ಒಂದು ವಿಶೇಷ ಕೊಡವ ಹಾಕಿ ಹಬ್ಬ

Kannada News

25-04-2017

ಕೊಡಗು ಅಂತ ನೆನದಾಕ್ಷಣ ನೆನಪಿಗೆ ಬರುವುದು ಸುಂದರ ವನಸಿರಿ ಮತ್ತು ವೀರ ಕೊಡವರು. ಆದರೆ ಈಗ ಅದಕ್ಕೆ ಸೇರಿಕೊಂಡ ಹಿರಿಮೆ ಹಾಕಿ ಹಬ್ಬ. ಕೊಡವ ಸಮುದಾಯದ ವಿವಿಧ ವಂಶಗಳ ನಡುವೆ ಮೈ ನವಿರೇಳಿಸುವ ಈ ಪಂದ್ಯಕ್ಕೆ ಸಾಕಷ್ಟು ಜನಪ್ರಿಯತೆಯಿದೆ. ಕುಟುಂಬದವರೆಲ್ಲರೂ ಸಂತೋಷದಿಂದ, ಉತ್ಸಾಹದಿಂದ ಆಡುವ ಹಾಕಿ ಹಬ್ಬಕ್ಕೆ 20 ವರ್ಷಗಳ ಇತಿಹಾಸವಿದ್ದು ‘ಲಿಮ್ಕಾ ಬುಕ್ ಆಫ್ ರೆಕಾರ್ಡ್’ನವರೆಗೂ ಮುಟ್ಟಿದೆ. ಏಪ್ರಿಲ್ 17ರಿಂದ ಮೇ 14ರವರೆಗೆ ನಡೆಯುತ್ತಿರುವ ಕೊಡವ ಹಾಕಿ ಹಬ್ಬದಲ್ಲಿ 306 ತಂಡಗಳು ಪ್ರಶಸ್ತಿಗಾಗಿ ಪೈಪೊಟಿಗಿಳಿದಿವೆ.
ಕಳೆದ 21 ವರ್ಷಗಳಿಂದ ನಡೆಯುತ್ತಿರುವ ಕೊಡಗಿನ ಈ ಹಾಕಿ ಉತ್ಸವ ವರ್ಷದಿಂದ ವರ್ಷಕ್ಕೆ ರಂಗೇರುತ್ತಿದೆ. ಕೊಡಗಿನ ಸಂಸ್ಕøತಿ, ಆಚಾರ- ವಿಚಾರಗಳನ್ನು ಉಳಿಸಿ ಬೆಳೆಸಬೇಕೆಂಬ ಉದ್ದೇಶದಿಂದ ಶುರುವಾದ ಕೊಡುವ ಹಾಕಿ ಹಬ್ಬದ ಅಚ್ಚುಕಟ್ಟುತನ, ಪ್ರಯೋಗಗಳು, ತಂಡಗಳ ಸಂಖ್ಯೆ, ಪ್ರತಿಷ್ಠೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಸಂಸ್ಕøತಿಯ ಪ್ರತೀಕವಾದ ಈ ಹಬ್ಬ ವಿಶ್ವ ದಾಖಲೆ ಹೊಸ್ತಿಲಲ್ಲಿದೆ. 20 ವರ್ಷ ಪೂರೈಸಿ 21ನೇ ವರ್ಷಕ್ಕೆ ಕಾಲಿರಿಸಿರುವ ಹಾಕಿ ಫೆಸ್ಟ್, ‘ಬಿದ್ದಾಟಂಡ’ ಕುಲದವರಿಂದ ಕೊಡಗು ಜಿಲ್ಲೆಯ ನಾಪೋಕ್ಲುವಿನ 3 ಮೈದಾನಗಳಲ್ಲಿ ಆರಂಭಗೊಂಡಿದ್ದು, ಕೊಡಗು ಯುವ ಪ್ರತಿಭೆಗಳನ್ನು ಪ್ರದರ್ಶಿಸುತ್ತಿದೆ. ಈಗಾಗಲೇ ಹಾಕಿ ಹಬ್ಬವನ್ನು ಆಯೋಜಿಸುತ್ತಿರುವ ಬಿದ್ದಾಟಂಡ ಕುಟುಂಬ ಪ್ರಥಮ ಸುತ್ತಿನಲ್ಲಿಯೇ ಸೋಲಿನ ಆಘಾತದೊಂದಿಗೆ ಹೊರ ಬಂದಿದೆ. ಸೋಮವಾರ ನಡೆದ ಸಬ್‍ ಜೂನಿಯರ್ ಹಾಕಿ ಚಾಂಪಿಯನ್‍ಷಿಪ್‍ನಲ್ಲಿ ಹಾಕಿ ಕೂರ್ಗ್ ತಂಡ 13.0 ಯಿಂದ ಗೆಲುವನ್ನ ಸಾಧಿಸಿದೆ. ಮೇ 14 ರಂದು ಫೈನಲ್ ಗೇಮ್ ನಡೆಯಲಿದ್ದು, ಅಂತಿಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡದ ಉತ್ತಮ ಆಟಗಾರರನ್ನು, ರಾಜ್ಯ ಮಟ್ಟದ ಪಂದ್ಯಾವಳಿಗಳಿಗೆ ತಂಡ ರಚಿಸುವಾಗ ಆಯ್ಕೆ ಮಾಡಿಕೊಳ್ಳಲಾಗುತ್ತದೆ. 
ಕೊಡವ ಹಾಕಿ ಹಬ್ಬ ಕೇವಲ ಒಂದು ಹಾಕಿ ಕ್ರೀಡಾಕೂಟವಷ್ಟೇ ಆಗಿರದೆ 1997ರ ‘ ಪಾಂಡಂಡ್ ಕಪ್’ನಿಂದ ಮೊದಲುಗೊಂಡು 2016ರ ‘ಶಾಂತೇಯಂಡ ಕಪ್’ ವರೆಗೂ ಉತ್ಸವವಾಗಿ ಮುಂದುವರೆದಿದೆ. ಈ ವರ್ಷ ಅಂದರೆ 2017ರ ‘ಬಿದ್ದಾಟಂಡ ಹಾಕಿ ನಮ್ಮೆ ಕಪ್’ ಏಪ್ರಿಲ್ 17ರಿಂದ ಮೇ ತಿಂಗಳ ವರೆಗೆ ನಡೆಯಲಿದ್ದು 306 ತಂಡಗಳು ಪ್ರಶಸ್ತಿಗಾಗಿ ಸೆಣೆಸಲಿವೆ. ಉದ್ಘಾಟನಾ ದಿನವಾದ ಏಪ್ರಿಲ್ 17 ರಂದು ಒಲಂಪಿಯನ್ ಎ.ಬಿ ಸುಬ್ಬಯ್ಯ ಅವರು ಕಾರ್ಯಕ್ರಮ ಉದ್ಘಾಟಿಸೋ ಮೂಲಕ ಸಹಸ್ರಾರು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ಹಾಕಿ ಹಬ್ಬಕ್ಕೆ ಚಾಲನೆ ನೀಡಿದರು. ಹಾಕಿ ಉತ್ಸವದ ಸಂಸ್ಥಾಪಕ ಪಾಂಡಂಡ ಕುಟ್ಟಪ್ಪಾ ಬೆಳ್ಳಿ ಹಾಕಿ ಚೆಂಡನ್ನು ಹೊಡೆಯೋ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಉದ್ಘಾಟನೆಯಲ್ಲಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಎಂಸಿ. ನಾಣಯ್ಯ, ಶಾಸಕರಾದ ಕೆ.ಜಿ. ಬೊಪಯ್ಯ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಮತ್ತು ಹಿರಿಯ ಪತ್ರಕರ್ತ ದೀಪಕ್ ತಿಮ್ಮಯ ಮತ್ತಿತರರು ಹಾಜರಿದ್ದರು.  
 

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ