‘ಸುಳ್ಳು ಹೇಳುವವರಿಗೆ ತಕ್ಕ ಉತ್ತರ ನೀಡಬೇಕು’31-01-2018

ಬೆಂಗಳೂರು: ರಾಜಕೀಯ ಕಾರಣಕ್ಕಾಗಿ ಸಂಘ ಪರಿವಾರದ ಸಂಘಟನೆಗಳು ರಾಜ್ಯದಲ್ಲಿ ಕೋಮುದಳ್ಳುರಿ ಎಬ್ಬಿಸಿ ಸಮಾಜದ ನೆಮ್ಮದಿಗೆ ಕಿಚ್ಚು ಹಚ್ಚುವ ವ್ಯವಸ್ಥಿತ ಷಡ್ಯಂತ್ರ ರೂಪಿಸಿದ್ದು, ಇದನ್ನು ಪರಿಣಾಮಕಾರಿಯಾಗಿ ಎದುರಿಸಲು ಸಜ್ಜಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಪ್ರಚಾರ ಸಮಿತಿಗೆ ಆದೇಶ ನೀಡಿದ್ದಾರೆ.

ಖಾಸಗಿ ಹೊಟೇಲ್‍ನಲ್ಲಿಂದು ನಡೆದ ಕೆಪಿಸಿಸಿ ಪ್ರಚಾರ ಸಮಿತಿಯ ಮೊದಲ ಸಭೆಯಲ್ಲಿ ಮಾತನಾಡಿದ ಅವರು, ಆರ್.ಎಸ್.ಎಸ್. ಭಜರಂಗ ದಳ, ಶ್ರೀರಾಮಸೇನೆ ಯಂತಹ ಬಲಪಂಥಿ ಸಂಘಟನೆಗಳು ಪ್ರಬಲವಾಗಿರುವ ಜಾಗಗಳಲ್ಲಿ ಹೆಚ್ಚಾಗಿ ಕೋಮು ಗಲಭೆ ನಡೆಯಲಿದೆ. ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದರು. ಪರಿವಾರದ ಅಂಗ ಸಂಘಟನೆಗಳ ಸುಳ್ಳು ಪ್ರಚಾರಗಳಿಗೆ ಪಕ್ಷದ ಮುಖಂಡರು ತಕ್ಕ ಪ್ರತ್ಯುತ್ತರ ನೀಡಬೇಕು. ಕೋಮು ಗಲಭೆಗಳಿಂದಾಗಿ ರಾಜ್ಯದಲ್ಲಿ ಉಂಟಾಗುವ ಜೀವ ಹಾನಿ ತಪ್ಪಿಸಬೇಕು ಎಂದು ಹೇಳಿದರು.

ಪ್ರತಿ ಘಟನೆಯನ್ನೂ ಬಿಜೆಪಿ ರಾಜಕೀಕರಣಗೊಳಿಸಿ ತನ್ನ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡಿದೆ. ಇದರಿಂದ ಸಮಾಜದ ಶಾಂತಿ ಮೇಲೆ ಅಡ್ಡ ಪರಿಣಾಮಗಳಾಗುತ್ತಿದ್ದು, ಅವರಿಗೆ ಸಮಾಜದ ಹಿತ ಮುಖ್ಯ ಅಲ್ಲ, ರಾಜಕಾರಣ ಮುಖ್ಯ. ಆದರೆ ಕಾಂಗ್ರೆಸ್ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಮೂಲಕ ಸಮಾಜದ ಹಿತರಕ್ಷಣೆಗೆ ಕೆಲಸ ಮಾಡುತ್ತಿದೆ ಎಂದರು. ಜನರಿಗೆ ನಮ್ಮ ಕೆಲಸಗಳನ್ನು ಸರಿಯಾಗಿ ಮನವರಿಕೆ ಮಾಡಿಕೊಡುವ ಕೆಲಸವನ್ನು ಪ್ರಚಾರ ಸಮಿತಿ ಪರಿಣಾಮಕಾರಿಯಾಗಿ ಮಾಡಬೇಕು, ಶೋಭಾಕರಂದ್ಲಾಜೆ, ಅನಂತ್‍ಕುಮಾರ್ ಹೆಗಡೆಯವರಂತಹ ಸುಳ್ಳು ಹೇಳುವವರಿಗೆ ತಕ್ಕ ಉತ್ತರ ನೀಡಬೇಕೆಂದು ಹೇಳಿದರು.

ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಬದಲಾದ ಕಾಲಮಾನದಲ್ಲಿ ಪ್ರಚಾರ ಮಾಧ್ಯಮಗಳು ಪರಿವರ್ತನೆಗೊಂಡಿವೆ. ಹಳೇ ತಲೆಮಾರು, ಹೊಸ ತಲೆಮಾರು ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಹೊಸ ತಲೆಮಾರು ಸೋಶಿಯಲ್ ಮೀಡಿಯಾ ಮತ್ತು ಅಂತರ್ಜಾಲ ಮಾಧ್ಯಮದಲ್ಲಿ ಪ್ರಭಾವಿತವಾಗಿದ್ದರೆ, ಹಳೆ ತಲೆಮಾರು ಬಹಿರಂಗ ಸಭೆಗಳು, ಚರ್ಚಾ ಗೋಷ್ಠಿಗಳಿಗೆ ಸೀಮಿತಗೊಂಡಿವೆ. ನಾವು ಈ ಎರಡೂ ತಲೆಮಾರುಗಳನ್ನು ಗಮನದಲ್ಲಿಟ್ಟುಕೊಂಡು ತಂತ್ರಗಾರಿಕೆ ರೂಪಿಸಬೇಕು ಎಂದರು.

ಕಳೆದ ಐದು ವರ್ಷಗಳಲ್ಲಿ ನಮ್ಮ ಸರ್ಕಾರ ಮಾಡಿದ ಸಾಧನೆಯನ್ನು ಪ್ರಚಾರ ಮಾಡಿದರೆ ಸಾಕು ಮುಂದಿನ ಅವಧಿಗೆ ನಾವು ಮರಳಿ ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿ ಮತ್ತು ಜೆಡಿಎಸ್‍ನ ಅಪಪ್ರಚಾರಗಳಿಗೆ ಸರಿಯಾದ ಉತ್ತರ ಕೊಡಬೇಕು. ಇದು ನನ್ನೊಬ್ಬನಿಂದ ಸಾಧ್ಯವಾಗುವುದಿಲ್ಲ. ಇಡೀ ಕಾಂಗ್ರೆಸ್‍ ಕೆಲಸ ಮಾಡಬೇಕು. ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಬದಿಗಿಟ್ಟು ಚುನಾವಣೆಯ ಯುದ್ಧ ಕಾಲದಲ್ಲಿ ಒಟ್ಟಾಗಿ ಕೆಲಸ ಮಾಡಬೇಕು ಎಂದರು.


ಸಂಬಂಧಿತ ಟ್ಯಾಗ್ಗಳು

Siddaramaiah KPCC ಅಂತರ್ಜಾಲ ಸೋಶಿಯಲ್ ಮೀಡಿಯಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ