‘ಪ್ರಧಾನಿ ಬಗ್ಗೆ ಲಘು ಮಾತು ನಾನು ಸಹಿಸುವುದಿಲ್ಲ’

H.D.Deve Gowda reaction on lawyers protest bengaluru

06-02-2018

ಬೆಂಗಳೂರು: ಫೋನ್ ಮೂಲಕ ಸಮಸ್ಯೆ ಪರಿಹರಿಸುವ ಕಾಲ ಹೋಗಿದೆ, ನರಸಿಂಹ ರಾವ್ ಪಿಎಂ ಆಗಿದ್ದಾಗ ಫೋನ್ ಮೂಲಕವೇ ಸಮಸ್ಯೆಯನ್ನು ಪರಿಹರಿಸಿದ್ದೆ ಎಂದು ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ ಅವರು ಹೇಳಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆ ಭರ್ತಿಗಾಗಿ ಹಿರಿಯ ಮತ್ತು ಕಿರಿಯ ವಕೀಲರು ನಡೆಸುತ್ತಿರುವ ಸರಣಿ ಉಪವಾಸ ಸತ್ಯಾಗ್ರಹದ ಕುರಿತು ಮಾತನಾಡಿದ ಅವರು, ಈಗ ನ್ಯಾಯಮೂರ್ತಿಗಳ ಕೊರತೆಯಿಂದ ಸಮಸ್ಯೆ ತೀವ್ರವಾಗಿದೆ ಜನಸಾಮಾನ್ಯರಿಗೆ ಹಿಂಸೆಯಾಗಿದೆ, ಹಾಗಾಗಿ ಪ್ರಧಾನಿಗಳ ಮನವೊಲಿಸುವ ಪ್ರಯತ್ನ ಮಾಡುತ್ತೇನೆ, ನನ್ನ ಮಾತಿಗೆ ಕಿವಿಗೊಟ್ಟರೆ ಸಂತೋಷ ಎಂದಿದ್ದಾರೆ.

ಸೀನಿಯರ್ ವಕೀಲರು ಎಲ್ಲರೂ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಾರೆ, ಇದೇ ಮೊದಲ ಬಾರಿ ಈ ರೀತಿ ಧರಣಿ ಮಾಡಿತ್ತಿರುವುದು, ಇದರಲ್ಲಿ ಹೀಗೆ ನಿವೃತ್ತ ನ್ಯಾಯಮೂರ್ತಿಗಳು ಸಹ ಇದ್ದಾರೆ ಎಂದರು.

ಸಮಸ್ಯೆ ಕುರಿತಂತೆ ಪಿಎಂ ಅನುಮತಿ ನೀಡದಿದ್ದರೆ ನಾನು ಹೋಗಲ್ಲ, ನಾನು ಹಾಗೆಯೇ ಹೋಗಿ ಕಾಯಲ್ಲ, ನಾನು ಪಿಎಂ ಬಗ್ಗೆ ಲಘುವಾಗಿ ಮಾತಾಡಿಲ್ಲ, ಆ ಸ್ಥಾನಕ್ಕೆ ಗೌರವ ಕೊಟ್ಟಿದ್ದೇನೆ, ಇಂದು ಅಥವ ನಾಳೆ ಪ್ರಧಾನಿ ಭೇಟಿಗೆ ಸಮಯಾವಕಾಶ ಕೇಳಿದ್ದೇನೆ, ಕೊಟ್ಟರೆ ಹೋಗುತ್ತೇನೆ. ರಾಷ್ಟ್ರಪತಿಗಳಿಗೂ ನಾನು ಮನವಿ ಪತ್ರ ನೀಡಲಿದ್ದೇನೆ, ನೀವು ಸಹ ಒಂದು ಮನವಿ ಪತ್ರ ಕೊಡಿ ಎಂದು ವಕೀಲರಲ್ಲಿ ಮನವಿ ಮಾಡಿದ್ದಾರೆ.

ನ್ಯಾಯಾಂಗದ ಘನತೆ ಗೌರವ ಉಳಿಸುವ ನಿಟ್ಟಿನಲ್ಲಿ ಶೀಘ್ರವಾಗಿ ನ್ಯಾಯಮೂರ್ತಿಗಳ ನೇಮಕಾತಿಯಾಗಬೇಕು ಎಂದು ದೇವೇಗೌಡರು ಆಗ್ರಹಿಸಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಜನರು ಕಕ್ಷಿದಾರರು, ವಕೀಲರು ರೊಚ್ಚಿಗೇಳುವ ಕಾಲ ದೂರವಿಲ್ಲ ಎಂದರು.

ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಾಗೂ ಕರ್ನಾಟಕದ 60 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆ ಭರ್ತಿಗಾಗಿ ಹಿರಿಕಿರಿಯ ವಕೀಲರೆನ್ನದೇ ಈ ರೀತಿ ಸರಣಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಆತಂಕದ ವಿಷಯ ಎಂದಿದ್ದಾರೆ.

ನಾನು ಇಂದು ಅಥವ ನಾಳೆ ಪ್ರಧಾನಿ ಮತ್ತು ರಾಷ್ಟಪತಿಗಳನ್ನು ಭೇಟಿಯಾಗಿ ಚರ್ಚಿಸುತ್ತೇನೆ, ಸಮಸ್ಯೆಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡುತ್ತೇನೆ. ಈ ವಿಷಯದಲ್ಲಿ ಯಾವುದೇ ರಾಜಕೀಯ ಲಾಭಗಳನ್ನು ನಾನು ನಿರೀಕ್ಷಿಸುವುದಿಲ್ಲ, ಸಮಸ್ಯೆ ನಾನೇ ಬಗೆ ಹರಿಸಿದೆ ಎಂದು ಯಾರು ಬೇಕಾದರೂ ಬೆನ್ನು ತಟ್ಟಿಕೊಳ್ಳಲಿ. ನಾನಂತೂ ಈ ದೇಶದ ಮಾಜಿ ಪ್ರಧಾನಿಯಾಗಿ, ಸಂಸದನಾಗಿ ಕಕ್ಷಿದಾರರಿಗಾಗುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ವಿವರವಾಗಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇನೆ ಎಂದರು.

ಇನ್ನು ಪ್ರಧಾನಿಗಳ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಾನು ಸಹಿಸುವುದಿಲ್ಲ. ಪ್ರಧಾನಿ ಸ್ಥಾನದ ಗೌರವ ಉಳಿಯಬೇಕು ಮತ್ತು ಉಳಿಸಿಕೊಳ್ಳಬೇಕು. ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ನಿಮಗೆಲ್ಲ ಅರ್ಥವಾಗುತ್ತದೆ.

ರಾಷ್ಟ್ರಪತಿ ಕೋವಿಂದ್ ಅವರು ನನಗೆ ಮೊರಾರ್ಜಿ ಕಾಲದಿಂದಲೂ ಆಪ್ತ ಸ್ನೇಹಿತರು, ನನ್ನ ಬಗ್ಗೆ ಅವರಿಗೆ ವೈಯುಕ್ತಿಕವಾಗಿ ಒಳ್ಳೆಯ ಅಭಿಪ್ರಾಯವಿದೆ. ನಾನು ಅವರಿಗೆ ಸಮಸ್ಯೆ ಬಗ್ಗೆ ಮನವಿ ಮಾಡುತ್ತೇನೆ ಎಂದರು. ಈಗ ನಾನು ಒಬ್ಬ ಮಾಜಿ ಪ್ರಧಾನಿ, ಪ್ರಧಾನಮಂತ್ರಿಗಳ ಕಚೇರಿಗೆ ಏನಾದರೂ ಸಮಸ್ಯೆಯನ್ನು ದೂರವಾಣಿಗಳ ಮೂಲಕ ಹೇಳಿದರೆ ಕಿವಿಗೊಡುವುದಿಲ್ಲ. ಅದೊಂದು ಕಾಲವಿತ್ತು, ನರಸಿಂಹರಾವ್ ಕಾಲದಲ್ಲಿ ನಾನು ಫೋನ್ ಮಾಡಿದರೆ ಸಾಕು ಕೆಲಸ ಆಗುತ್ತಿತ್ತು, ಈಗ ಆಗುವುದಿಲ್ಲ ಎಂದು ಮಾಜಿ ಪ್ರಧಾನಿ ಬೇಸರ ವ್ಯಕ್ತಪಡಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ