‘ಸರಕಾರಿ ಕಚೇರಿಗಳನ್ನು ಲಂಚ ಮುಕ್ತಗೊಳಿಸಿ’

Government office should free from bribe says K.T.gangadhar

02-02-2018

ಶಿವಮೊಗ್ಗ: ರೈತರು ಆರ್ಥಿಕ ಸಂಕಷ್ಟದಲ್ಲಿದ್ದರು ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಖಾಸಗಿ ಫೈನಾನ್ಸ್ ಗಳು ಮಾನವೀಯತೆಯಿಂದ ಕಾಣದೆ ರೈತರನ್ನು ಜೈಲಿಗಟ್ಟುವ ಪಿತೂರಿ ನಡೆಸುತ್ತಿದ್ದರೆ, ಸರಕಾರದ ವಿವಿಧಿ ಇಲಾಖೆಗಳಲ್ಲಿ ರೈತರಿಗೆ ನೀಡಬೇಕಾದ ದಾಖಲೆಗಳಿಗೆ ಲಂಚವತಾರದಲ್ಲಿ ತೊಡಗಿ ಪೀಡಿಸುತ್ತಿವೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಶಿವಮೊಗ್ಗದ ಮಿನಿ ವಿಧಾನಸೌಧ ಮುಂಭಾಗದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು, ಹಣಕಾಸು ಸಂಸ್ಥೆ ಹಾಗು ಸರಕಾರಿ ಕಚೇರಿಗಳ ಆಡಳಿತದ ವಿರುದ್ಧ, ರೈತ ಸಂಘ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ ಅವರು, ತಾಲ್ಲೂಕಿನ ರೈತರು ಭದ್ರಾ ನದಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ರೈತರು, ಕೃಷಿ ಕಾರ್ಮಿಕರು ವ್ಯವಸಾಯವನ್ನು ಆಧರಿಸಿದ್ದಾರೆ. ಸತತವಾಗಿ ಮೂರು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದ್ದು, ರೈತರು ಆರ್ಥಿಕವಾಗಿ ಕಂಗೆಟ್ಟಿದ್ದಾರೆ. ಅಣೆಕಟ್ಟು ಸಹ ತುಂಬದಿದ್ದು ಭದ್ರಾನದಿಯ ಅಚ್ಚುಕಟ್ಟು ಪ್ರದೇಶದ ಬೆಳೆಗಳು ನಾಶವಾಗಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿ ಕಣ್ಣೀರು ಸುರಿಸುವಂತಾಗಿದೆ ಎಂದು ಅಲ್ಲಿನ ರೈತರ ಸಮಸ್ಯೆಗಳನ್ನು ಬಿಚ್ಚಿಟ್ಟರು. ಇನ್ನು ಸಾಲು ಸಾಲು ಸಮಸ್ಯೆಗಳಿಂದ ತಾಲ್ಲೂಕಿನಲ್ಲಿ ಮತ್ತು ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಹಾಗು ವ್ಯವಸಾಯ ಕ್ಷೇತ್ರವೇ ಸ್ಥಗಿತಗೊಂಡಂತಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳಿಲ್ಲವಾಗಿ ಯುವಕರು ವಲಸೆ ಹೋಗುವಂತಾಗಿದೆ. ಬಡಬಗ್ಗರು ಸಹ ಕಷ್ಟದ ಕೂಪಕ್ಕೆ ತತ್ತರಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕೇಂದ್ರ ಸರಕಾರವು ನೋಟು ಬ್ಯಾನ್ ಮಾಡಿ, ಜಿಎಸ್‍ಟಿ ಜಾರಿಯಿಂದ ರೈತರು ಮತ್ತಷ್ಟು ತೊಂದರೆ ಅನುಭವಿಸಬೇಕಾಗಿದೆ ಎಂದು ಕಿಡಿಕಾರಿದರು. 

ಬ್ಯಾಂಕ್‍ಗಳು ಸೇರಿದಂತೆ ಖಾಸಗಿ ಫೈನಾನ್ಸ್ ಸಂಸ್ಥೆಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳ ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡಲು ಕಠಿಣ ಕ್ರಮಕ್ಕೆ ಮುಂದಾಗಿ ಇಲ್ಲಸಲ್ಲದ ಕಾರಣಗಳಿಂದ ರೈತ, ಕೂಲಿ ಕಾರ್ಮಿಕರನ್ನು ಜೈಲಿಗಟ್ಟುವ ಕಾರ್ಯದಲ್ಲಿ ತೊಡಗಿವೆ. ಇದರಿಂದ ನಿರುದ್ಯೋಗಿಗಳು ನಕ್ಸಲ್ ಮತ್ತು ಉಗ್ರ ಸಂಘಟನೆಗಳ ಚಟುವಟಿಕೆಗಳಂತಹ ದಾರಿಗೆ ತಳ್ಳಲ್ಪಡುತ್ತಿದ್ದಾರೆ. ಸರಕಾರ ಬೆಳೆಗಳಿಗೆ ಬೆಂಬಲ ಬೆಲೆ ನೀಡದೇ ಕೇವಲ ಪ್ರಚಾರದಲ್ಲಿ ತೊಡಗಿವೆ ಎಂದು ದೂರಿದರು.

ರೈತರ ಸಾಲ ಮನ್ನ ಮತ್ತು ರೈತಪರ ಯೋಜನೆಗಳನ್ನು ನೀಡುವುದಾಗಿ ಹೇಳಿದ್ದ ಕೇಂದ್ರ ಸರಕಾರ ಗುರುವಾರ ಮಂಡಿಸಿದ ಬಜೆಟ್‍ನಲ್ಲಿ ರೈತರಿಗೆ ಅನ್ಯಾಯವೆಸಗಿದೆ. ಈ ಅನ್ಯಾಯವನ್ನು ರಾಜ್ಯದ ಮುಖ್ಯಮಂತ್ರಿ ಕನಸು ಹೊತ್ತಿರುವ ಸಂಸದ ಬಿ.ಎಸ್.ಯಡಿಯೂರಪ್ಪ ಸಂಸತ್‍ನಲ್ಲಿ ಚಕಾರವೆತ್ತದಿರುವುದು ರೈತರಿಗೆ ಮಾಡಿದ ಘೋರ ಅಪರಾಧವಾಗಿದೆ. ಸಾಲ ವಸೂಲಿ ಕಿರುಕುಳ ಒಂದೆಡೆಯಾದರೆ, ಸರಕಾರಿ ಕಚೇರಿಯಲ್ಲಿ ದೊರೆಯಬಹುದಾದ ದಾಖಲೆಗಳನ್ನು ಪಡೆಯಲು ಲಂಚ ನೀಡಿಯೇ ಸೇವೆ ಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಕೆ.ಟಿ.ಗಂಗಾಧರ್ ಟೀಕಿಸಿದರು. ರೈತ ಮುಖಂಡರಾದ ಯಶವಂತರಾವ್ ಘೋರ್ಪಡೆ, ರಾಮಚಂದ್ರರಾವ್ ಘೋರ್ಪಡೆ, ತಳ್ಳಿಕಟ್ಟೆ ತಮ್ಮಯ್ಯ, ವೀರೇಶ್, ಶಿವು, ಗಿರೀಶ್, ವೇದಮೂರ್ತಿ, ಬಿ.ಎನ್.ರಾಜು ಮುಂತಾದ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಸಂಬಂಧಿತ ಟ್ಯಾಗ್ಗಳು

K.T.gangadhar Hasiru Sene ಮಿನಿ ವಿಧಾನಸೌಧ ರೈತ ಸಂಘ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ