‘ಪ್ರಧಾನಿ ಭರವಸೆ ನೀಡುವ ಸಾಧ್ಯತೆಗಳಿಲ್ಲ’

Mahadayi:

02-02-2018

ಬೆಂಗಳೂರು: ಭಾನುವಾರ ನಗರಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು  ಮಹದಾಯಿ ನದಿನೀರು ಹಂಚಿಕೆ ಸಂಬಂಧ ರಾಜ್ಯದ ಜನತೆಗೆ ಯಾವುದೇ ಭರವಸೆ ನೀಡುವ ಸಾಧ್ಯತೆಗಳಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪರೋಕ್ಷವಾಗಿ ತಿಳಿಸಿದ್ದಾರೆ.

ಭಾನುವಾರ ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಪ್ರಧಾನಿಯವರು ಅಂದು ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ಹಾಗೂ ಕಾರ್ಯಕರ್ತರನ್ನು ಹುರಿದುಂಬಿಸುವ ದಿಕ್ಸೂಚಿ ಭಾಷಣ ಮಾಡುವ ಸಂಭವವಿದೆ. ನನಗೆ ತಿಳಿದಂತೆ ಮಹದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಮೋದಿ ಅವರಿಂದ ಯಾವುದೇ ಆಶ್ವಾಸನೆ ಸಿಗುವುದು ತುಂಬಾ ವಿರಳ ಎಂದು ಪ್ರಧಾನಿಯವರಿಂದ ರಾಜ್ಯಕ್ಕೆ ಯಾವುದೇ ಭರವಸೆ ಸಿಗುವ ಸಾಧ್ಯತೆಗಳಿಲ್ಲ ಎಂಬ ಸುಳಿವು ನೀಡಿದರು.

ಪರಿವರ್ತನಾ ರ್ಯಾಲಿ ಹೊರತುಪಡಿಸಿ ಬೇರೆ ಯಾವುದೇ ವಿಚಾರದ ಬಗ್ಗೆ ಮೋದಿ ಮಾತನಾಡುವ ಸಾಧ್ಯತೆಗಳಿಲ್ಲ. ಗೋವಾದ ಕಾಂಗ್ರೆಸ್ ಮಹದಾಯಿ ನದಿನೀರು ಯೋಜನೆಗೆ ಅಡ್ಡಿಪಡಿಸುತ್ತಿರುವುದರಿಂದ ಯೋಜನೆ ಅನುಷ್ಠಾನವಾಗುವುದು ಅವರಿಗೆ ಬೇಕಿಲ್ಲ ಎಂದು ಕಿಡಿಕಾರಿದರು.

ಇನ್ನು ಪ್ರಧಾನಿಯವರು ಆಗಮಿಸುವ ಸಂದರ್ಭದಲ್ಲಿ ಕೆಲ ಕನ್ನಡಪರ ಸಂಘಟನೆಗಳು ಬೆಂಗಳೂರು ಬಂದ್‍ಗೆ ಕರೆ ನೀಡಿರುವುದು ಇತಿಹಾಸದಲ್ಲಿ ಇದೇ ಮೊದಲು. ಪ್ರಧಾನಿ ಬರುತ್ತಿರುವಾಗ ಉದ್ದೇಶಪೂರ್ವಕವಾಗಿ ರಾಜ್ಯ ಸರ್ಕಾರ ಕನ್ನಡಪರ ಸಂಘಟನೆಗಳನ್ನು ಮುಂದಿಟ್ಟುಕೊಂಡು ಷಡ್ಯಂತ್ರ ರೂಪಿಸಿದೆ ಎಂದು ಆರೋಪಿಸಿದರು.

ಯಾರು ಏನೇ ಅಡ್ಡಿಪಡಿಸಿದರೂ ಭಾನುವಾರದ ಪ್ರಧಾನಿ ಕಾರ್ಯಕ್ರಮ ನಿಲ್ಲುವುದಿಲ್ಲ. ಪ್ರಧಾನಿ ಕಾರ್ಯಕ್ರಮಕ್ಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಂದ್ ಗೆ ಕರೆ ಕೊಡುವ ಮೂಲಕ ರಾಜ್ಯ ಸರ್ಕಾರ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಇದ್ಯಾವುದಕ್ಕೂ ಬಗ್ಗುವುದಿಲ್ಲ ಎಂದು ಹೇಳಿದರು. ಪರಿವರ್ತನಾ ಯಾತ್ರೆಗೆ 80-40 ಅಳತೆಯ ಬೃಹತ್ ವೇದಿಕೆಯನ್ನು ಸಿದ್ದಪಡಿಸಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯಾದ್ಯಂತ 85 ದಿನಗಳ ಕಾಲ 11 ಸಾವಿರ ಕಿ.ಮೀ ಸಂಚರಿಸಲಾಗಿದೆ. ಸುಮಾರು ಒಂದು ಕೋಟಿ 75 ಲಕ್ಷ ಜನರನ್ನು ತಲುಪುದ್ದೇವೆ. ಯಾತ್ರೆಯೂ ಬಹುತೇಕ ಯಶಸ್ವಿಯಾಗಿದೆ ಎಂದು ಹೇಳಿದರು. ಪ್ರಧಾನಿ ಬಂದ ದಿನ ಅನ್ಯ ಪಕ್ಷಗಳ ಯಾವುದೇ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ. ಇದನ್ನು ಮೋದಿಯವರು ಇಷ್ಟಪಡುವುದಿಲ್ಲ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಪಕ್ಷದವರಿಂದ ಅನೇಕ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಕಾದು ನೋಡಿ ಎಂದು ಸೂಚ್ಯವಾಗಿ ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಆರ್.ಅಶೋಕ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರವಿಕುಮಾರ್, ಮಾಳವಿಕಾ ಅವಿನಾಶ್ ಮತ್ತಿತರರು ಹಾಜರಿದ್ದರು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ