ಬಿಸಿಯೂಟ ಸಿಬ್ಬಂದಿಯ ಭಾರೀ ಪ್ರತಿಭಟನೆ

Bisi Oota workers protest for minimum wage

06-02-2018

ಬೆಂಗಳೂರು: ಕನಿಷ್ಠ ವೇತನ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ  ಬಿಸಿಯೂಟ ಸಿಬ್ಬಂದಿ  ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು. ರಾಜ್ಯದ ವಿವಿಧ ಜಿಲ್ಲೆ ಗಳಿಂದ ಬೆಂಗಳೂರಿಗೆ ಅಗಮಿಸಿದ್ದ ಸಾವಿರಾರು ಬಿಸಿಯೂಟ ತಯಾರಕರು ಫ್ರೀಡಂಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಶಿಕ್ಷಣ ಸಚಿವ ತನ್ವೀರ್ ಸೇಠ್ ಮನೆಗೆ ಮುತ್ತಿಗೆ ಹಾಕಲು ಬಿಸಿಯೂಟ ಕಾರ್ಯಕರ್ತೆಯರು ಮುಂದಾಗಿದ್ದು, ಫ್ರೀಡಂ ಪಾರ್ಕ್ ನಿಂದ ತನ್ವೀರ್ ಸೇಠ್ ನಿವಾಸದ ಕಡೆ ಹೊರಟಿದ್ದರು. ಮುತ್ತಿಗೆಗೆ ಹೊರಟ ರ‍್ಯಾಲಿಯನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ, ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ , ಬ್ಯಾರಿಕೇಡ್ ಗಳನ್ನ ತಳ್ಳಿದ್ದಾರೆ.

ಸಚಿವ ತನ್ವೀರ್ ಸೇಠ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ನಮ್ಮೆಲ್ಲರ ಕಷ್ಟ ಅವರಿಗೆ ಅರ್ಥವಾಗ್ತಿಲ್ವಾ? ನಾವು ನಮ್ಮ ಹಕ್ಕನ್ನ ಕೇಳ್ತಿದ್ದೀವಿ. ಕನಿಷ್ಟ ವೇತನ ಕೊಡಿ. ನ್ಯಾಯಯುತವಾಗಿ ನಮಗೆ ಕೊಡಬೇಕಾದ ವೇತನ ಕೊಡಿ, ಕನಿಷ್ಠ ವೇತನ, ಕೆಲಸ ಖಾಯಂ, ಪಿಎಫ್, ಐಎಸ್‍ಐ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಬಿಸಿಯೂಟ ತಯಾರಕರ ಸಂಘ ಹಾಗೂ ಎಐಟಿಯುಸಿ ವತಿಯಿಂದ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಇವತ್ತು ಬಿಸಿಯೂಟ ಇರುವುದಿಲ್ಲ. ಬೆಂಗಳೂರಿನಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಜಿಲ್ಲಾ ಅಡುಗೆ ಸಹಾಯಕರು ಪ್ರತಿಭಟನೆ ಮಾಡ್ತಿರೋದ್ರಿಂದ ಜಿಲ್ಲೆಗಳಲ್ಲಿ ಮಾತ್ರ ಇಂದು ಬಿಸಿಯೂಟದ ಸಮಸ್ಯೆ ಎದುರಾಗಲಿದೆ.

ಈ ಹಿಂದೆ ಸಾಕಷ್ಟು ಭಾರಿ ಪ್ರತಿಭಟನೆ ಮಾಡಿದ್ರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಪ್ರತಿಭಟನೆಯಲ್ಲಿ ಇಲಾಖೆ 5200 ರೂ. ಕನಿಷ್ಟ ವೇತನ ನೀಡುವ ಭರವಸೆ ನೀಡಿತ್ತು. ಪ್ರಸಕ್ತ ವರ್ಷದಿಂದ ಪ್ರತಿ ತಿಂಗಳು 5200 ರೂ. ನೀಡುವುದಾಗಿ ಸಚಿವರು ಭರವಸೆ ನೀಡಿದ್ದರು. ಆದರೆ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕಾರ್ಯಕರ್ತೆಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ವೇಳೆ ಪ್ರತಿಭಟನೆಗೆ ಬಂದಿದ್ದ ಮೂವರು ಮಹಿಳೆಯರು ಅಸ್ವಸ್ಥಗೊಂಡಿದ್ದು, ಸ್ಥಳದಲ್ಲೇ ಅವರನ್ನ ಸಹೋದ್ಯೋಗಿಗಳು ಆರೈಕೆ ಮಾಡಿದ್ದಾರೆ. ಅಲ್ಲದೇ ಸಚಿವರು ಪ್ರತಿಭಟನಾ ಸ್ಥಳಕ್ಕೆ ಅಗಮಿಸಿ ಭರವಸೆ ನೀಡೋವರಗೆ ಪ್ರತಿಭಟನೆ ಹಿಂಪಡೆಯವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

minimum wage Bisi Oota ಭರವಸೆ ಎಐಟಿಯುಸಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ