ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆಗೆ ಸಿದ್ಧತೆ...!

state government planing to bumper gift to government employees

31-01-2018

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಲು ಸರ್ಕಾರ ಮುಂದಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ಆರನೇ ವೇತನ ಆಯೋಗ ನೌಕರರ ವೇತನವನ್ನು ಶೇಕಡಾ 30 ರಷ್ಟು ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿದೆ. ವೇತನ ಆಯೋಗದ ಶಿಫಾರಸಿನ ಹಿನ್ನೆಲೆಯಲ್ಲಿಯೇ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ಬಜೆಟ್ ಅಧಿವೇಶನದಲ್ಲಿ ವೇತನ ಹೆಚ್ಚಳವನ್ನು ಘೋಷಿಸುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಆರನೇ ವೇತನೇ ಆಯೋಗದ ಅಧ್ಯಕ್ಷ ಶ್ರೀನಿವಾಸ ಮೂರ್ತಿ, ನೌಕರರ ವೇತನ ಹೆಚ್ಚಳ ಸಂಬಂಧ ಸರ್ಕಾರಕ್ಕೆ ಶಿಫಾರಸು ಮಾಡಿದ್ದು ಅದರನ್ವಯ ಸರ್ಕಾರಿ ನೌಕರರ ಕನಿಷ್ಟ ವೇತನ ಹದಿನೇಳು ಸಾವಿರದಷ್ಟಾಗಲಿದ್ದರೆ, ಗರಿಷ್ಟ ವೇತನ 1,50,600 ರೂಗಳಷ್ಟಿರಲಿದೆ. ಇದೇ ರೀತಿ ಕನಿಷ್ಟ ಪಿಂಚಣಿ ಪ್ರಮಾಣ 8500 ರೂಗಳಷ್ಟಿರಲಿದ್ದು, ಗರಿಷ್ಟ 75300 ರೂಗಳಷ್ಟಾಗಲಿದೆ. ಅದೇ ರೀತಿ ಕುಟುಂಬ ಪಿಂಚಣಿಯ ಗರಿಷ್ಟ ಮಿತಿ 45,180 ರೂಗಳಷ್ಟಿರಲಿದೆ.

ರಾಜ್ಯದಲ್ಲಿ ಒಟ್ಟು 5.20 ಲಕ್ಷ ಸರ್ಕಾರಿ ನೌಕರರಿದ್ದು ಅದೇ ಕಾಲಕ್ಕೆ 5.73 73 ಲಕ್ಷ ಮಂದಿ ಪಿಂಚಣಿದಾರರಿದ್ದಾರೆ. 2017ರ ಜುಲೈ ಒಂದರಿಂದ ಪೂರ್ವಾನ್ವಯವಾಗುವಂತೆ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡುವಂತೆ ಶಿಫಾರಸು ಮಾಡಲಾಗಿದೆ.

ಈ ಮಧ್ಯೆ ಸರ್ಕಾರಿ ನೌಕರರು, ಪಿಂಚಣಿದಾರರ ವೇತನ, ಪಿಂಚಣಿ ಪ್ರಮಾಣ ಹೆಚ್ಚಳದಿಂದ ಸರ್ಕಾರದ ಬೊಕ್ಕಸದ ಮೇಲೆ ಪ್ರತಿ ವರ್ಷ 10,508ಕೋಟಿ ರೂ ಹೊರೆಯಾಗಲಿದೆ. ವೇತನ ಹೆಚ್ಚಳದ ಶಿಫಾರಸು ಅನುದಾನಿತ ಶಿಕ್ಷಣ ಸಂಸ್ಥೆಗಳ, ಸ್ಥಳೀಯ ಸಂಸ್ಥೆಗಳ, ಪದವಿ ಶಿಕ್ಷಣ ವಿದ್ಯಾಲಯಗಳ, ವಿವಿಗಳ ನೌಕರರಿಗೂ ಅನ್ವಯವಾಗಲಿದೆ.

ಆರನೇ ವೇತನ ಆಯೋಗದ ಶಿಫಾರಸು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,ವೇತನ ಆಯೋಗ ಮೊದಲ ಕಂತಿನ ವರದಿ ನೀಡಿದ್ದು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ವೇತನ ಹೆಚ್ಚಳ ಘೋಷಣೆ ಮಾಡುವುದಾಗಿ ತಿಳಿಸಿದರು.

ಇಷ್ಟಾದರೂ ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲಿ ವೇತನ ತಾರತಮ್ಯ ಇದೆ. ಹೀಗಾಗಿ ಎರಡನೇ ಕಂತಿನ ವರದಿ ನೀಡುವಂತೆ ಸೂಚಿಸಿ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ನಾವೇ ಗೆದ್ದು ಅಧಿಕಾರ ಹಿಡಿಯುತ್ತೇವೆ.ಆಗ ತಾರತಮ್ಯಕ್ಕೊಳಗಾದ ನೌಕರರ ವೇತನ ಹೆಚ್ಚಳ ಕಾರ್ಯ ಮಾಡುವುದಾಗಿ ಅವರು ಹೇಳಿದರು.

ಈ ಮಧ್ಯೆ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಅರವತ್ತಕ್ಕೆ ನಿಗದಿಗೊಳಿಸಿರುವ ಆರನೇ ವೇತನ ಆಯೋಗ ಸ್ವಯಂ ನಿವೃತ್ತಿ ಪಡೆಯಲು ಇದುವರೆಗೂ ಇದ್ದ ಹದಿನೈದು ವರ್ಷಗಳ ಗಡುವನ್ನು ಹತ್ತು ವರ್ಷಕ್ಕೆ ಇಳಿಸಿ ಶಿಫಾರಸು ಮಾಡಿದೆ. ಹಾಗೂ ಪೂರ್ಣ ಪ್ರಮಾಣದ ಪಿಂಚಣಿಯನ್ನು ಪಡೆಯಲು ಇದುವರೆಗೂ ಇದ್ದ ಮೂವತ್ಮೂರು ವರ್ಷಗಳ ಗಡುವನ್ನು ಮೂವತ್ತು ವರ್ಷಗಳಿಗೆ ಇಳಿಸಿದೆ.

ಮನೆ ಬಾಡಿಗೆ ಭತ್ಯೆಯನ್ನು ಇದುವರೆಗೆ ಮೂಲವೇತನದ ಪ್ರಸ್ತುತ ದರಗಳಾದ ಶೇಕಡಾ 30, ಶೇಕಡಾ 20 ಹಾಗೂ ಶೇಕಡಾ 10 ರ ಬದಲು ಅನುಕ್ರಮವಾಗಿ ಶೇಕಡಾ 24, 16, 8 ರಂತೆ ಪರಿಷ್ಟು ನಿಗದಿಮಾಡುವಂತೆ ಶಿಫಾರಸು ಮಾಡಲಾಗಿದೆ.

ಮರಣ ಮತ್ತು ನಿವೃತ್ತಿ ಉಪದಾನದ ಗರಿಷ್ಟ ಮಿತಿಯನ್ನು ಹತ್ತು ಲಕ್ಷ ರೂಗಳಿಂದ ಇಪ್ಪತ್ತು ಲಕ್ಷ ರೂಗಳಿಗೆ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ. ಹಾಗೆಯೇ ಕುಟುಂಬ ಪಿಂಚಣಿಯ ಸೌಲಭ್ಯವನ್ನು ನೂತನ ಪಿಂಚಣಿ ಯೋಜನೆಯಡಿ ಮೃತ ನೌಕರರ ಅವಲಂಬಿತರಿಗೂ ವಿಸ್ತರಿಸಲು ಪ್ರಸ್ತಾಪಿಸಿದೆ.

ಎಂಭತ್ತು ವರ್ಷ ದಾಟಿದ ಎಲ್ಲ ಪಿಂಚಣಿದಾರರಗೂ ಹೆಚ್ಚುವರಿ ಪಿಂಚಣಿಯ ಸಂದಾಯವನ್ನು ಶಿಫಾರಸು ಮಾಡಲಾಗಿದ್ದು, ಎಂಭತ್ತರಿಂದ ಎಂಬತ್ತೈದು ವರ್ಷದೊಳಗಿನ ಪಿಂಚಣಿದಾರರಿಗೆ ಶೇಕಡಾ 20 ರಷ್ಟು, ಎಂಭತ್ತೈದರಿಂದ ತೊಂಭತ್ತು ವರ್ಷದೊಳಗಿನವರಿಗೆ ಶೇಕಡಾ 30 ರಷ್ಟು ತೊಂಭತ್ತರಿಂದ ತೊಂಭತ್ತೈದನೇ ವರ್ಷದೊಳಗಿನವರಿಗೆ ಶೇಕಡಾ 40 ರಷ್ಟು ಹಾಗೂ ತೊಂಭತ್ತೈದರಿಂದ ನೂರು ವರ್ಷದೊಳಗಿನವರಿಗೆ ಶೇಕಡಾ 50 ರಷ್ಟು ಮತ್ತು ನೂರು ವರ್ಷ ಮೇಲ್ಪಟ್ಟವರಿಗೆ ಶೇಕಡಾ ನೂರರಷ್ಟು ಹೆಚ್ಚುವರಿ ಪಿಂಚಣಿ ಸಂದಾಯವಾಗಲಿದೆ.

ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರಿಗೆ ಜ್ಯೋತಿ ಸಂಜೀವಿನಿ ಯೋಜನೆಯಲ್ಲಿರುವಂತೆ ಸೂಚಿತ ಆಸ್ಪತ್ರೆಗಳಲ್ಲಿ ನಗದುರಹಿತ, ಮರುಪಾವತಿ ಆಧಾರದ ಮೇಲೆ ಆರೋಗ್ಯ ಸೇವೆ ವಿಸ್ತರಿಸಲು ನಿರ್ಧರಿಸಲಾಗಿದೆ. ನಗರ ಪರಿಹಾರ ಭತ್ಯೆ, ಪ್ರಯಾಣ ಭತ್ಯೆ, ಸಮವಸ್ತ್ರ ಭತ್ಯೆ ಮತ್ತು ವಿಶೇಷ ಭತ್ಯೆಗಳ ದರಗಳಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಮಾಡಲಾಗಿದೆ.

ವಿಶೇಷ ಚೇತನ ನೌಕರರಿಗೆ ಯಾಂತ್ರಿಕೃತ ಮತ್ತು ಮೋಟಾರು ಚಾಲಿತ ವಾಹನಗಳನ್ನು ಖರೀದಿಸಲು ಪ್ರಸ್ತುತ ನೀಡುತ್ತಿರುವ ಸಹಾಯಧನದ ಪ್ರಮಾಣವನ್ನು ಇಪ್ಪತ್ತೈದು ಸಾವಿರ ರೂಪಾಯಿಗಳಿಂದ ನಲವತ್ತು ಸಾವಿರ ರೂಪಾಯಿಗಳಿಗೆ ವಿಸ್ತರಿಸಲು ಶಿಫಾರಸು ಮಾಡಿದೆ.

ಅದೇ ರೀತಿ ನೌಕರರ ಅಂಗವಿಕಲ ಮಕ್ಕಳಿಗೆ ನೀಡಲಾಗುತ್ತಿದ್ದ ತಲಾ ಐದೂರು ರೂಗಳ ಶೈಕ್ಷಣಿಕ ಭತ್ಯೆಯನ್ನು ಒಂದು ಸಾವಿರ ರೂಗಳಿಗೆ ಹೆಚ್ಚಳ ಮಾಡಲು ಪ್ರಸ್ತಾಪಿಸಲಾಗಿದೆ. ಈ ಮಧ್ಯೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಂಜೂರಾಗಿರುವ 7.73 ಲಕ್ಷ ಹುದ್ದೆಗಳಿಗೆ ಪ್ರತಿಯಾಗಿ 5.20 ನೌಕರರು ಸೇವೆಯಲ್ಲಿದ್ದು ಉಳಿದಂತೆ ಶೇಕಡಾ 33 ರಷ್ಟು ಹುದ್ದೆಗಳು ಖಾಲಿ ಇರುವುದನ್ನು ಆರನೇ ವೇತನ ಆಯೋಗ ವಿಶೇಷವಾಗಿ ಗಮನಿಸಿದೆ. 1956 ರಲ್ಲಿ ರಾಜ್ಯಗಳ ಪುನರ್‍ವಿಂಗಡಣೆಯಾದ ನಂತರದ ಅವಧಿಯಲ್ಲಿ ಇದು ಸೇರಿದಂತೆ ಒಟ್ಟು ಹನ್ನೊಂದು ಬಾರಿ ನೌಕರರ ವೇತನ ಪರಿಷ್ಕರಣೆಯಾಗಿದೆ.


ಸಂಬಂಧಿತ ಟ್ಯಾಗ್ಗಳು

siddaramaiah pay commission ಬಜೆಟ್ ಅಧಿವೇಶನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ