ಸದಾನಂದ ಗೌಡರಿಗೆ ಪ್ರಶ್ನೆಗಳ ಸುರಿಮಳೆ

Ramalinga reddy questions to sadananda gowda

01-02-2018

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಲಾಭ ಗಿಟ್ಟಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಕೇಂದ್ರ ಸಚಿವ ಸದಾನಂದಗೌಡ ರಾಜ್ಯ ಸರ್ಕಾರವನ್ನು ದೂರುತ್ತಿದ್ದು, ಇತ್ತೀಚೆಗೆ ನಡೆದ ಕೊಲೆ ಪ್ರಕರಣಗಳಲ್ಲಿ ಬಿಜೆಪಿಯ ಕೈವಾಡವೇ ಹೆಚ್ಚು ಎಂಬುದನ್ನು ಮರೆತವರಂತೆ ಮಾತನಾಡುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಕೊಲೆಗಳು ನಡೆಯುತ್ತಿವೆ ಎಂದು ಸದಾನಂದಗೌಡರು ಆರೋಪಿಸುತ್ತಿದ್ದಾರೆ. ಆದರೆ ಬಹುತೇಕ ಕೊಲೆಗಳ ಹಿಂದೆ ಬಿಜೆಪಿ ಕೈವಾಡವೇ ಇದೆ ಎಂದು ದೂರಿದ್ದಾರೆ.

ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಕೊಲೆಗಳು ನಡೆಯುತ್ತಿವೆ ಎಂದು ಚುನಾವಣೆಗಾಗಿ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿರುವುದು ಹಾಸ್ಯಾಸ್ಪದ ಎನಿಸಿದೆ. ಬಿಜಾಪುರದ ಬಾಲಕಿಯನ್ನು ಕೊಲೆ ಮಾಡಿದ್ದು ನಿಮ್ಮ ಪಕ್ಷದ ಕಾರ್ಯಕರ್ತನಲ್ಲವೇ? ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ. ಮೂಡಿಗೆರೆಯ ಧನ್ಯಶ್ರೀ ಸಾವಿಗೆ ಕಾರಣವಾಗಿದ್ದು ನಿಮ್ಮ ಪಕ್ಷದ ಮುಖಂಡನಲ್ಲವೇ?

ಉಡುಪಿಯ ಪ್ರವೀಣ ಪೂಜಾರಿಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ನಿಮ್ಮ ಪಕ್ಷದ ನಿಷ್ಟಾವಂತ ಕಾರ್ಯಕರ್ತರಲ್ಲವೇ? ಬಂಟ್ವಾಳದ ಹರೀಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ನಿಮ್ಮ ಸಂಘ ಪರಿವಾರದ ನಾಯಕ ಬಂಧನಕ್ಕೆ ಒಳಗಾಗಲಿಲ್ಲವೇ? ಎಂದು ಸದಾನಂದ ಗೌಡರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನೆಗಳನ್ನು ಹಾಕಿದ್ದಾರೆ.

ಅಲ್ಲದೆ, ಮಂಗಳೂರಿಗೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡಿ ಕಾರ್ತಿಕ್ ರಾಜ್ ಕೊಲೆ ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದು, ನಿಮ್ಮ ಪಕ್ಷದ ಸಂಸದರಲ್ಲವೇ? ವಿನಾಯಕ ಬಾಳಿಗಾ ಸೇರಿದಂತೆ ಕೊಲೆಯಾದ ಇವರೆಲ್ಲರು ಹಿಂದುಗಳಲ್ಲವೇ? ಇವರೆಲ್ಲರನ್ನು ಹೆತ್ತವರ ಶಾಪ ನಿಮ್ಮ ಪಕ್ಷಕ್ಕೆ ತಟ್ಟುವುದಿಲ್ಲವೇ? ಬಿಜೆಪಿ ಕಾರ್ಯಕರ್ತರಿಂದ ಕೊಲೆಯಾದ ದಲಿತ, ಹಿಂದುಗಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ದೊಡ್ಡಮನಸ್ಸು ನಿಮಗಿಲ್ಲವೇ? ಎಂದು ಸರಣಿ ಪ್ರಶ್ನೆಗಳ ಮೂಲಕ ಸದಾನಂದ ಗೌಡರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ ರಾಮಲಿಂಗಾರೆಡ್ಡಿ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ