ಜಡ್ಜ್‌ಗಳ ಸಂಬಳ ಎಷ್ಟು ಗೊತ್ತೇ?

salary hike for Supreme Court and High Court judges

31-01-2018

ರಾಮ್ ಜೇಠ್ಮಲಾನಿ, ಫಾಲಿ ನಾರಿಮನ್, ಹರೀಶ್ ಸಾಳ್ವೆ ಇತ್ಯಾದಿ ಹೆಸರಾಂತ ನ್ಯಾಯವಾದಿಗಳು ತಮ್ಮ ಕಕ್ಷೀದಾರರಿಂದ ಪಡೆಯುವ ಶುಲ್ಕಗಳ ಬಗ್ಗೆ ಕೇಳಿದ ಬಹುತೇಕರು ಅಬ್ಬಬ್ಬಾ ಅಷ್ಟೊಂದಾ ಎಂದು ಉದ್ಘಾರ ತೆಗೆಯುತ್ತಾರೆ. ಎಷ್ಟೋ ಜನ ಲಾಯರ್‌ಗಳು ತಮಗೆ ಜಡ್ಜ್ ಆಗುವ ಅವಕಾಶಗಳು ಬಂದಾಗ ಒಪ್ಪಿಕೊಳ್ಳದೆ ಲಾಯರ್ ಆಗಿಯೇ ಮುಂದುವರಿದಿರುವ ನಿದರ್ಶನಗಳು ಸಾಕಷ್ಟಿವೆ. ಕೋರ್ಟಿನಲ್ಲಿ ನ್ಯಾಯಮೂರ್ತಿಯಾಗಿ ದೊಡ್ಡ ಗೌರವ ಗಳಿಸಿದರೂ ಕೂಡ ಲಾಯರ್‌ಗಳಿಗೆ ಹೋಲಿಸಿದಲ್ಲಿ ನ್ಯಾಯಮೂರ್ತಿಗಳ ಸಂಬಳ ಏನೇನೂ ಅಲ್ಲ ಅನ್ನುವಂತ ಮಟ್ಟದಲ್ಲಿದ್ದದ್ದೇ ಇದಕ್ಕೆ ಕಾರಣ.

ಆದರೆ, ಇದೀಗ ಈ ವಿಚಾರ ಬದಲಾಗಿದೆ. ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟಿನ ನ್ಯಾಯಮೂರ್ತಿಗಳಿಗೆ ಹಾಲಿ ಇರುವುದಕ್ಕಿಂತ ಹೆಚ್ಚೂಕಮ್ಮಿ ಮೂರುಪಟ್ಟು ಸಂಬಳ ಏರಿಕೆ ಸಂಬಂಧದ ಮಸೂದೆಗೆ ರಾಷ್ಟ್ರಪತಿಗಳ ಸಹಿ ಬಿದ್ದಿದೆ. ಈವರೆಗೆ, ತಿಂಗಳಿಗೆ 1 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದ ಸುಪ್ರೀಂಕೋರ್ಟಿನ ಮುಖ್ಯನ್ಯಾಯಮೂರ್ತಿಗಳು, ಇನ್ನುಮುಂದೆ ತಿಂಗಳಿಗೆ 2.80 ಲಕ್ಷ ರೂಪಾಯಿ ಪಡೆಯಲಿದ್ದಾರೆ.

ಅದೇ ರೀತಿ ಸುಪ್ರೀಂ ಕೋರ್ಟಿನ ಇತರೆ ನ್ಯಾಯಮೂರ್ತಿಗಳು ಮತ್ತು ಹೈ ಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ಸಂಬಳ ಹಾಲಿ 90 ಸಾವಿರದಿಂದ 2.50 ಲಕ್ಷಕ್ಕೆ ಏರಲಿದೆ. ಸದ್ಯಕ್ಕೆ ತಿಂಗಳಿಗೆ 80 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ ಹೈಕೋರ್ಟುಗಳ ನ್ಯಾಯಮೂರ್ತಿಗಳು ಇನ್ನುಮುಂದೆ ತಿಂಗಳಿಗೆ 2.25 ಲಕ್ಷ ರೂಪಾಯಿ ಸಂಬಳ ತೆಗೆದುಕೊಳ್ಳಲಿದ್ದಾರೆ.

7ನೇ ವೇತನ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ ಈ ವೇತನ ಏರಿಕೆ ಕೈಗೊಳ್ಳಲಾಗಿದೆ. 2016ರ ಜನವರಿಯಿಂದಲೇ ಅನ್ವಯವಾಗುವಂತೆ ಜಾರಿಗೆ ಬರುವ ಈ ನಿರ್ಧಾರದಿಂದ ಸುಮಾರು 2,500 ನಿವೃತ್ತ ನ್ಯಾಯಮೂರ್ತಿಗಳಿಗೂ ಲಾಭವಾಗಲಿದೆ. ಭಾರತದ ಸುಪ್ರೀಂಕೋರ್ಟಿನಲ್ಲಿ 31 ಅಂಗೀಕೃತ ನ್ಯಾಯಮೂರ್ತಿಗಳ ಹುದ್ದೆಗಳಿವೆ ಆದರೆ, ಹಾಲಿ 25 ನ್ಯಾಯಮೂರ್ತಿಗಳಿದ್ದಾರೆ. ದೇಶದ 24 ಹೈಕೋರ್ಟುಗಳಲ್ಲಿ ಒಟ್ಟು 1079 ಜಡ್ಜ್‌ ಹುದ್ದೆಗಳಿದ್ದರೂ 678 ನ್ಯಾಯಮೂರ್ತಿಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ