ಮನೆ ಮುಂದಿನ ಕಾರಿಗೆ ಪಾರ್ಕಿಂಗ್ ಫೀ…

soon free parking ends in residential areas : Delhi

31-01-2018

ನಿಮ್ಮನೇಲಿ ಎಷ್ಟು ಕಾರುಗಳಿವೆ? ಒಂದು ನಂದು, ಇನ್ನೊಂದು ನನ್ನ ಹೆಂಡತಿದು, ಮತ್ತೊಂದು ನನ್ನ ಮಗ-ಸೊಸೆಗೆ ಸೇರಿದ್ದು ಒಟ್ಟು ಮೂರೇ ಮೂರು ಮಾತ್ರ ಅಂದ್ರಾ? ಒಳ್ಳೇದಾಯ್ತು ಬಿಡಿ, ಅಂದಹಾಗೆ ಈ ಎಲ್ಲ ಕಾರುಗಳಿಗೂ ಪಾರ್ಕಿಂಗ್ ವ್ಯವಸ್ಥೆ ಇದೆ ತಾನೆ? ಪಾರ್ಕಿಂಗಿಗೇನೂ ಪ್ರಾಬ್ಲಮ್ ಇಲ್ಲ ಬಿಡಿ, ಎರಡು ಕಾರು, ಮೂರು ಟೂ ವೀಲರ್ ಗಳನ್ನು ನಮ್ಮ ಮನೆ ಮುಂದೆ ನಿಲ್ಲಿಸಿಕೊಳ್ತೀವಿ, ನಮ್ಮ ಮತ್ತೊಂದು ಕಾರನ್ನು ಪಕ್ಕದ ಮನೆ ಮುಂದೆ ನಿಲ್ಲಿಸ್ತೀವಿ, ಅವರ ಹತ್ತಿರ ಕಾರಿಲ್ಲ ನೋಡಿ ಅದಕ್ಕೆ.  

ಸ್ವಾಮಿ, ಮೂರು ಕಾರಿನ ಸಾಹುಕಾರರೇ ಇಲ್ಲಿ ಕೇಳಿ ಸ್ವಲ್ಪ. ಇರೋರು ನಾಲ್ಕು ಜನಕ್ಕೆ ಮೂರು ಕಾರುಗಳನ್ನು ಇಟ್ಟುಕೊಂಡಿರೊ ನಿಮಗೆ ಈ ಸುದ್ದಿ ಅಷ್ಟೇನೂ ಹಿತವಾಗಿಲ್ಲ. ಇನ್ನುಮುಂದೆ ಮನೆ ಮುಂದೆ ನಿಲ್ಲಿಸುವ ಅಥವ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸುವ ಕಾರುಗಳಿಗೆ ಪ್ರತಿ ತಿಂಗಳೂ ಪಾರ್ಕಿಂಗ್ ಶುಲ್ಕ ನೀಡಬೇಕು. ಯಾವ ಯಾವ ಏರಿಯಾದಲ್ಲಿ ಎಷ್ಟು ಶುಲ್ಕ ಕೊಡಬೇಕು ಅನ್ನೋದನ್ನು ಪಾರ್ಕಿಂಗ್ ಶುಲ್ಕ ನಿಗದಿ ಸಮಿತಿ ನಿರ್ಧಾರ ಮಾಡುತ್ತೆ. ಪ್ರತಿ ವರ್ಷವೂ ಪಾರ್ಕಿಂಗ್ ಶುಲ್ಕ ಏರಿಕೆ ಮಾಡಲಾಗುತ್ತೆ. ಅರ್ಥ ಆಯ್ತೇ? ಅಯ್ಯೋ…ಮೂರು ಕಾರಿರೋ ನೀವೇ ಇಷ್ಟು ಗಾಬರಿ ಆದರೆ ಹೇಗೆ? ಸುಧಾರಿಸಿಕೊಳ್ಳಿ, ಇದು ಸದ್ಯದಲ್ಲೇ ದೆಹಲಿಯಲ್ಲಿ ಜಾರಿಗೆ ಬರುತ್ತಿರೋ ಹೊಸ ಪಾರ್ಕಿಂಗ್ ನಿಯಮ. ಇದೇ ಮಾರ್ಚ್‌ನಿಂದ ದೆಹಲಿಯಲ್ಲಿ ಜಾರಿಗೆ ಬರಲಿರೋ ಈ ನಿಯಮಕ್ಕೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಸಹಿಹಾಕಿದ್ದಾರೆ.  

ದೆಹಲಿಯಲ್ಲಿ ಒಂದು ಕೋಟಿಗೂ ಹೆಚ್ಚು ನೋಂದಾಯಿತ ವಾಹನಗಳಿವೆ. ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ ನೀಡಿ, ಕುಲಗೆಟ್ಟುಹೋಗಿರುವ ದೆಹಲಿಯ ವಾತಾವರಣವನ್ನು ಸಾಮಾನ್ಯ ಸ್ಥಿತಿಗೆ ತರುವ ಪ್ರಮುಖ ಉದ್ದೇಶದಿಂದ ಈ ರೀತಿ ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದೆಯಂತೆ. ಪಾರ್ಕಿಂಗ್ ಶುಲ್ಕ ಹೇರುವ ಮೂಲಕ ನಗರ ಪಾಲಿಕೆಗಳ ಆದಾಯ ಹೆಚ್ಚಿಸುವುದರ ಜೊತೆಗೆ ಕಾರುಗಳ ಖರೀದಿಯನ್ನೂ ನಿಯಂತ್ರಿಸುವ ಚಿಂತನೆ ಇಲ್ಲಿದೆ ಎಂದು ಹೇಳಲಾಗಿದೆ.

ದೆಹಲಿ ಸರ್ಕಾರದ ಈ ಪ್ರಸ್ತಾಪಕ್ಕೆ ಹಲವು ಬಡಾವಣೆಗಳ ನಿವಾಸಿಗಳಿಂದ ಪ್ರತಿರೋಧ ಕೇಳಿಬಂದಿದೆ. ಒಂದು ಮನೆಯವರು ಕನಿಷ್ಟ ಒಂದು ಕಾರನ್ನಾದರೂ ಉಚಿತವಾಗಿ ಪಾರ್ಕಿಂಗ್ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂಬ ನಾಗರಿಕರ ವಾದವನ್ನು ಸರ್ಕಾರ ಒಪ್ಪಿಲ್ಲ. ಒಂದುವೇಳೆ, ವಸತಿ ಪ್ರದೇಶಗಳಲ್ಲೂ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವ ಈ ಹೊಸ ನಿಯಮ ಜಾರಿಗೆ ಬಂದಲ್ಲಿ ದೆಹಲಿ, ಅಂಥದ್ದೊಂದು ನಿಯಮ ಜಾರಿಗೆ ತಂದ ದೇಶದ ಮೊದಲ ನಗರವಾಗಲಿದೆ.

ಕೆಲವು ವರ್ಷಗಳ ಹಿಂದೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ಇದೇ ರೀತಿಯ ಒಂದು ನಿಯಮ ಜಾರಿಗೆ ತರುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆದರೆ, ಅದಕ್ಕೆ ಪ್ರತಿರೋಧ ವ್ಯಕ್ತವಾದ ನಂತರ ಹಾಗೇ ಕೈಬಿಡಲಾಗಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ, ದೆಹಲಿಯಲ್ಲಿ ಜಾರಿಗೆ ಬಂದ ನಂತರ ಇಲ್ಲೂ ಅಂಥ ನಿಯಮ ಜಾರಿಗೆ ತರುವ ಸಾಧ್ಯತೆಗಳೇ ಹೆಚ್ಚಾಗಿವೆ.


ಸಂಬಂಧಿತ ಟ್ಯಾಗ್ಗಳು

car parking Delhi ಪಾರ್ಕಿಂಗ್ ಲೆಫ್ಟಿನೆಂಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ