ಸಿಎಂ ಆಪ್ತನ ಸಾಮ್ಯಾಜ್ಯದ ಮೇಲೆ ಐಟಿ ದಾಳಿ..!

Another Big IT Raid in bengaluru...!

01-02-2018

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಸಚಿವರೊಬ್ಬರ ಸಾಮ್ರಾಜ್ಯದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಗಿಬಿದ್ದಿದ್ದು, ಅವರ ವಿವಿಧ ಆಸ್ತಿಗಳ ಜತೆಗೆ, ಅವರು ಪಾಲುದಾರಿಕೆಯ ಖಾಸಗಿ ಟಿವಿ ಚಾನೆಲ್ ಮೇಲೂ ಐಟಿ ದಾಳಿ ನಡೆದಿದೆ.

ಸಿದ್ದರಾಮಯ್ಯ ಅವರಿಗೆ ಆಪ್ತರಾದ ಸಚಿವರು ಏಕಕಾಲಕ್ಕೆ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಮಧ್ಯೆ ಕೊಂಡಿಯಂತಿದ್ದು ಅವರ ಮೇಲೆ ಐಟಿ ಮುಗಿಬಿದ್ದಿರುವುದು ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ. ಸದರಿ ಸಚಿವರ ಪಾಲುದಾರಿಕೆ ಇರುವ ಖಾಸಗಿ ಟಿವಿ ಚಾನೆಲ್‍ನ ಮೇಲೆ ಬೆಳಿಗ್ಗೆ ದಾಳಿ ನಡೆದಿದ್ದು ಕೇಂದ್ರದ ಬಜೆಟ್ ಬಗ್ಗೆ ಚರ್ಚೆ ನಡೆಯುತ್ತಿದ್ದ ಕಾಲಕ್ಕೆ ಏಕಾಏಕಿ ನುಗ್ಗಿದ ಐಟಿ ಅಧಿಕಾರಿಗಳು ಟಿವಿ ವಾಹಿನಿಯ ಹದಿನೈದಕ್ಕೂ ಹೆಚ್ಚು ಸಿಬ್ಬಂದಿಗಳ ಕೈಲಿದ್ದ ಮೊಬೈಲ್‍ಗಳನ್ನು ವಶಕ್ಕೆ ಪಡೆದರು.

ತದ ನಂತರ ಅವರನ್ನು ವಿಚಾರಣೆಗೊಳಪಡಿಸಿದ ಐಟಿ ಅಧಿಕಾರಿಗಳು, ಕೇಂದ್ರದ ಬಜೆಟ್ ಕುರಿತು ಚರ್ಚೆ ನಡೆಸುತ್ತಿದ್ದ ವಾಹಿನಿಯ ಪ್ರಮುಖರೊಬ್ಬರನ್ನು ವಶಕ್ಕೆ ಪಡೆದುಕೊಂಡು ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿದರು. ಇದರಿಂದಾಗಿ ಸದರಿ ಖಾಸಗಿ ಟಿವಿ ಚಾನೆಲ್ ಎರಡು ಗಂಟೆಗೂ ಅಧಿಕ ಕಾಲ ಸ್ಥಗಿತವಾಗಿತ್ತಲ್ಲದೆ ಸುದ್ದಿಗಳು ಪ್ರಕಟಗೊಳ್ಳಲಿಲ್ಲ. ತದ ನಂತರ ಚಾನೆಲ್‍ನ ಪ್ರಸಾರಕ್ಕೆ ಅನುಮತಿ ನೀಡಲಾಯಿತಾದರೂ ಹಲವು ದಾಖಲೆಗಳನ್ನು ವಶಪಡಿಸಿಕೊಂಡ ಐಟಿ ಅಧಿಕಾರಿಗಳು ಸಂಜೆಯವರೆಗೂ ಪರಿಶೀಲಿಸಿದರು.

ಈ ಮಧ್ಯೆ ಸಚಿವರಿಗೆ ಸೇರಿದ್ದೆನ್ನಲಾದ ಹೆಸರಘಟ್ಟ ಸಮೀಪ, ಓಲ್ಡ್ ಏರ್‍ಪೋರ್ಟ್ ಬಳಿ, ಇಂದಿರಾನಗರ, ಶಿವಾನಂದ ಸರ್ಕಲ್ ಸಮೀಪದ ಕಟ್ಟಡಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು ಎಂದು ಹೇಳಲಾಗಿದೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ನಡೆದ ಐಟಿ ಧಾಳಿಯ ನಂತರ ಪ್ರಮುಖ ದಾಳಿ ಇದಾಗಿದ್ದು ಇನ್ನೂ ಹಲ ಸಚಿವರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲಿದೆ ಎಂದು ಮೂಲಗಳು ಹೇಳಿವೆ. ತಮ್ಮ ವಿರುದ್ಧ ಐಟಿ ದಾಳಿ ನಡೆದ ನಂತರ ಸಚಿವ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದರೂ ಕ್ಷೇತ್ರವಾರು ರಾಜಕೀಯದ ವಿಷಯದಲ್ಲಿ ಆಸಕ್ತಿ ತೋರಿಸುತ್ತಿಲ್ಲ.

ಪಕ್ಷದಲ್ಲಿ ಸಿಎಂ ಆಗಬೇಕು ಎಂದು ಬಯಸುತ್ತಿರುವವರ ಸಂಖ್ಯೆ ದೊಡ್ಡದಿದ್ದು ಅವರೆಲ್ಲ ಮೊದಲು ಮುಖ್ಯಮಂತ್ರಿಗಳಾಗಲಿ. ನಾನು ಇನ್ನಷ್ಟು ಕಾಲ ಕಾಯಲು ಸಿದ್ದನಿದ್ದೇನೆ ಎಂದು ಅವರು ಮೊನ್ನೆಯಷ್ಟೇ ಸುದ್ದಿಗಾರರ ಬಳಿ ಹೇಳಿದ್ದರು. ಈ ಮಧ್ಯೆಯೇ ಸಿದ್ದರಾಮಯ್ಯ ಅವರ ಆಪ್ತ ಸಚಿವರ ಮೇಲೆ ಐಟಿ ದಾಳಿ ನಡೆದಿದ್ದು ಇದೇ ರೀತಿ ಮತ್ತಷ್ಟು ದಾಳಿಗಳು ಸಧ್ಯದಲ್ಲೇ ನಡೆಯಲಿವೆ ಎಂದು ಉನ್ನತ ಮೂಲಗಳು ಹೇಳಿವೆ.


ಸಂಬಂಧಿತ ಟ್ಯಾಗ್ಗಳು

IT Raid channel ಪಾಲುದಾರಿಕೆ ಖಾಸಗಿ ಟಿವಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ