70ಕಿ.ಮೀ ಮೃತ ದೇಹವನ್ನು ಎಳೆದು ತಂದ ಬಸ್

A dead body stuck inside bus and traveled 70 kilometer ffrom accident point

05-02-2018

ಬೆಂಗಳೂರು: ಕೆ.ಎಸ್.ಆರ್.ಟಿ.ಸಿ ಬಸ್‍ನ ಚಾರ್ಸಿಗೆ ಸಿಲುಕಿ ಸುಮಾರು 70 ಕಿಮೀ ದೂರದವರೆಗೂ ಎಳೆದು ತಂದ ಮೃತದೇಹದ ಗುರುತು ಪತ್ತೆಗಾಗಿ ವಿಲ್ಸನ್‍ಗಾರ್ಡನ್ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಅಪಘಾತವನ್ನು ಮುಚ್ಚಿಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದ್ದ ಬಸ್ ಚಾಲಕ ಮೊಯಿದ್ದೀನ್‍ನನ್ನು ಬಂಧಿಸಿರುವ ವಿಲ್ಸನ್‍ಗಾರ್ಡನ್ ಪೊಲೀಸರು ಆತನನ್ನು ಕೃತ್ಯ ನಡೆದ ಸ್ಥಳಕ್ಕೆ ಕರೆದೊಯ್ದು ಮಾಹಿತಿ ಪಡೆದು ಮೃತವ್ಯಕ್ತಿಯ ಪೋಟೋ ಹಿಡಿದು ಸುತ್ತುಮುತ್ತಲ ಹಳ್ಳಿಗಳಲ್ಲಿ ಮೃತ ವ್ಯಕ್ತಿಯ ಗುರುತು ಪತ್ತೆ ಕಾರ್ಯ ನಡೆಸಿದ್ದಾರೆ.

ನಿನ್ನೆ ಸಂಜೆ 6ರಂದು ಕೆಎ 40 ಎಫ್ 1111 ನೋಂದಣಿಯ ಕೆಎಸ್‍ಆರ್‍ಟಿಸಿ ಬಸ್ ತಮಿಳುನಾಡಿನ ಕೂನೂರಿನಿಂದ ಹೊರಟು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಚನ್ನಪಟ್ಟಣ ಬಳಿ ಬರುತ್ತಿದ್ದಂತೆ ಬಸ್‍ಗೆ ಏನೋ ತಗುಲಿದ ಶಬ್ದ ಕೇಳಿಸಿದೆ. ಆದರೆ, ರಸ್ತೆಯಲ್ಲಿ ಇದೆಲ್ಲಾ ಸಾಮಾನ್ಯ ಎಂದು ಚಾಲಕ ಗಮನಿಸದೆ ಬಸ್ ಚಲಾಯಿಸಿಕೊಂಡು ಬಂದಿದ್ದಾನೆ.

ಆದರೆ ಬರೋಬ್ಬರಿ 70 ಕಿ. ಮೀ ದೂರ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಬಸ್‍ಎಳೆದು ತಂದಿತ್ತು. ರಾತ್ರಿ 2.30ರ ಸುಮಾರಿಗೆ ಶಾಂತಿ ನಗರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನ ಇಳಿಸಿದ ಮೇಲೆ ಡಿಪೋ ಕಡೆ ಹೊರಟಿದ್ದ. ಆಗ ಚನ್ನಪಟ್ಟಣದಲ್ಲಿ ಆದ ಶಬ್ಧ ನೆನಪಾಗಿ ಬಸ್ ಕೆಳಗೆ ಇಣುಕಿ ನೋಡಿದಾಗ ಮೃತದೇಹ ಚಾರ್ಸಿಗೆ ಸಿಕ್ಕಿ ಹಾಕಿಕೊಂಡು ಬಂದಿರುವುದು ಕಂಡುಬಂದಿದೆ.

ಮೃತದೇಹ ನೋಡುತ್ತಿದ್ದಂತೆ ನಿಂತಲ್ಲೇ ಕುಸಿದು ಹೋದ ಚಾಲಕ ಬಳಿಕ ಸಾವರಿಸಿಕೊಂಡು ಶವವನ್ನ ಬಸ್‍ನಿಂದ ಬಿಡಿಸಿ, ಅಲ್ಲೇ ಪಕ್ಕದಲ್ಲಿ ನಿಂತಿದ್ದ ಮತ್ತೆರೆಡು ಬಸ್‍ಗಳ ಮಧ್ಯದಲ್ಲಿ ಹಾಕಿ, ಬಸ್ ಸ್ವಚ್ಛಮಾಡಿ ಮನೆಗೆ ಹೋಗಿದ್ದ. ಮರುದಿನ ಡಿಪೋದಲ್ಲಿದ್ದ ಸ್ವಚ್ಛತಾ ಸಿಬ್ಬಂದಿ ಮೃತದೇಹ ಕಂಡು ಹಿರಿಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರು. ಅನುಮಾನ ಬಂದ ಅಲ್ಲೆ ಇದ್ದ ಸಿಸಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದಾಗ ಚಾಲಕನೊಬ್ಬ ಬಸ್‍ನ ಕೆಳಭಾಗಕ್ಕೆ ಬಗ್ಗಿ ನೋಡುತ್ತಾ ಇರುವುದು ಕಾಣಿಸಿತ್ತು. ಬಳಿಕ ಬಸ್ ಪರಿಶೀಲನೆ ನಡೆಸ್ದಾಗ ರಕ್ತದ ಕಲೆ ಕಂಡು, ಚಾಲಕನನ್ನ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಮೇಲ್ನೋಟಕ್ಕೆ ಮೃತ ವ್ಯಕ್ತಿಯ ಕಾಲು ಚಾರ್ಸಿಗೆ ಸಿಲುಕಿದ್ದು, ಬೆನ್ನು ಮತ್ತು ತಲೆಯ ಹಿಂಭಾಗ ಸಂಪೂರ್ಣವಾಗಿ ರಸ್ತೆಗೆ ಉಜ್ಜಿಕೊಂಡೇ 70 ಕಿಲೋಮೀಟರ್ ಕ್ರಮಿಸಿದೆ. ಒಂದು ವೇಳೆ ಚಾಲಕ ಮೊಹಿನುದ್ದೀನ್ ಅರಿವಿಲ್ಲದೆ ಈ ಘಟನೆ ಸಂಭವಿಸಿದ್ದರೂ ಬೆಂಗಳೂರಿಗೆ ಬಂದ ಬಳಿಕ ಅದನ್ನು ಮುಚ್ಚಿಡಲು ಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಸಾಕ್ಷ್ಯ ನಾಶ ಮತ್ತು ನಿರ್ಲಕ್ಷ್ಯತನದ ಆರೋಪದಡಿ ವಿಲ್ಸನ್ ಗಾರ್ಡನ್ ಪೊಲೀಸರು ಪ್ರಕರಣ ದಾಖಲು ಮಾಡಿ ಮೊಹಿನುದ್ದೀನ್‍ನ ಬಂಧಿಸಿ ಮೃತದೇಹದ ಗುರುತು ಪತ್ತೆ ಕಾರ್ಯ ನಡೆಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Accident Horrific ಕೆಎಸ್‍ಆರ್‍ಟಿಸಿ ಮೃತದೇಹ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ