ಬಜೆಟ್: ಸಣ್ಣ ಕೈಗಾರಿಕೆಗಳ ಸಂಘ ಟೀಕೆ

Small Industries Association criticism on Budget

01-02-2018

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರದ ಬಜೆಟ್ ಬಗ್ಗೆ ಔದ್ಯಮಿಕ ಸಂಘಟನೆಗಳು ಭಿನ್ನರಾಗ ಹಾಡಿವೆ. ಎಫ್.ಕೆ.ಸಿ.ಸಿ.ಐ ಬಜೆಟ್‍ ಅನ್ನು ಸ್ವಾಗತಿಸಿದ್ದರೆ, ಸಣ್ಣ ಕೈಗಾರಿಕೆಗಳ ಸಂಘ ಬಜೆಟ್‍ನ್ನು ಟೀಕಿಸಿದೆ.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿರುವ ಬಜೆಟ್ ಭವಿಷ್ಯದಲ್ಲಿ ಭಾರತದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಿದೆ ಎಂದು ಎಫ್.ಕೆ.ಸಿ.ಸಿ.ಐ ಅಧ್ಯಕ್ಷ ರವಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ರೈತರ ಉತ್ಪನ್ನಕ್ಕೆ ವೈಜ್ಞಾನಿಕ ಬೆಲೆ ಕೊಡಲಾಗಿದೆ. 250 ಕೋಟಿ ರೂ. ಒಳಗಿನ ವಹಿವಾಟು ನಡೆಸುವ ಕಂಪೆನಿಗಳಿಗೆ ಶೇ.5ರಷ್ಟು ತೆರಿಗೆ ರಿಯಾಯ್ತಿ ನೀಡಲಾಗಿದೆ. ವೇತನ ದಾರರಿಗೆ ಸಾಕಷ್ಟು ತೆರಿಗೆ ಅನುಕೂಲ ಮಾಡಿಕೊಡಲಾಗಿದೆ. ಬಿಟ್ ಕಾಯಿನ್ ಗಳನ್ನು ನಿಷೇಧಿಸುವ ಮೂಲಕ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಉತ್ಪಾದನಾ ವಲಯಕ್ಕೆ ಸಾಕಷ್ಟು ಅನುಕೂಲಗಳಾಗಿವೆ. ಇದರಿಂದ ಕೈಗಾರಿಕಾಭಿವೃದ್ಧಿ ಹೆಚ್ಚಾಗಲಿದ್ದು, ಮುಂದಿನ ದಿನಗಳಲ್ಲಿ ದೇಶದ ಅಭಿವೃದ್ಧಿಗೆ ನೆರವಾಗಲಿದೆ ಎಂದು ತಿಳಿಸಿದರು.

ಕಾಸಿಯಾ ಕಾರ್ಯದರ್ಶಿ ಉಮಾಶಂಕರ್, ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಕಳೆದ ಹಲವಾರು ವರ್ಷಗಳಿಂದ ಕಡತದಲ್ಲೇ ಉಳಿದುಕೊಂಡಿರುವ ಸಣ್ಣ ಕೈಗಾರಿಕೆಗಳ ಕಾಯ್ದೆಗೆ ಅನುಮೋದನೆ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು  ದೂರಿದ್ದಾರೆ.ಕೇಂದ್ರ ಸರ್ಕಾರದ ಬಜೆಟ್ ವಿಫಲವಾಗಿರುವುದರಿಂದ ಸಹಜವಾಗಿಯೇ ನಮ್ಮ ನಿರೀಕ್ಷೆ ಈ ಬಾರಿಯೂ ಹುಸಿಯಾಗಿದೆ ಎಂದವರು ಹೇಳಿದ್ದಾರೆ.

ಅರುಣ್ ಜೇಟ್ಲಿ ಅವರು ಬಜೆಟ್‍ನಲ್ಲಿ ಸಣ್ಣ ಕೈಗಾರಿಕೆಗಳ ಕಲ್ಯಾಣಕ್ಕೆ ಮನಸ್ಸು ಮಾಡಿಲ್ಲ. ಮೂಲಭೂತ ಸೌಕರ್ಯ ಅಭಿವೃದ್ಧಿಗೆ 9 ಸಾವಿರ ಕೋಟಿ ರೂ.ಗಳನ್ನು ನಿಗದಿಪಡಿಸಿದ್ದರೂ ಯಾವ ವಿಭಾಗಕ್ಕೆ ಎಷ್ಟು ಹಣ ದೊರೆಯಲಿದೆ ಎಂಬ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಬ್ಯಾಂಕ್ ಬಡ್ಡಿದರ, ಆದಾಯ ತೆರಿಗೆಯಲ್ಲೂ ಯಾವುದೇ ವಿನಾಯಿತಿ ಘೋಷಣೆ ಮಾಡದಿರುವ ಕೇಂದ್ರ ಸರ್ಕಾರದ ಬಜೆಟ್ ನಿರಾಶಾದಾಯಕವಾಗಿದೆ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

FKCCI Budget ಕೇಂದ್ರ ಸರ್ಕಾರ ಅರುಣ್ ಜೇಟ್ಲಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ