ಸದನದಲ್ಲಿ ಬಿಜೆಪಿ ವಿರುದ್ಧ ಸಿಎಂ ವ್ಯಂಗ್ಯ

siddaramaiah answers to BJP in session

06-02-2018

ಬೆಂಗಳೂರು: ರಾಜ್ಯದ ರೌಡಿ ಶೀಟರ್‍ಗಳ ಪಟ್ಟಿಯಲ್ಲಿರುವವರು ಬಿಜೆಪಿ ಪಕ್ಷಕ್ಕೆ ಸೇರಿದವರಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ವ್ಯಂಗ್ಯವಾಗಿ ವಾಗ್ದಾಳಿ ನಡೆಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯರು ರೌಡಿ ಶೀಟರ್‍ಗಳ ಪರ ವಕಾಲತು ವಹಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಅವರು, ರೌಡಿ ಪಟ್ಟಿಯಲ್ಲಿರುವವರೆಲ್ಲರೂ ನಿಮ್ಮ ಪಕ್ಷಕ್ಕೆ ಸೇರಿದವರಾಗಿರಬೇಕು. ಇಲ್ಲವಾದಲ್ಲಿ ನೀವು ಅವರ ಪರವಾಗಿ ಇಷ್ಟು ಗಟ್ಟಿ ಧನಿಯಲ್ಲಿ ಮಾತನಾಡಲು ಸಾಧ್ಯವಿಲ್ಲ ಎಂದು ಕಿಚಾಯಿಸಿದರು.

ರೌಡಿ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ ಎನ್ನುವ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಕಾನೂನು ಸುವ್ಯವಸ್ಥೆಯ ಹಿತ ದೃಷ್ಟಿಯಿಂದ ಕೆಲವು ಹೆಸರುಗಳನ್ನು ಮಾತ್ರ ಪ್ರಕಟಿಸಬೇಕು. ಸಮಾಜದ ಹಿತವನ್ನು ಗಮನದಲ್ಲಿಟ್ಟುಕೊಂಡು ರೌಡಿ ಪಟ್ಟಿಯ ಹೆಸರು ಬಹಿರಂಗ ಮಾಡಲಾಗುವುದು ಎಂದರು.

ಅನಗತ್ಯವಾಗಿ ರೌಡಿ ಪಟ್ಟಿಯಲ್ಲಿ ಅನಗತ್ಯವಾಗಿ ಯಾರ ಹೆಸರನ್ನೂ ಸೇರಿಸಲು ಸಾಧ್ಯವಿಲ್ಲ. ಇದಕ್ಕೆ ಸೂಕ್ತ ಕ್ರಮಗಳು ಇರುತ್ತವೆ. ಹಾಗೊಂದು ವೇಳೆ ಅಮಾಯಕರ ಹೆಸರು ಸೇರ್ಪಡೆಯಾಗಿರುವ ನಿರ್ದಿಷ್ಟ ಪ್ರಕರಣಗಳಿದ್ದರೆ ಅಂತಹವರ ಹೆಸರುಗಳನ್ನು ತೆಗೆದು ಹಾಕುವುದಾಗಿ ಭರವಸೆ ನೀಡಿದರು.

ಇದಕ್ಕೂ ಮುನ್ನ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಬಿಜೆಪಿಯ ಸಿ.ಟಿ. ರವಿ, ಆರ್. ಅಶೋಕ್, ಸುನಿಲ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಕೆ.ಜಿ. ಬೋಪಯ್ಯ ಮತ್ತಿತರರು ಮಾತನಾಡಿ, ಜನಪರ, ಹಿಂದೂಪರ ಹೋರಾಟಗಳಲ್ಲಿ ಭಾಗಿಯಾಗಿದ್ದವರ ಹೆಸರುಗಳನ್ನು ಸಹ ರೌಡಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರಲ್ಲಿ ರಾಜಕೀಯ ಉದ್ದೇಶ ಅಡಗಿದೆ ಎಂದು ಆಪಾದಿಸಿದರು.

ಗೃಹ ಸಚಿವ ರಾಮಲಿಂಗಾ ರೆಡ್ಡಿ, ತಾವು ಗೃಹ ಸಚಿವರಾಗಿ ಪದಗ್ರಹಣ ಮಾಡಿದ ನಂತರ ನಡೆದ ಮೊದಲ ಸಭೆಯಲ್ಲಿ ಬಹು ದೀರ್ಘ ಕಾಲದಿಂದ ಅಪರಾಧ ಚಟುವಟಿಕೆಯಿಂದ ದೂರ ಇರುವವರನ್ನು ರೌಡಿ ಪಟ್ಟಿಯಿಂದ ಕೈ ಬಿಡುವಂತೆ ನಿರ್ದೇಶನ ನೀಡಿದ್ದೆ. ಕೆಲವರಿಗೆ 60, 70 ವರ್ಷ ವಯಸ್ಸಾಗಿರುತ್ತದೆ. ಯಾವುದೋ ಕಾಲದಲ್ಲಿ ಯಾವುದೋ ಒಂದು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಮಾತ್ರಕ್ಕೆ ಅವರು ಜೀವನ ಪರ್ಯಂತ ರೌಡಿ ಪಟ್ಟಿ ಕಟ್ಟಿಕೊಂಡು ಬದುಕುವಂತಾಗಬಾರದು ಎಂದು ಹೇಳಿದ್ದೆ. ಇದಕ್ಕಾಗಿ ಸೂಕ್ತ ಮಾರ್ಗ ಸೂಚಿ ಸಿದ್ಧಪಡಿಸಿ ನಿರ್ದೇಶನ ನೀಡಲಾಗಿತ್ತು ಎಂದು ಹೇಳಿದರು.

ಅಮಾಯಕರು ಶೋಷಣೆಗೆ ಒಳಗಾಗುವುದನ್ನು ಸರ್ಕಾರ ಬಯಸುವುದಿಲ್ಲ. ಉತ್ತಮ ಮಾರ್ಗದಲ್ಲಿ ನಡೆಯುವವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದರು. ಇದಕ್ಕೂ ಮುನ್ನ ಮಾತನಾಡಿದ ಜಗದೀಶ್ ಶೆಟ್ಟರ್, ರಾಜಕೀಯ ದುರುದ್ದೇಶಕ್ಕಾಗಿ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು ಸಹ ರೌಡಿ ಪಟ್ಟಿಗೆ ಸೇರ್ಪಡೆ ಮಾಡುವುದು ನಡೆಯುತ್ತಿದೆ. ಇದಕ್ಕೆ ಸೂಕ್ತ ರೀತಿಯಲ್ಲಿ ಕಡಿವಾಣ ಹಾಕಬೇಕು. ಪೊಲೀಸ್ ವ್ಯವಸ್ಥೆಯನ್ನು ರಾಜಕೀಯ ಕಾರಣಕ್ಕಾಗಿ ದುರ್ಬಳಕೆ ಮಾಡಿಕೊಳ್ಳಬಾರದು ಎಂದರು.


ಸಂಬಂಧಿತ ಟ್ಯಾಗ್ಗಳು

siddaramaiah session ಅಮಾಯಕ ಶೋಷಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ