ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಹೆಸರು ಬದಲಾಯಿಸುವಂತೆ ಒತ್ತಾಯ

Kannada News

26-04-2017

ಬೆಂಗಳೂರು, ಏ.26-ನಗರದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಈಗಿರುವ ಕೆಂಪೇಗೌಡ ನಿಲ್ದಾಣ ಎಂಬುದನ್ನು "ನಾಡಪ್ರಭು ಕೆಂಪೇಗೌಡ" ನಿಲ್ದಾಣ ಎಂದು ಬದಲಾಯಿಸುವಂತೆ ಒತ್ತಾಯಿಸಿ ಕಳೆದ ಒಂದು ವರ್ಷದಿಂದ ಹೋರಾಟ ನಡೆಸುತ್ತಿರುವ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹೋರಾಟವನ್ನು ಮತ್ತಷ್ಟು ತೀವ್ರ ಗೊಳಿಸಲು ಮುಂದಾಗಿದ್ದಾರೆ
ಇಲ್ಲಿಯವರೆಗಿನ ಹೋರಾಟಕ್ಕೆ ಯಾವುದೇ ಫಲ ದೊರಕದ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಿರುವ ಕನ್ನಡಪರ ಕಾರ್ಯಕರ್ತರು, ಇಡೀ ದಿನ ಮೆಟ್ರೊ ರೈಲಿನಲ್ಲಿ ಸಂಚರಿಸುವ ಮೂಲಕ ಹೊಸ ರೀತಿಯ ಪ್ರತಿಭಟನೆ ನಡೆಸಲಿದ್ದಾರೆ.
ಇಡೀ ದಿನ ಪ್ರತಿಭಟನೆ ನಡೆಸಿದರೆ ಮೆಟ್ರೊ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಆಗ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಈ ವಿಷಯ ಬರುತ್ತದೆ ಎಂಬುದು ಹೋರಾಟಗಾರರ ಅಭಿಪ್ರಾಯ. ಅದಕ್ಕಾಗಿ ಶೀಘ್ರವೇ ಹೋರಾಟದ ದಿನಾಂಕ ಪ್ರಕಟಿಸುವುದಾಗಿ ಹೋರಾಟಗಾರರು ತಿಳಿಸಿದ್ದಾರೆ.
ಈ ಹಿಂದೆಯೂ ಇದೇ ಹೋರಾಟಗಾರರು  ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯಕ್ಕಾಗಿ ಹೋರಾಟ ನಡೆಸಿದ ಫಲವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ ಎಚ್ಚೆತ್ತುಕೊಂಡು ಶೌಚಾಲಯ ನಿರ್ಮಿಸಿತ್ತು. ಇದೀಗ ಸಂಘಟನೆ ಹೆಸರು ಬದಲಾಯಿಸುವ ಹೋರಾಟವನ್ನು ಕೈಗೆತ್ತಿಕೊಂಡಿದೆ.
ಗಣ್ಯ ಮತ್ತು ಸಾಧಕ ವ್ಯಕ್ತಿಗಳ ಹೆಸರುಗಳ ಮುಂದೆ ಸರ್, ಸ್ವಾಮೀಜಿ, ಕ್ರಾಂತಿವೀರ, ಡಾ., ಶ್ರೀ, ಮುಂತಾದ ಗೌರವ ಸೂಚಕ ಪದಗಳನ್ನು ಬಳಸುವುದು ಸಂಪ್ರದಾಯ. ಆದರೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಕೆಂಪೇಗೌಡ ನಿಲ್ದಾಣ ಎಂದಷ್ಟೇ ಬರೆಯಲಾಗಿದೆ. ಮೈಸೂರು ರಸ್ತೆಯಿಂದ ಭಯ್ಯಪ್ಪನಹಳ್ಳಿಯನ್ನು ಸಂಪರ್ಕಿಸುವ ನೇರಳೆ ಮೆಟ್ರೋ ಮಾರ್ಗದಲ್ಲಿ ಒಟ್ಟು 7 ನಿಲ್ದಾಣಗಳು ಬರುತ್ತವೆ. ಪ್ರತಿಯೊಂದು ನಿಲ್ದಾಣಕ್ಕೂ ಸಾಧಕ ವ್ಯಕ್ತಿಗಳ ಹೆಸರುಗಳನ್ನು ಹಾಕಲಾಗಿದೆ. ಆದರೆ ಕೆಂಪೇಗೌಡ ಹೆಸರಿನ ಮುಂದೆ ಯಾವುದೇ ಗೌರವ ಸೂಚಕಗಳು ಇಲ್ಲ. ಇದರಿಂದ 16ನೇ ಶತಮಾನದಲ್ಲಿ ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರಿಗೆ ಅಗೌರವ ತೋರಿದಂತಾಗಿದೆ ಎಂಬುದು ಕನ್ನಡ ಪರ ಸಂಘಟನೆಗಳ ವಾದ.
"ಅವರು ಬೆಂಗಳೂರು ನಿರ್ಮಾತೃ. ಅವರ ಹೆಸರಿನ ಮುಂದೆ ಗೌರವ ಸೂಚಕ ಪದ ಬಳಸದಿರುವುದು ಸರಿಯಲ್ಲ. ಮೆಜೆಸ್ಟಿಕ್ ನಿಲ್ದಾಣದ ಹೆಸರನ್ನು ನಾಡಪ್ರಭು ಕೆಂಪೇಗೌಡ ಎಂದು ಬದಲಾಯಿಸಬೇಕು. ಪ್ರತಿ ಬಾರಿ ಅವರ ಹೆಸರನ್ನು ಯಾವುದೇ ಗೌರವ ಸೂಚಕ ಪದ ಬಳಸದೆ ಏಕವಚನದಲ್ಲೇ ನಿಲ್ದಾಣದಲ್ಲಿ ಘೋಷಿಸಲಾಗುತ್ತಿದೆ. ಇದರಿಂದ ನಮಗೆ ತುಂಬಾ ನೋವಾಗುತ್ತಿದೆ. ಆದ್ದರಿಂದ ಬಿಎಂಆರ್‍ಸಿಎಲ್ ಕೂಡಲೇ ನಾಡಪ್ರಭು ಕೆಂಪೇಗೌಡ ಎಂದು ಹೆಸರನ್ನು ಬದಲಾಯಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಟಿ.ನರಸಿಂಹಮೂರ್ತಿ ಹೇಳುತ್ತಾರೆ.
ಈ ವಿಷಯಕ್ಕೆ ಸಂಬಂಧಿಸಿ ಮೊದಲ ಬಾರಿಗೆ 2016, ಮೇ 11ರಂದು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಲಾಯಿತು. ಅರ್ಜಿ ಸ್ಥಿತಿಗತಿ ಕುರಿತು ಮಾಹಿತಿ ಕೇಳಿ ಮತ್ತೊಂದು ಅರ್ಜಿ ಹಾಕಿದರು. ಆಗ ಬಿಎಂಆರ್‍ಸಿಎಲ್ ಉತ್ತರಿಸಿ, ಈ ವಿಷಯವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಅರ್ಜಿಗೆ ಉತ್ತರಿಸಿ, ಕೆಂಪೇಗೌಡ ಅಂತ ಕರೆದರೆ ಅದು ಅಗೌರವ ಅಲ್ಲ. ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ನಿಲ್ದಾಣ ಎಂದು ಹೆಸರಿಲಾಗಿದೆ ಎಂದು ತಿಳಿಸಿತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮೂರ್ತಿ, ಎಲ್ಲಾ ಕಡೆಗಳಲ್ಲೂ ಒಂದೇ ರೀತಿ ಹೆಸರು ಬಳಸಬೇಕು. ಬಿಡಿಎ ನಿರ್ಮಿಸುತ್ತಿರುವ ಬಡಾವಣೆಗೆ ನಾಡಪ್ರಭು ಕೆಂಪೇಗೌಡ ಬಡಾವಣೆ ಎಂದು ಹೆಸರಿಡಬೇಕು ಎಂದು ಆಗ್ರಹಿಸಿದ್ದಾರೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ