ಮದುವೆ, ಹೋಟೆಲ್ಲುಗಳಲ್ಲಿ ಉಳಿದ ಆಹಾರವನ್ನು ಎಸೆದೆರೆ ಸರ್ಕಾರದಿಂದ ದಂಡ ಹಾಗೂ ಶಿಕ್ಷೆ

Kannada News

25-04-2017

ಬೆಂಗಳೂರು : ಮದುವೆ, ಮತ್ತಿತರ ಸಭೆ, ಸಮಾರಂಭಗಳು ಹಾಗೂ ಹೋಟೆಲ್ಲುಗಳಲ್ಲಿ ಉಳಿದ ಆಹಾರವನ್ನು ಬೀದಿಗೆ ಎಸೆದು ವ್ಯರ್ಥ ಮಾಡಿದರೆ ದಂಡ ಹಾಗೂ ಶಿಕ್ಷೆ ವಿಧಿಸುವ ಕಾನೂನು ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಳಿದ ಆಹಾರವನ್ನು ಎಸೆಯುವವರು ಇನ್ನು ಮುಂದೆ ಕಾನೂನು ಪ್ರಕಾರ ದಂಡನೆಗೆ ಅರ್ಹರು. ತಿನ್ನುವ ಹಕ್ಕಿದೆ. ಆದರೆ ಎಸೆಯುವ ಹಕ್ಕು ಯಾರಿಗೂ ಇಲ್ಲ. ಆಹಾರ ಪದಾರ್ಥ ವ್ಯರ್ಥ ಮಾಡುವುದು ಸರಿಯಲ್ಲ ಎಂದರು.
ಮದುವೆ ಮತ್ತಿತರ ಸಮಾರಂಭಗಳಲ್ಲಿ ಮತ್ತು ಹೋಟೆಲ್ಲುಗಳಲ್ಲಿ ಆಹಾರ ಉಳಿದಾಗ ಅದನ್ನು ಎಸೆಯಲಾಗುತ್ತಿದೆ. ಇನ್ನು ಮುಂದೆ ಪ್ರತಿಯೊಂದು ಹೋಟೆಲ್ಲು ಉಳಿದ ಆಹಾರವನ್ನು ಒಂದು ಸರ್ಕಾರೇತರ ಸಂಸ್ಥೆಗೆ ನೀಡಬೇಕು.ಹಾಗೆಯೇ ಮದುವೆ ಮತ್ತಿತರ ಸಮಾರಂಭಗಳಲ್ಲಿ ಉಳಿಯುವ ಆಹಾರವನ್ನು  ಸರ್ಕಾರೇತರ ಸಂಸ್ಥೆಗಳಿಗೆ ನೀಡಬೇಕು ಎಂದರು.
ಮದುವೆ ಮತ್ತಿತರ ಸಮಾರಂಭಗಳು ನಡೆಯುವ ಹಾಲ್‍ಗಳಿಗೆ ನಿರ್ದಿಷ್ಟ ಸಂಖ್ಯೆಯ ಸರ್ಕಾರೇತರ ಸಂಸ್ಥೆಗಳನ್ನು ನಿಗದಿಪಡಿಸಲಾಗುವುದು ಮತ್ತು ಪ್ರತಿ ಹೋಟೆಲ್ಲಿಗೆ ಒಂದರಂತೆ ಸರ್ಕಾರೇತರ ಸಂಸ್ಥೆಗಳನ್ನು ಜತೆ ಮಾಡಲಾಗುವುದು.ಹೀಗಾಗಿ ಒಂದು ವೇಳೆ ಆಹಾರ ಉಳಿದರೆ ಅದನ್ನು ಈ ಸರ್ಕಾರೇತರ ಸಂಸ್ಥೆಗಳಿಗೆ ಒದಗಿಸಬೇಕು.
ಇಂತಹ ಆಹಾರವನ್ನು ಸದರಿ ಸರ್ಕಾರೇತರ ಸಂಸ್ಥೆಗಳು ಹಸಿದವರಿಗೆ ನೀಡುವ ಕೆಲಸ ಮಾಡುತ್ತವೆ.ಜೂನ್-ಜುಲೈ ವೇಳೆಗೆ ಈ ಕೆಲಸ ಮಾಡುವುದಾಗಿ ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಇನ್ನು ಮುಂದೆ ರಾಜ್ಯದ ಯಾವುದೇ ಹೋಟೆಲ್ಲುಗಳಲ್ಲಿ ಗ್ರಾಹಕರಿಗೆ ಒದಗಿಸುವ ಸೇವೆಗೆ ಪ್ರತಿಯಾಗಿ ಸೇವಾ ತೆರಿಗೆ ವಿಧಿಸುವಂತಿಲ್ಲ. ಸರ್ವೀಸ್ ಟ್ಯಾಕ್ಸ್ ನೀಡದಿದ್ದರೆ ಪ್ರವೇಶವಿಲ್ಲ ಎನ್ನುವಂತಿಲ್ಲ. ಒಂದು ವೇಳೆ ಹಾಗೇನಾದರೂ ಸರ್ವೀಸ್ ಟ್ಯಾಕ್ಸ್ ವಿಧಿಸಿದರೆ, ಸರ್ವೀಸ್ ಟ್ಯಾಕ್ಸ್ ಕೊಡಲು ನಿರಾಕರಿಸಿದವರಿಗೆ ಸೇವೆ ನೀಡಲು ತಡ ಮಾಡಿದರೆ ಶಿಕ್ಷೆ ನಿಶ್ಚಿತ ಎಂದು ಹೇಳಿದರು.
ಒಂದು ವೇಳೆ ಗ್ರಾಹಕರಿಗೆ ಏನಾದರೂ ತೊಂದರೆಯಾದರೆ ಅವರು ಜಿಲ್ಲಾ ಗ್ರಾಹಕ ನ್ಯಾಯಾಲಯಗಳಿಗೆ ದೂರು ನೀಡಬಹುದು.ಕೇಂದ್ರ ಸರ್ಕಾರ ಕೂಡಾ ಈ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದೆ.ಅದಕ್ಕೆ ಪೂರಕವಾಗಿ ನಾವು ಕೂಡಾ ಕಾಯ್ದೆಯನ್ನು ರೂಪಿಸುತ್ತೇವೆ ಎಂದು ಹೇಳಿದರು.
ಸರ್ಕಾರ ಈ ಸಂಬಂಧ ಅಧಿಕೃತ ಆದೇಶ ಹೊರಡಿಸುವ ಮುನ್ನ ಹೋಟೆಲ್ ಮಾಲೀಕರ ಸಂಘಟನೆಗಳ ಜತೆ ಮಾತುಕತೆ ನಡೆಸಲಾಗುವುದು. ಈ ಕುರಿತು ಅವರಿಗೂ ಸೂಕ್ತ ಮಾಹಿತಿ ನೀಡಿ ಚರ್ಚಿಸಿದ ಬಳಿಕ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಇನ್ನು ಮುಂದೆ ಅಡುಗೆ ಅನಿಲ ಹೊಂದಿದ್ದೂ ಒಂದು ಲೀಟರ್ ಸೀಮೆಣ್ಣೆ ಪಡೆಯುವವರಿಗಾಗಿ ಪುನರ್ಬೆಳಕು ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ. ಸೀಮೆಣ್ಣೆ ಬೇಡ ಎಂದು ಹೇಳಿದವರಿಗೆ ಮುನ್ನೂರು ರೂ ಬೆಲೆಯ ಎರಡು ರೀಚಾರ್ಜ್‍ಬಲ್ ಎಲ್‍ಇಡಿ ಬಲ್ಬ್‍ಗಳನ್ನು ನೀಡಲಾಗುವುದು ಎಂದರು.
ಅಡುಗೆ ಅನಿಲ ಹೊಂದಿದವರಿಗೆ ಒಂದು ಲೀಟರ್ ಸೀಮೆಣ್ಣೆ ಕೊಡಬೇಕು ಎಂದು ನಿರ್ಧಾರ ಕೈಗೊಂಡ ನಂತರ ಎರಡು ಲಕ್ಷ ಮಂದಿ ಸೀಮೆಣ್ಣೆ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಸಂಖ್ಯೆ ಐದು ಲಕ್ಷಕ್ಕೇರಬಹುದು ಎಂಬ ನಿರೀಕ್ಷೆ ಇದೆ. ಈ ನಡುವೆಯೇ ರಾಜ್ಯವನ್ನು ಸೀಮೆಣ್ಣೆ ಮುಕ್ತ ರಾಜ್ಯವನ್ನಾಗಿ ಮಾಡಲು ಸರ್ಕಾರ ಬಯಸಿದ್ದು ಪುನರ್ಬೆಳಕು ಯೋಜನೆ ಯಶಸ್ಸು ಕಂಡರೆ ಅದು ಸಾಧ್ಯವಾಗಲಿದೆ. ಸಧ್ಯಕ್ಕೆ ಕೇಂದ್ರದಿಂದ ಮೂವತ್ತೇಳು ಸಾವಿರ ಕಿಲೋ ಲೀಟರುಗಳಷ್ಟು ಸೀಮೆಣ್ಣೆ ಬರುತ್ತಿದೆ ಎಂದು ಅವರು ವಿವರಿಸಿದರು.
ಇನ್ನು ರಾಜ್ಯಾದ್ಯಂತ ಬಿಪಿಎಲ್ ಕಾರ್ಡು ಪಡೆಯುವವರು ಸ್ವಯಂಘೋಷಿತವಾಗಿ ನಮಗೆ ವಾರ್ಷಿಕ 1.20 ಲಕ್ಷ ರೂ ಆದಾಯವಿದೆ ಎಂದು ಹೇಳಿದರೆ ಸಾಕು.ಪ್ರಮಾಣ ಪತ್ರ ನೀಡುವ ಅಗತ್ಯವಿಲ್ಲ.ಯಾಕೆಂದರೆ ಪ್ರಮಾಣಪತ್ರ ನೀಡಿದವರಿಗೂ ತಾಂತ್ರಿಕ ಕಾರಣಗಳಿಂದ ಕಾರ್ಡು ವಿತರಿಸಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ಫಲಾನುಭವಿಯ ಮಾತನ್ನೇ ನಂಬಿ ಬಿಪಿಎಲ್ ಕಾರ್ಡು ನೀಡಲು ತೀರ್ಮಾನಿಸಲಾಗಿದೆ.ಅದೇ ರೀತಿ ಒಂದು ವೇಳೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಆದಾಯವಿದ್ದರೆ ಕಾರ್ಡನ್ನು ರದ್ದು ಮಾಡುತ್ತೇವೆ.ಪಡೆದ ಆಹಾರ ಪದಾರ್ಥಗಳ ಮೌಲ್ಯವನ್ನು ವಸೂಲು ಮಾಡುತ್ತೇವೆ ಎಂದು ಅವರು ಹೇಳಿದರು.
ಮೊದಲು ಕಾರ್ಡು ಕೊಡುತ್ತೇವೆ. ನಂತರ ಪರಿಶೀಲನೆ ನಡೆಸುತ್ತೇವೆ. ಆ ಮೂಲಕ ಶೇಕಡಾ ತೊಂಭತ್ತರಷ್ಟು ಅರ್ಹ ಫಲಾನುಭವಿಗಳಿಗೆ ತೊಂದರೆ ಇಲ್ಲದಂತೆ ನೋಡಿಕೊಳ್ಳುತ್ತೇವೆ ಎಂದು ಅವರು ಸ್ಪಷ್ಟ ಪಡಿಸಿದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ