಿದ್ದಾರೆ.
 

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ