'ಸಾವಿನಲ್ಲೂ ರಾಜಕೀಯ ನನ್ನ ಗುಣವಲ್ಲ’

Ramalinga reddy answer to yeddyurappa twitter questions

02-02-2018

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಸಂತೋಷ್ ಕೊಲೆ ಸಂಬಂಧ ಪೊಲೀಸರು ನೀಡಿದ ಮಾಹಿತಿಯನ್ನು ನಾನು ವಿವರಿಸಿದ್ದೇನೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ. ತಮ್ಮ ವಿರುದ್ಧ ಟ್ಟೀಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಮಾಧ್ಯಮ ಹೇಳಿಕೆ ಮೂಲಕ ಪ್ರತ್ಯುತ್ತರ ನೀಡಿರುವ ರಾಮಲಿಂಗಾರೆಡ್ಡಿ, ಸಾವಿನಲ್ಲಿ ರಾಜಕೀಯ ಮಾಡುವುದು ನನ್ನ ಗುಣವಲ್ಲ. ಬಿಎಸ್‍ವೈ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಪೊಲೀಸ್ ಆಯುಕ್ತರು ಸಂತೋಷ್ ಕೊಲೆಗೆ ಸಂಬಂಧಿಸಿ ನೀಡಿದ್ದ ಮಾಹಿತಿಯನ್ನು ನಾನು ತಿಳಿಸಿದ್ದೆ. ಸಂತೋಷ್ ಹತ್ಯೆಗೆ ಯಾವುದೇ ರೀತಿ ಮಾರಕಾಸ್ತ್ರ ಬಳಸಿರಲಿಲ್ಲ. ಸ್ಕ್ರೂಡ್ರೈವರ್ ಬಳಸಿ ಕೊಲೆ ಮಾಡಲಾಗಿದೆ ಎಂದು ನಾವು ವಿವರಿಸಿದ್ದೆ. ಅದು ಅಧಿಕಾರಿಗಳು ಯಾವ ಮಾಹಿತಿ ನೀಡಿದ್ದರೋ ಅದನ್ನು ವಿವರಿಸಿದ್ದೆ. ಅಲ್ಲದೇ ಹತ್ಯೆಯಾದ ಸಂತೋಷ್ ಹಾಗೂ ಆರೋಪಿ ವಾಸಿಮ್ ಸ್ನೇಹಿತರು. ಆದರೆ ಮೂರು ತಿಂಗಳಿಂದ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು.

ನನಗೆ ರಾಜ್ಯದ ಜನರ ರಕ್ಷಣೆ ಮುಖ್ಯ, ದೇಶದ್ರೋಹದ ವಿಷ ಬೀಜ ಬಿತ್ತುವವರನ್ನು ನಾವು ಕ್ಷಮಿಸುವುದಿಲ್ಲ. ರಾಜ್ಯದ ಜನರ ಹಿತ ಕಾಪಾಡುತ್ತೇವೆ. ಸಾವಿನಲ್ಲಿ ರಾಜಕೀಯ ಮಾಡುವುದಿಲ್ಲ. ಜನರ ಒಳಿತಿಗಾಗಿ ಕೆಲಸ ಮಾಡುವವನು ನಾನು. ಯಾರದ್ದೇ ಪ್ರಾಣ ಹೋದರೂ ಅದರ ನೋವು ಭರಿಸುವುದು ಅಸಾಧ್ಯ. ಹೇಳಿಕೆ ನೀಡುತ್ತಾ ಕುಟುಂಬದವರ ಮನಸ್ಸಿಗೆ ನೋವುಂಟು ಮಾಡುವುದು ಸರಿಯಲ್ಲ ಎಂದು ಹೇಳಿದರು.

ರೆಡ್ಡಿ ಸಮರ್ಥನೆ: ಈ ಹಿಂದೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಈತ ಬಿಜೆಪಿ ಕಾರ್ಯಕರ್ತ ಅಲ್ಲ. ಹಿಂದೂ ಸಂಘಟನೆ ಕಾರ್ಯಕರ್ತ ಅಲ್ಲ. ಹಿಂದು ಅಷ್ಟೆ, ವಾಸಿಮ್, ಸಂತೋಷ್ ಆತ್ಮೀಯ ಸ್ನೇಹಿತರು. 3 ತಿಂಗಳಿಂದ ಇಬ್ಬರ ನಡುವೆ ದ್ವೇಷ ಹುಟ್ಟಿಕೊಂಡಿತ್ತು. ಜ.31ರಂದು ಸಂತೋಷ್ ಹತ್ಯೆ ಮಾಡುವ ಉದ್ದೇಶ ಆರೋಪಿಗಳಿಗೆ ಇರಲಿಲ್ಲ. ಕಾಲಿಗೆ ಸ್ಕ್ರೂ ಡ್ರೈವರ್‍ನಿಂದ ಚುಚ್ಚಿದ್ದರು ಅಷ್ಟೆ. ರಕ್ತ ಸೋರಿಕೆಯಿಂದ ಸಂತೋಷ್ ಸಾವನ್ನಪ್ಪಿದ್ದ. ಸಾಯಿಸಲೇಬೇಕು ಅಂತಿದ್ದರೆ ಮಚ್ಚು ಲಾಂಗು ಬಳಸುತ್ತಿದ್ದರು. ಇಲ್ಲಿ ಅದು ಬಳಕೆ ಆಗಿಲ್ಲ. ಹಿಂದುವೊಬ್ಬನ ಒಂದು ಸಾವು ಸಂಭವಿಸಿದರೆ ಸಾಕು, ಬಿಜೆಪಿಯವರು ಅಲ್ಲಿ ರಾಜಕೀಯ ಮಾಡಲು ತೆರಳುತ್ತಾರೆ ಎಂದು ರಾಮಲಿಂಗಾ ರೆಡ್ಡಿ ಹೇಳಿಕೆ ನೀಡಿದ್ದರು.


ಸಂಬಂಧಿತ ಟ್ಯಾಗ್ಗಳು

Ramalinga Reddy twitter ಮಾರಕಾಸ್ತ್ರ ದೇಶದ್ರೋಹ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ