'ಮಂಡಿ ಚಿಪ್ಪು ಬದಲಾವಣೆ: ಉಚಿತ ಚಿಕಿತ್ಸೆ'02-02-2018

ಬೆಂಗಳೂರು: ಮಂಡಿ ಚಿಪ್ಪು ಸಮಸ್ಯೆಯಿಂದ ಬಳಲುತ್ತಿರುವವರು ಇನ್ನು ಮುಂದೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಪ್ಪು ಬದಲಾವಣೆಯ ಚಿಕಿತ್ಸೆಯನ್ನು ಪಡೆಯಬಹುದು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಲಿನ ಮಂಡಿ ನೋವು, ಕೀಲು ನೋವು ಅನುಭವಿಸುತ್ತಿರುವವರು ಇದರ ಸಂಪೂರ್ಣ ಪ್ರಯೋಜನವನ್ನು ಮಾರ್ಚ್ ತಿಂಗಳಿನಿಂದಲೇ ಜಿಲ್ಲಾ ಆಸ್ಪತ್ರೆಗಳಲ್ಲಿ ಪಡೆಯಬಹುದು ಎಂದರು.

ಒಂದು ವೇಳೆ ನಮ್ಮ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇದ್ದರೆ ಖಾಸಗಿ ತಜ್ಞರ ತಂಡವನ್ನು ಕರೆಸಿ ಈ ಮಂಡಿ ಚಿಪ್ಪು,ಕೀಲು ನೋವಿಗೆ ಪರಿಹಾರ ಒದಗಿಸುವುದಾಗಿ ಹೇಳಿದರು. ಮಂಡಿನೋವು, ಕೀಲು ನೋವು ರೋಗಗಳಿಂದ ಬಳಲುತ್ತಿರುವವರಿಂದ ಹಣ ಕೀಳುವ ದಂಧೆಯೇ ಇದೆ. ಹೀಗಾಗಿ ರಾಷ್ಟ್ರದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮಂಡಿ ನೋವು, ಕೀಲು ನೋವು ರೋಗದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲಾಗುವುದು ಎಂದು ಅವರು ವಿವರ ನೀಡಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಮಂಡಿ ಚಿಪ್ಪು ಬದಲಾವಣೆಗೆ ಎರಡು ಲಕ್ಷ ರೂಗಳಿಂದ ಐದು ಲಕ್ಷ ರೂ ತನಕ ಶುಲ್ಕ ನಿಗದಿ ಮಾಡಲಾಗುತ್ತಿದೆ. ಇದರ ಜತೆಗೆ ವಿನಾ ಕಾರಣ ಹೆದರಿಸಿ ರೋಗಿಗಳು ಶಸ್ತ್ರ ಚಿಕಿತ್ಸೆ ಪಡೆಯುವಂತೆ ಮಾಡುವ ದಂಧೆ ಜರುಗುತ್ತಿದೆ ಎಂದು ವಿಷಾದಿಸಿದರು.

ಇಂತಹ ದಂಧೆಗೆ ಇತಿಶ್ರೀ ಹಾಡುವುದು ಸರ್ಕಾರದ ಉದ್ದೇಶ. ಇದೇ ಕಾರಣಕ್ಕಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಿಭಾಗ ತೆರೆಯಲಾಗುವುದು. ನಮ್ಮಲ್ಲಿ ತಜ್ಞ ವೈದ್ಯರ ಕೊರತೆ ಇದ್ದರೆ ಹೊರಗಿನಿಂದ ತಜ್ಞರನ್ನು ಕರೆತಂದು ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು. ರಾಜಕೀಯ ಪ್ರಭಾವದಿಂದ ಜಿಲ್ಲಾ ಮುಖ್ಯ ಆರೋಗ್ಯಾಧಿಕಾರಿಗಳ ಹುದ್ದೆಗೆ ಬಂದು ಕೂರುವ ಪರಿಪಾಠ ಇದೆ. ಆದರೆ ಅದನ್ನು ಕಿತ್ತು ಹಾಕಿ ನಿರ್ದಿಷ್ಟ ಪರೀಕ್ಷೆ ಬರೆದು ತೇರ್ಗಡೆಯಾದವರು ಮಾತ್ರ ಆ ಹುದ್ದೆಗೆ ಬರುವಂತೆ ನೋಡಿಕೊಳ್ಳಲಾಗುವುದು ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ